ದೆಹಲಿಯ ಮನೆಯಲ್ಲಿ ನೆನಪಿನ ಪುಟ ತೆರೆದ ಜಗ್ಗೇಶ್; ಫೋಟೋ ಹಿಂದಿದೆ ಬದುಕಿನ ಕಥೆ
ನಟ ಜಗ್ಗೇಶ್ ಅವರು ಚಿತ್ರರಂಗದಲ್ಲಿ ಮಾಡಿದ ಸಾಧನೆ ಅಪಾರ. ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದ ಜಗ್ಗೇಶ್ ಅವರಿಗೆ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಬೇಕು ಎಂಬ ಹಂಬಲ ಇತ್ತು. ಅದಕ್ಕೆ ಎದುರಾದ ಸವಾಲುಗಳು ಹಲವು. ಅವುಗಳ ಬಗ್ಗೆ ಜಗ್ಗೇಶ್ ಈಗ ಪೋಸ್ಟ್ ಮಾಡಿದ್ದಾರೆ.
‘ನವರಸ ನಾಯಕ’ ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾ ಬಳಕೆಯಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಅಭಿಮಾನಿಗಳಿಗೆ ಈ ಮೂಲಕ ಅವರು ಅನೇಕ ವಿಚಾರಗಳನ್ನು ತಿಳಿಸುತ್ತಾರೆ. ಈಗ ಜಗ್ಗೇಶ್ ಅವರು ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಆ ಮೂಲಕ ಅವರು ನೆನಪಿನ ಪುಟ ತೆರೆದಿದ್ದಾರೆ. ರಾಜಕೀಯದ ಕೆಲಸಗಳ ನಿಮಿತ್ತ ದೆಹಲಿಗೆ ತೆರಳಿರುವ ಜಗ್ಗೇಶ್, ಅಲ್ಲಿನ ನಿವಾಸದಲ್ಲಿ ಕುಳಿತು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರ ಈ ಬರಹ ಅನೇಕರಿಗೆ ಸ್ಫೂರ್ತಿ ನೀಡುವಂತಿದೆ.
‘1987, ಆಗ 24 ವರ್ಷ ಪ್ರಾಯ. 18 ವರ್ಷದ ಮಡದಿ ಪರಿಮಳ, 6 ತಿಂಗಳ ಮಗು ಗುರುರಾಜ. 15×10 ಮನೆ. 500 ರೂಪಾಯಿ ಬಾಡಿಗೆ. ಮನೆಯ ಕರ್ಚು 250 ರೂಪಾಯಿ. ಧರಿಸಲು ಎರಡು ಜೀನ್ಸ್ ಪ್ಯಾಂಟ್, ನಾಲ್ಕು ಶರ್ಟ್. ಇಂಥ ಸ್ಥಿತಿಯಲ್ಲಿ ಗೆದ್ದೇ ಗೆಲ್ಲುತ್ತೇನೆ ಒಂದು ದಿನ ಎನ್ನುವ ಛಲ. ಮನಸ್ಸನ್ನು ರೇಸು ಕುದುರೆಯ ಹಾಗೆ ತಯಾರು ಮಾಡಿ, ಕೆಲಸಕ್ಕೆ ಬಾರದ ಯಾವ ಚಿಂತೆಯನ್ನೂ ಮಾಡದೇ, ಸ್ನಾನ-ಪೂಜೆ ಮುಗಿಸಿ, ಇದ್ದಿದ್ದನ್ನು ತಿಂದುಕೊಂಡು ಕೆಲಸ ಹುಡುಕಿ ಗಾಂಧಿನಗರ ಅಲೆಯುವ ಕಾಯಕ.’
View this post on Instagram
‘ಅಂದಿನ ಕೆಲವು ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ನನ್ನ ಮೇಲೆ ಕರುಣೆಯಿತ್ತು. ಅನ್ನ ಹಾಕಿ ಉತ್ಸಾಹ ತುಂಬಿದರು. ಅನೇಕರು ಅಪಮಾನ ಮಾಡಿ, ಸಿನಿಮಾ ಬಿಟ್ಟು ಕೂಲಿ ಮಾಡು ಎಂದು ಅಟ್ಟುತ್ತಿದ್ದರು! ಆಗ ನನಗೆ ಒಬ್ಬ ಗುರು ಸಿಕ್ಕರು. ಅವರೇ ಕಲಿಯುಗ ಕಲ್ಪತರು ರಾಯರು. ಅವರ ಹಾರೈಕೆಯಿಂದ ನಾನು ಹೇಗೆ ಬೆಳೆದೆ ಎಂಬ ಅರಿವು ಇಲ್ಲ.’
ಇದನ್ನೂ ಓದಿ: ರಾಯರು ಸನ್ಯಾಸ ಸ್ವೀಕರಿಸಿದ ಜಾಗ ತೋರಿಸಿದ ಜಗ್ಗೇಶ್
‘ಮನಸ್ಸಿನ ಬೇಡಿಕೆ ಹೇಗೆ ಈಡೇರಿತು ಅರಿವಿಲ್ಲ. ಅಂದಿನ 24 ವರ್ಷದವನು, ಇಂದು 62 ವರ್ಷವಾಗಿದೆ. ಶ್ರೀಕೃಷ್ಣ ಎಲ್ಲ ಮನುಕುಲಕ್ಕೆ ಒಂದು ಮಾತು ಕೊಟ್ಟಿದ್ದಾನೆ. ಶ್ರದ್ಧಾವಾನ್ ಲಭತೆ ಜ್ಞಾನಂ. ಅರ್ಥಾತ್ ಸುಂದರವಾಗಿ ಚಿಂತಿಸಿ ಬಾಳು, ಮಿಕ್ಕದ್ದು ನನಗೆ ಬಿಡು ಎಂಬುದು ಅರ್ಥ. ಜ್ಞಾನ ಕಲಿಸಿದ ಅಮ್ಮ, ಬದುಕು ಕಲಿಸಿದ ಅಪ್ಪ, ನನ್ನ ಸುಖ-ದುಃಖಕ್ಕೆ ಜೊತೆಗಾತಿಯಾದ ಪರಿಮಳಾ. ಅನ್ನ ನೀಡಿದ ಚಿತ್ರರಂಗಕ್ಕೆ ಶರಣು. ಮಿತ್ರರೇ, ಶುದ್ಧರಾಗಿ ಶ್ರಮಿಸಿ ಗೆದ್ದ ಮನುಷ್ಯರಾಗಿ. ನನ್ನ ಬದುಕಿನ ನೆನಪಿನ ಅಂಗಳ. ದೆಹಲಿಯ ಮನೆಯಲ್ಲಿ ಒಬ್ಬನೇ ಕುಳಿತಾಗ ನೋಡಿ ಮರೆತ. ಚಿತ್ರದಂತೆ ನೆನಪಾಯಿತು ನನ್ನ ಬದುಕು. ಶುಭ ಮಂಗಳವಾರ’ ಎಂದು ಜಗ್ಗೇಶ್ ಅವರು ಬರಹ ಪೂರ್ಣಗೊಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:50 pm, Tue, 10 December 24