AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳ ಕೊರಳಿಗೆ ಹುಲಿ ಉಗುರಿನ ಸರ ಹಾಕಿದ್ದರೇ ನಟಿ ಅಮೂಲ್ಯ: ನಟಿ ಕೊಟ್ಟರು ಸ್ಪಷ್ಟನೆ

Amulya: ನಟಿ ಅಮೂಲ್ಯ ತಮ್ಮ ಮಕ್ಕಳಿಗೆ ಹುಲಿ ಉಗುರಿನ ಪೆಂಡೆಂಟ್ ಹಾಕಿದ್ದಾರೆ ಎಂದು ಹೇಳಲಾಗಿದ್ದು, ಅದಕ್ಕೆ ಸಂಬಂಧಿಸಿದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸ್ವತಃ ಅಮೂಲ್ಯ ಸ್ಪಷ್ಟನೆ ನೀಡಿದ್ದಾರೆ.

ಮಕ್ಕಳ ಕೊರಳಿಗೆ ಹುಲಿ ಉಗುರಿನ ಸರ ಹಾಕಿದ್ದರೇ ನಟಿ ಅಮೂಲ್ಯ: ನಟಿ ಕೊಟ್ಟರು ಸ್ಪಷ್ಟನೆ
ಅಮೂಲ್ಯ
ಮಂಜುನಾಥ ಸಿ.
|

Updated on:Oct 27, 2023 | 5:58 PM

Share

ಹುಲಿ ಉಗುರಿನ ಪೆಂಡೆಂಟ್ ರಾಜ್ಯದಲ್ಲಿ ಹಲ್​ಚಲ್ ಎಬ್ಬಿಸಿದೆ. ಬಿಗ್​ಬಾಸ್ ಸ್ಪರ್ಧಿ ವರ್ತೂರು ಸಂತೋಷ್ (Varthur Santhosh)​ ಹುಲಿ ಉಗುರು ಧರಿಸಿದ್ದರೆಂಬ ಕಾರಣಕ್ಕೆ ಅವರನ್ನು ಬಿಗ್​ಬಾಸ್ ಮನೆಯಿಂದಲೇ ಬಂಧಿಸಿ ಕರೆದೊಯ್ದ ಬಳಿಕ, ಹುಲಿ ಉಗುರು ಧರಿಸಿರುವ ಸೆಲೆಬ್ರಿಟಿಗಳ ಹೆಸರುಗಳೆಲ್ಲ ಮುನ್ನಲೆಗೆ ಬಂದಿವೆ. ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ವಿನಯ್ ಗುರೂಜಿ ಇನ್ನೂ ಹಲವರಿಗೆ ನೊಟೀಸ್ ನೀಡಿ ಪರಿಶೀಲನೆ ಮಾಡಲಾಗಿದೆ. ಇದರ ನಡುವೆ ನಟಿ ಅಮೂಲ್ಯ ಸಹ ತಮ್ಮ ಇಬ್ಬರು ಮಕ್ಕಳ ಕೊರಳಿಗೆ ಹುಲಿ ಉಗುರಿನ ಸರಗಳನ್ನು ಹಾಕಿದ್ದರು ಎನ್ನಲಾಗುತ್ತಿದ್ದು, ಅದಕ್ಕೆ ಸಂಬಂಧಿಸಿದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಸ್ವತಃ ಅಮೂಲ್ಯ ಅವರು ಸ್ಪಷ್ಟನೆ ನೀಡಿದ್ದಾರೆ.

ಟಿವಿ9 ಜೊತೆ ಮಾತನಾಡಿರುವ ನಟಿ ಅಮೂಲ್ಯ, ತಮ್ಮ ಮಕ್ಕಳ ಕೊರಳಿಗೆ ಹಾಕಿರುವುದು ನಿಜವಾದ ಹುಲಿ ಉಗುರಲ್ಲ, ಅದು ಸಿಂಥೆಟಿಕ್ ಪದಾರ್ಥ್ ಮಾಡಿದಂಥಹಾ ಸರ. ನಾನು ಮೊದಲು ಅದು ನಿಜವಾದ ಹುಲಿ ಉಗುರು ಎಂದುಕೊಂಡಿದ್ದು ಆದರೆ ಅಲ್ಲ. ಕೇವಲ 400-500 ರೂಪಾಯಿಗಳಿಗೆಲ್ಲ ಆ ಸಿಂಥೆಟಿಕ್ ಉಗುರು ಸಿಗುತ್ತದೆ, ನಮ್ಮ ಮಕ್ಕಳ ಕೊರಳಲ್ಲಿ ಇದ್ದದ್ದು ಸಹ ಅದೇ ಸಿಂಥೆಟಿಕ್ ಉಗುರು ಅಷ್ಟೆ. ಇಚ್ಛಿಸಿದರೆ ಅರಣ್ಯ ಇಲಾಖೆಯವರು ಪರಿಶೀಲನೆ ನಡೆಸಲು ಅಡ್ಡಿಯಿಲ್ಲ” ಎಂದಿದ್ದಾರೆ.

”ಮಕ್ಕಳಿಗೆ ನನ್ನ ಅಮ್ಮ ಏನಾದರೂ ಕೊಡಬೇಕಿತ್ತು, ಅವರು ಸರಗಳನ್ನು ನೀಡಿದರು. ಆದರೆ ಆ ಡಿಸೈನ್ ಅನ್ನು ನಾನೇ ಸೆಲೆಕ್ಟ್ ಮಾಡಿದ್ದೆ. ನಾನು ಹಿಂದೆ ಎಲ್ಲಿಯೋ ಆ ಡಿಸೈನ್ ನೋಡಿ ಫೋಟೊ ತೆಗೆದುಕೊಂಡು ಇಟ್ಟುಕೊಂಡಿದ್ದೆ. ಬಳಿಕ ಅದೇ ಮಾದರಿಯ ಸರಗಳನ್ನು ಮಾಡಿಸಿದೆವು. ಅಂಗಡಿಯಿಂದ ಬಿಲ್ ಬಂದಾಗಲೇ ನನಗೆ ಅದು ಸಿಂಥೆಟಿಕ್ ಎಂದು ಗೊತ್ತಾಗಿದ್ದು. ಅದಕ್ಕೆ ಮುನ್ನ ಅದು ಹುಲಿಯದ್ದೇ ಉಗುರಿರಬಹುದು ಎಂದುಕೊಂಡಿದ್ದೆ” ಎಂದು ತಮಾಷೆಯಾಗಿ ಹೇಳಿದ್ದಾರೆ ಅಮೂಲ್ಯ.

ಇದನ್ನೂ ಓದಿ:ಹುಲಿ ಉಗರು ಪ್ರಕರಣ; ವ್ಯಕ್ತಿಯೊಬ್ಬನಿಂದ ವಶಪಡಿಸಿಕೊಂಡ ಪೆಂಡೆಂಟ್ ಅಸಲಿ ಹುಲಿ ಉಗುರು ಅಂತ ಖಾತ್ರಿಯಾದರೆ ಮಾತ್ರ ಕೂಡಲೇ ಬಂಧಿಸಲಾಗುವುದು: ಅರಣ್ಯಾಧಿಕಾರಿ

”ಹಿಂದೆಲ್ಲ ಹುಲಿ ಉಗುರು ಧರಿಸುವುದು ಪೌರುಷದ ಸಂಖೇತದಂತೆ ಭಾವಿಸಲಾಗುತ್ತಿತ್ತು. ಆಗೆಲ್ಲ ಹುಲಿಗಳ ಸಂಖ್ಯೆ ಹೆಚ್ಚಿತ್ತು, ಭೇಟೆ ಆಡುತ್ತಿದ್ದರು. ಆದರೆ ಈಗೆಲ್ಲ ಅದು ಸಾಧ್ಯವಿಲ್ಲ, ಕಾನೂನುಗಳು ಬದಲಾಗಿವೆ. ಹುಲಿ ಉಗುರನ್ನು ಅನಧಿಕೃತವಾಗಿ ಖರೀದಿಸಬೇಕೆಂದರೂ ಲಕ್ಷಾಂತರ ಖರ್ಚಾಗಬಹುದೋ ಏನೋ ಗೊತ್ತಿಲ್ಲ. ನನಗೆ ಅವಳಿ ಮಕ್ಕಳು ನಾನು ಅಲ್ಲಿಗೆ ನಾಲ್ಕು ಉಗುರು ಖರೀದಿಸಬೇಕಾಗುತ್ತದೆ. ಅಷ್ಟೋಂದು ಹಣ ಸಹ ಇಲ್ಲ” ಎಂದು ನಗುತ್ತಲೇ ಹೇಳಿದ್ದಾರೆ ಅಮೂಲ್ಯ.

ಹುಲಿ ಉಗುರಿನ ಸುದ್ದಿ ಹರಿದಾಡಿದಾಗ ನನಗೆ ಆಶ್ಚರ್ಯವಾಯಿತು. ಇದು ಬಹಳ ಸರಳವಾದ ವಿಷಯ ಅಂದುಕೊಂಡಿದ್ದೆವು ಆದರೆ ಅದರ ಗಂಭೀರತೆ ಈಗ ತಿಳಿದು ಬರುತ್ತಿದೆ. ನನ್ನ ಮಕ್ಕಳಿಗೆ ಹಾಕಿದ್ದು ಸಿಂಥೆಟಿಕ್ ಎಂದು ನನಗೆ ಮೊದಲೇ ಗೊತ್ತಿದ್ದ ಕಾರಣ ನನಗೆ ಗಾಬರಿ ಆಗಲಿಲ್ಲ. ಈಗಲೂ ಆ ಸರ ನನ್ನ ಬಳಿ ಇದೆ, ಅಧಿಕಾರಿಗಳು ಬಂದರೆ ಖಂಡಿತ ನೀಡುತ್ತೇನೆ ಎಂದಿದ್ದಾರೆ ಅಮೂಲ್ಯ.

ಬಿಗ್​ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗಿದ್ದ ವರ್ತೂರು ಸಂತೋಷ್ ಕಳೆದ ವಾರಾಂತ್ಯದ ಶೋನಲ್ಲಿ ಹುಲಿ ಉಗುರಿನ ಸರವನ್ನು ಕೊರಳಿಗೆ ಹಾಕಿಕೊಂಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ವರ್ತೂರು ಸಂತೋಷ್ ವಿರುದ್ಧ ದೂರು ದಾಖಲಿಸಿಕೊಂಡು ರಾತ್ರೋರಾತ್ರಿ ಬಿಗ್​ಬಾಸ್ ಮನೆಯಿಂದ ಅವರನ್ನು ಬಂಧಿಸಿ ಕರೆದೊಯ್ದಿದ್ದರು. ಇಂದು (ಅಕ್ಟೋಬರ್ 27) ವರ್ತೂರು ಸಂತೋಷ್ ಅವರಿಗೆ ಜಾಮೀನು ದೊರೆತು ಬಿಡುಗಡೆ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:55 pm, Fri, 27 October 23