ಆತ್ಮಹತ್ಯೆಗೂ ಮುನ್ನ ಜಯಶ್ರೀ ಪಶ್ಚಾತಾಪದ ನುಡಿ.. ಡೆತ್ ​ನೋಟ್​ನಲ್ಲಿ ಬರೆದಿಟ್ಟಿದ್ದಾರೆ ಅಸಲಿ ಸತ್ಯ

ಬಿಗ್ ಬಾಸ್ ತಾರೆ, ಚಂದನವನದಲ್ಲಿ ಅರಳುತ್ತಿದ್ದ ಮೊಗ್ಗು ಮುದುಡಿ ಹೋಗಿದೆ. ಸಾವಿಗೂ ಮುನ್ನ ತನ್ನ ಸೋದರ ಮಾವ ಗಿರೀಶ್ ಮೇಲೆ ಸಾಕಷ್ಟು ಆರೋಪಗಳ ಸುರಿಮಳೆಗೈದಿದ್ದ, ನಟಿ ಕೊನೆ ದಿನಗಳಲ್ಲಿ ಪಶ್ಚಾತಾಪದ ನುಡಿಗಳನ್ನ ಆಡಿದ್ದಾರೆ. ಅಷ್ಟಕ್ಕೂ ಆ ನಟಿ ಹೇಳಿರೋದೇನು ಇಲ್ಲಿದೆ ಡಿಟೇಲ್ಸ್.

ಆತ್ಮಹತ್ಯೆಗೂ ಮುನ್ನ ಜಯಶ್ರೀ ಪಶ್ಚಾತಾಪದ ನುಡಿ.. ಡೆತ್ ​ನೋಟ್​ನಲ್ಲಿ ಬರೆದಿಟ್ಟಿದ್ದಾರೆ ಅಸಲಿ ಸತ್ಯ
ಜಯಶ್ರೀ ರಾಮಯ್ಯ
Follow us
ಆಯೇಷಾ ಬಾನು
|

Updated on: Jan 27, 2021 | 7:50 AM

ನೆಲಮಂಗಲ: ಬಿಗ್ ಬಾಸ್ ಸೀಸನ್ 3 ರಲ್ಲಿ ಸ್ಪರ್ಧಿಯಾಗಿ ರಾಜ್ಯದ ಮನೆ ಮನೆಗಳಲ್ಲಿ ಹೆಸರುವಾಸಿಯಾಗಿದ್ದ ಚೆಲುವೆ ಜಯಶ್ರೀ ರಾಮಯ್ಯ, ಕೆಲ ಸಿನಿಮಾಗಳಲ್ಲೂ ಮಿಂಚಿದ್ದರು. ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದ್ದ ಈ ತಾರೆ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡು, ಈ ಲೋಕದಿಂದಲೇ ಕಣ್ಮರೆಯಾಗಿದ್ದಾರೆ. ಹೀಗೆ ಕಣ್ಮರೆಯಾಗೋಕು ಮುನ್ನ ಡೆತ್​ನೋಟ್ ಬರೆದಿಟ್ಟಿದ್ದು. ಅದ್ರಲ್ಲಿ ಹಲವು ವಿಚಾರಗಳನ್ನ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ತನ್ನ ಮಾವನ ಕುರಿತು ತಾನು ಮಾಡಿದ್ದ ಆರೋಪಗಳೇ ಸುಳ್ಳು ಅಂತಾ ಹೇಳಿದ್ದಾರೆ.

ಆಸ್ತಿ ವಿಚಾರಕ್ಕೆ ಸೋದರ ಮಾವನ ಜೊತೆ ಜಯಶ್ರೀ ಜಗಳ! ಬೆಂಗಳೂರಿನ ಹನುಮಂತನಗರದಲ್ಲಿರುವ ಆಸ್ತಿ ವಿಚಾರದಲ್ಲಿ ಜಯಶ್ರೀ ತಾಯಿ ಹಾಗೂ ಮಾವ ಗಿರೀಶ್ ನಡುವೆ ಸಣ್ಣ ಆಸ್ತಿ ವಿವಾದ ಏರ್ಪಟ್ಟಿತ್ತು. ವಿವಾದದ ಬೆನ್ನಲ್ಲೇ ಜಯಶ್ರೀ ತನ್ನ ಮಾವ ಗಿರೀಶ್ ವಿರುದ್ಧ ಸಾಕಷ್ಟು ಆರೋಪ ಮಾಡಿದ್ರು. ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸ್ತಾರೆ. ನನ್ನ ಉಡುಪುಗಳ ಬಗ್ಗೆ ಕಮೆಂಟ್ ಮಾಡ್ತಾರೆ. ನನ್ನನ್ನ ಹತೋಟಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನ ಮಾಡ್ತಿದ್ದಾರೆ ಅಂತಾ ಮಾಧ್ಯಮಗಳ‌ ಎದುರು ಹೇಳಿಕೊಂಡಿದ್ರು. ಜೊತೆಗೆ ಮಾವನ ವಿರುದ್ಧು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು.

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಜಯಶ್ರೀ ಕಳೆದ ಕೆಲ ದಿನಗಳ ಹಿಂದೆ ಈ ಸಮಾಜದಲ್ಲಿ ನಮಗೆ ಬದುಕಲು ಆಗುತ್ತಿಲ್ಲ. ನನಗೆ ದಯಾಮರಣ ಬೇಕು ಅಂತಾ ಸಾಮಾಜಿಕ ಜಾಲ ತಾಣಗಳಲ್ಲಿ ಹೇಳಿಕೊಂಡಿದ್ರು. ಇದನ್ನ ನೋಡಿದ ಕಿಚ್ಚ ಸುದೀಪ್ ಖಿನ್ನತೆಗೆ ಒಳಗಾಗಿದ್ದ ಜಯಶ್ರೀಗೆ ಆತ್ಮಸ್ಥೈರ್ಯ ತುಂಬೋ ಕೆಲಸ ಮಾಡಿದ್ರು. ಜಯಶ್ರೀ ಚಿಕಿತ್ಸೆ ಪಡೆಯಲು ಕಡಬಗೆರೆಯಲ್ಲಿರುವ ಸಂಧ್ಯಾ ಕಿರಣ ಪುನರ್ವಸತಿ ಕೇಂದ್ರ ಸೇರಿದ್ರು. ಜಯಶ್ರೀ ಮಾತ್ರವಲ್ಲ ಆಕೆ ತಾಯಿ ಕೂಡ ಖಿನ್ನತೆಯಿಂದ ಮತ್ತೊಂದು ಪುನರ್ವಸತಿ ಕೇಂದ್ರದಲ್ಲಿ ‍ಚಿಕಿತ್ಸೆ ಪಡೆಯುತ್ತಿದ್ರು. ಆದ್ರೆ, ಜನವರಿ 25ರಂದು ಜಯಶ್ರೀ ಸಾವಿನ ಮನೆ ಬಾಗಿಲು ತಟ್ಟಿದ್ದು, ಪುನರ್ವಸತಿ ಕೇಂದ್ರದಲ್ಲೆ ಆತ್ಮಹತ್ಯೆ ಮಾಡಿಕೊಂಡಿದ್ರು. ಇದಕ್ಕೂ ಮುನ್ನ ಡೆತ್ ​ನೋಟ್ ಬರೆದಿಟ್ಟಿದ್ದು, ಅದ್ರಲ್ಲಿ ಏನು ಹೇಳಿದ್ದಾರೆ ಅನ್ನೋದನ್ನ ಇಲ್ಲಿ ಓದಿ.

ನಾನು ಜಯಶ್ರೀ. ನಾನು ಚಿಕ್ಕಂದಿನಿಂದಲೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೆ. ನನ್ನ ಕುಟುಂಬವನ್ನ ಅರ್ಥ ಮಾಡಿಕೊಳ್ಳಲು ನನಗೆ ಸಾಧ್ಯವಾಗಲೇ ಇಲ್ಲ. ನನ್ನ ಮಾವ ಬಹಳ ಹಿಂದಿನಿಂದಲೂ ಈ ಕುರಿತು ನನಗೆ ಸಲಹೆ ನೀಡುತ್ತಲೇ ಬಂದಿದ್ದರು. ಹೀಗಾಗಿ ನಮ್ಮ ಮಾವನಿಗೆ ಬಹಳ ಕಷ್ಟ ಕೊಟ್ಟಿದ್ದೇನೆ. ಇದರಿಂದ ಕೋಪಗೊಂಡು, ನಮ್ಮ ಸಮಸ್ಯೆಗಳಿಗೆ ನಮ್ಮ ಮಾವನೇ ಕಾರಣ ಎಂದು ಮಾಧ್ಯಮಗಳಲ್ಲಿ ಹೇಳಿದ್ದೆ. ನಮ್ಮ ಮಾವನ ಮರ್ಯಾದೆಯನ್ನು ಹಾಳು ಮಾಡಿದ್ದಕ್ಕೆ ನನ್ನನ್ನು ನಾನು ದೂಷಿಸುತ್ತಿದ್ದೇನೆ. ನನ್ನ ಯಾವುದೇ ಸಮಸ್ಯೆಗಳಿಗೆ ನಮ್ಮ ಮಾವ ಎಂದೂ ಕಾರಣವಾಗಿರಲಿಲ್ಲ. ಮುಂದೆಂದೂ ನಾನು ಯಾರಿಗೂ ತೊಂದರೆ ನೀಡುವುದಿಲ್ಲ. ಉತ್ತಮವಾಗಿ ಬದುಕಲು ಇದು ಕೊನೆಯ ಅವಕಾಶ ಎಂದು ಭಾವಿಸುತ್ತೇನೆ. ನಮ್ಮ ಮಾವ ಮಾನಸಿಕ ಖಿನ್ನತೆಯಿಂದ ನಾನು ಹೊರ ಬರಲು ಸಾಧ್ಯವಾದಷ್ಟು ಸಹಾಯ ಮಾಡಿದ್ದಾರೆ. ನಾನು ಕೋಪಗೊಂಡು, ಜಿಗುಪ್ಸೆಯಿಂದ ಮತ್ತು ಅತಿಯಾಗಿ ಯೋಚನೆ ಮಾಡಿದ ಕಾರಣ ನಮ್ಮ ಮಾವನ ವಿರುದ್ಧ ಮಾಧ್ಯಮಗಳಲ್ಲಿ ಸುಳ್ಳು ಹೇಳಿದ್ದೇನೆ. ನನ್ನ ಅಭಿವೃದ್ಧಿ ಮತ್ತು ಅಧಃಪತನ ಎರಡಕ್ಕೂ ನಾನೇ ಕಾರಣ, ನನ್ನನ್ನು ಕ್ಷಮಿಸಿ. ಜಯಶ್ರೀ ಗೌಡ. ಆರ್

ಒಟ್ಟಾರೆ ಚಂದನವನದಲ್ಲಿ ಬಾಳಿ ಬದುಕಬೇಕಿದ್ದ ಚಲುವೆಯ ಬದುಕು ಬೆಳಗುವ ಮುನ್ನವೇ ಆರಿ ಹೋಗಿದೆ. ಇದೇನೆ ಇರಲಿ ಸವಾಲುಗಳನ್ನ ಎದುರಿಸುವ ಬದಲು ಜೀವವನ್ನೇ ಕಳೆದುಕೊಂಡಿದ್ದು ಮಾತ್ರ ವಿಪರ್ಯಾಸವೇ ಸರಿ.

‘5ನೇ ವಯಸ್ಸಿನಲ್ಲೇ ರೇಪ್​ ಆಗಿತ್ತು.. ನನ್ನನ್ನು ಹೆಣ್ಣುಮಕ್ಕಳೂ ಬಿಟ್ಟಿರಲಿಲ್ಲಮ್ಮಾ..’: ಜಯಶ್ರೀ ರಾಮಯ್ಯ ಅಂತರಾಳದ ನೋವು ರೇಖಾರಾಣಿ ಮಾತಿನಲ್ಲಿ