ಒಂದೇ ಬೇರಿನ ಕವಲು ನಾವು, ಶ್ರೇಷ್ಠತೆಗೆ ಬಡಿದಾಡುವುದು ಬೇಡ: ರಮ್ಯಾ
Kamal Haasan: ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಕಮಲ್ ಹಾಸನ್ ಕ್ಷಮೆ ಕೇಳದ ಹೊರತು ಅವರ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದಿದೆ ಫಿಲಂ ಚೇಂಬರ್. ಈ ನಡುವೆ ನಟಿ ಮತ್ತು ಮಾಜಿ ಸಂಸದೆ ರಮ್ಯಾ ಅವರು ಕಮಲ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಮಲ್ ಹಾಸನ್ (Kamal Haasan) ಅವರು ಕನ್ನಡ ಭಾಷೆಯ ಉಗಮದ ಬಗ್ಗೆ ಆಡಿರುವ ಮಾತುಗಳು ರಾಜ್ಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿವೆ. ‘ಥಗ್ ಲೈಫ್’ ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕಮಲ್ ಹಾಸನ್, ‘ತಮಿಳಿನಿಂದಲೇ ಕನ್ನಡದ ಜನನವಾಗಿದೆ’ ಎಂದರು. ಕಮಲ್ ಅವರ ಹೇಳಿಕೆಗೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಹಲವು ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಹಾಗೂ ಕನ್ನಡ ಪರ ಸಂಘಟನೆಗಳು ಕಮಲ್ ಹಾಸನ್ ಅವರ ಹೇಳಿಕೆಯನ್ನು ವಿರೋಧಿಸಿವೆ. ಇದೀಗ ನಟಿ, ಮಾಜಿ ಸಂಸದೆ ರಮ್ಯಾ ಅವರು ಕಮಲ್ ಹಾಸನ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ ರಮ್ಯಾ, ಡ್ರಾವಿಡ ಭಾಷೆಗಳ ಉಗಮದ ಚಾರ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ರಮ್ಯಾ ಹಂಚಿಕೊಂಡಿರುವ ಕೋಷ್ಠಕದ ಪ್ರಕಾರ ದ್ರಾವಿಡ ಭಾಷೆಯ ಮೂಲಕವೇ ತಮಿಳು, ಕನ್ನಡ, ತೆಲುಗು ಹಾಗೂ ಮಲಯಾಳಂ ಸೇರಿದಂತೆ ಇನ್ನೂ ಅನೇಕ ಉಪ ಭಾಷೆಗಳ ಉಗಮವಾಗಿದೆ.
ಚಾರ್ಟ್ ಹಂಚಿಕೊಂಡಿರುವ ಜೊತೆಗೆ ಸಂದೇಶವೊಂದನ್ನು ಸಹ ರಮ್ಯಾ ಹಂಚಿಕೊಂಡಿದ್ದು, ದ್ರಾವಿಡ ಭಾಷೆಗಳ ಅಡಿಯಲ್ಲಿಯೇ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳು ಬರುತ್ತವೆ. ನಮ್ಮ ಭಾಷೆಗಳು ಪರಸ್ಪರ ಸಾಮ್ಯತೆಗಳನ್ನು ಹೊಂದಿವೆ ಆದರೆ ಯಾವ ಭಾಷೆಯೂ ಇನ್ನೊಂದು ಭಾಷೆಗಿಂತಲೂ ಶ್ರೇಷ್ಠ ಎಂದಿಲ್ಲ. ಇನ್ನು ಕೆಲವರು ಸಂಸ್ಕೃತ ಎಲ್ಲ ಭಾಷೆಗಳ ತಾಯಿ ಎಂದುಕೊಂಡಿರುವವರು ಇದ್ದಾರೆ. ಆದರೆ ಅದೂ ಸಹ ನಿಜವಲ್ಲ. ಏಕೆಂದರೆ ಸಂಸ್ಕೃತ ಇಂಡೋ-ಆರ್ಯನ್ ಭಾಷೆ. ಆದರೆ ನಾವು ದ್ರಾವಿಡರು. ಇಂಡೋ ಆರ್ಯನ್ನರು ಇಲ್ಲಿಗೆ ವಲಸೆ ಬರುವುದಕ್ಕೆ ಬಹಳ ವರ್ಷಗಳ ಮುಂಚೆಯೇ ನಾವು ಇಲ್ಲಿದ್ದೀವಿ’ ಎಂದಿದ್ದಾರೆ.
ಇದನ್ನೂ ಓದಿ:ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು ಎಚ್ಚರಿಕೆ
‘ಕಮಲ್ ಹಾಸನ್ ಅವರು ಒಂದು ಬಿಡು ಬೀಸು ಹೇಳಿಕೆಯನ್ನು ನೀಡಿದ್ದಾರೆ. ಆದರೆ ಆ ಮಾತ್ರಕ್ಕೆ ಅವರ ಸಿನಿಮಾ ಅನ್ನು ನಿಷೇಧ ಮಾಡಲು ಮುಂದಾಗಿರುವುದು ತುಸು ಅತಿರೇಕ ಅನಿಸುವುದಿಲ್ಲವೆ? ನಾವುಗಳು ಒಟ್ಟಾಗಿ ಹಿಂದಿ ಹೇರಿಕೆ ವಿರುದ್ಧ ಹೋರಾಡಬೇಕು ಆದರೆ ಅದಕ್ಕೂ ಮುನ್ನ ನಾವು ಪರಸ್ಪರರಿಗೆ ಗೌರವ ಕೊಡುವುದನ್ನು ಕಲಿಯಬೇಕಿದೆ’ ಎಂದಿದ್ದಾರೆ ರಮ್ಯಾ.
ಇಂದು (ಮೇ 29) ಕಮಲ್ ಹಾಸನ್ ಅವರ ಹೇಳಿಕೆ ವಿಚಾರವಾಗಿ ಫಿಲಂ ಚೇಂಬರ್ನಲ್ಲಿ ಸಭೆ ನಡೆದಿದ್ದು, ಕಮಲ್ ಹಾಸನ್ ತಮ್ಮ ಹೇಳಿಕೆಗೆ ಕ್ಷಮೆ ಕೇಳದ ಹೊರತು ತಾವು ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಫಿಲಂ ಚೇಂಬರ್ ಅಧ್ಯಕ್ಷ ಹೇಳಿದ್ದಾರೆ. ಸಾರಾ ಗೋವಿಂದು ಸಹ ಇದೇ ಮಾತು ಪುನರುಚ್ಛಿರಿಸಿದ್ದಾರೆ. ‘ಥಗ್ ಲೈಫ್’ ಸಿನಿಮಾ ಜೂನ್ 5 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




