ಪುನೀತ್ ರಾಜ್ಕುಮಾರ್ ಎರಡನೇ ಪುಣ್ಯ ಸ್ಮರಣೆ, ಭರದಿಂದ ನಡೆದಿದೆ ತಯಾರಿ
Puneeth Rajkumar: ಪುನೀತ್ ರಾಜ್ಕುಮಾರ್ ಅವರು ಇಹಲೋಕ ತ್ಯಜಿಸಿ ನಾಳೆ (ಅಕ್ಟೋಬರ್ 28) ಕ್ಕೆ ಎರಡು ವರ್ಷಗಳಾಗಲಿವೆ. ಪುನೀತ್ ಅವರ ಪುಣ್ಯಭೂಮಿಯ ಬಳಿ ತಾತ್ಕಾಲಿಕ ಸ್ಮಾರಕವನ್ನು ಕುಟುಂಬದವರು ನಿರ್ಮಿಸುತ್ತಿದ್ದಾರೆ.
ಅಕ್ಟೋಬರ್ 29ಕ್ಕೆ ಪುನೀತ್ ರಾಜ್ಕುಮಾರ್ (Puneeth Rajkumar) ಇಹಲೋಕ ತ್ಯಜಿಸಿ ಎರಡು ವರ್ಷಗಳಾಗುತ್ತವೆ. ಅವರ ಅಂತ್ಯಕ್ರಿಯೆಯನ್ನು ಕಂಠೀರವ ಸ್ಟುಡಿಯೋನಲ್ಲಿ ನಡೆಸಲಾಗಿದೆ. ಸರ್ಕಾರವು ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡಿರುವ ಜೊತೆಗೆ ಸ್ಮಾರಕ ನಿರ್ಮಾಣದ ಭರವಸೆಯನ್ನೂ ನೀಡಿದೆ. ಇದರ ನಡುವೆ ದೊಡ್ಮನೆ ಕುಟುಂಬದವರು ಸಮಾಧಿ ನಿರ್ಮಾಣ ಮಾಡುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಅವರ ಪುಣ್ಯ ಭೂಮಿಯ ಸುತ್ತಲೂ ಮಾರ್ಬಲ್ಸ್ ಕಲ್ಲುಗಳನ್ನು ಹಾಕಿ ಸಮಾಧಿ ನಿರ್ಮಿಸಲಾಗುತ್ತಿದೆ. ಸಾದಹಳ್ಳಿ ಕಲ್ಲಿನ ಚಪ್ಪಡಿಗಳನ್ನು, ಗ್ರಾನೈಟ್ಗಳನ್ನು ಬಳಸಿ ಸಮಾಧಿ ನಿರ್ಮಿಸಲಾಗಿದೆ. ದೊಡ್ಡದಾಗಿಯೇ ಸಮಾಧಿ ನಿರ್ಮಾಣ ಮಾಡಲಾಗಿದ್ದು, ಸಮಾಧಿ ನಿರ್ಮಾಣದ ಅಂತಿಮ ಹಂತದ ಕೆಲಸಗಳು ಕಂಠೀರವ ಸ್ಟುಡಿಯೋನಲ್ಲಿ ನಡೆಯುತ್ತಿವೆ.
ಸಮಾಧಿ ನಿರ್ಮಾಣ ಕಾಮಗಾರಿ ಚಾಲ್ತಿಯಲ್ಲಿದ್ದ ಕಾರಣ ಶನಿವಾರದಂದು ಸಾರ್ವಜನಿಕರಿಗೆ ಕಂಠೀರವ ಸ್ಟುಡಿಯೋ ಪ್ರವೇಶ ನಿರಾಕರಿಸಲಾಗಿತ್ತು. ಶನಿವಾರ ಸಂಜೆ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು ಆ ಬಳಿಕ ಸಾರ್ವಜನಿಕರಿಗೆ ಪ್ರವೇಶ ಇರಲಿದೆ. ಇಂದು ಕಂಠೀರವ ಸ್ಟುಡಿಯೋದ ಅಲಂಕಾರ ಪ್ರಾರಂಭವಾಗಿದ್ದು ದೀಪಾಲಂಕಾರ, ಹೂಗಳಿಂದ ಸಮಾಧಿಯನ್ನು ಸಿಂಗರಿಸುವ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ:ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬವನ್ನು ಸ್ಪೂರ್ತಿ ದಿನವಾಗಿ ಆಚರಣೆ: ಸಿದ್ದರಾಮಯ್ಯ
ನಾಳೆ ದೊಡ್ಮನೆ ಕುಟುಂಬದವರು ಕಂಠೀರವ ಸ್ಟುಡಿಯೋಕ್ಕೆ ಆಗಮಿಸಿ ಪುನೀತ್ ರಾಜ್ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ನಾಳೆ ದಿನಪೂರ್ತಿ ಅನ್ನಸಂತರ್ಪಣೆ ಸಹ ಆಯೋಜನೆ ಮಾಡಲಾಗಿದೆ. ಜೊತೆಗೆ ನೇತ್ರದಾನ, ರಕ್ತದಾನ ಶಿಬಿರಗಳನ್ನು ಸಹ ಆಯೋಜನೆ ಮಾಡಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನಾಳೆ ಕಂಠೀರವ ಸ್ಟುಡಿಯೋಕ್ಕೆ ಭೇಟಿ ನೀಡಲಿದ್ದಾರೆ.
ಇಂದು ನಟ ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಅವರ ಕುಟುಂಬ ಸದಸ್ಯರು ಅಪ್ಪು ಸಮಾಧಿಗೆ ಭೇಟಿ ನೀಡಿದ್ದರು. ಪ್ರೇಮ್ ಪುತ್ರಿ ಅಮೃತಾ ಅವರ ಮೊದಲ ಸಿನಿಮಾ ‘ಟಗರು ಪಲ್ಯ’ ಬಿಡುಗಡೆ ಆಗಿದ್ದು ಮೊದಲ ಸಿನಿಮಾದಲ್ಲಿಯೇ ಅಮೃತಾ ಗಮನ ಸೆಳೆದಿದ್ದಾರೆ. ಇದೇ ಕಾರಣಕ್ಕೆ ಪ್ರೇಮ್ ಕುಟುಂಬ ಅಪ್ಪು ಹಾಗೂ ಅಣ್ಣಾವ್ರ ಸಮಾಧಿಗೆ ಭೇಟಿ ನೀಡಿದೆ ಎನ್ನಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:01 pm, Sat, 28 October 23