ಕಮಲ್ ಹಾಸನ್ರಿಂದ ಕ್ಷಮೆ ಕೇಳಿಸುತ್ತೇವೆ, ಇಲ್ಲದಿದ್ರೆ ಸಿನಿಮಾ ಬಿಡುಗಡೆ ಇಲ್ಲ: ಫಿಲಂ ಚೇಂಬರ್ ಅಧ್ಯಕ್ಷ
Kamal Haasan: ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿವೆ. ಇದೀಗ ಫಿಲಂ ಚೇಂಬರ್ನಲ್ಲಿ ಕಮಲ್ ನಟನೆಯ ‘ಥಗ್ ಲೈಫ್’ ಸಿನಿಮಾದ ವಿತರಕರ ಕರೆದು ಸಭೆ ನಡೆಸಲಾಗಿದ್ದು, ಕಮಲ್ ಹಾಸನ್ ಅವರು ಕ್ಷಮೆ ಕೇಳದೇ ಹೋದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ’ ಎಂದಿದ್ದಾರೆ.

ಕಮಲ್ ಹಾಸನ್ (Kamal Haasan) ಅವರು ಕನ್ನಡ ಭಾಷೆಯ ಬಗ್ಗೆ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿವೆ. ‘ತಮಿಳು ಭಾಷೆಯಿಂದ ಕನ್ನಡ ಭಾಷೆಯ ಜನನವಾಯ್ತು’ ಎಂದು ಕಮಲ್ ಹಾಸನ್ ಹೇಳಿದ್ದರು. ಇದಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಕನ್ನಡಪರ ಸಂಘಟನೆಗಳು ಕಮಲ್ ಹಾಸನ್ ವಿರುದ್ಧ ಪ್ರತಿಭಟನೆ ನಡೆಸಿದ್ದು, ಕಮಲ್ ಹಾಸನ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿವೆ. ನಿನ್ನೆ ಕೇರಳದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಕಮಲ್ ಹಾಸನ್ ‘ಪ್ರೀತಿಯಿಂದ ಆಡಿದ ಮಾತಿಗೆ ಕ್ಷಮೆ ಕೇಳಲಾಗದು’ ಎಂದಿದ್ದರು. ಆದರೆ ಇದೀಗ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಮಾತನಾಡಿ, ಕಮಲ್ ಹಾಸನ್ ಅವರಿಂದ ಕ್ಷಮೆ ಕೇಳಿಸುತ್ತೇವೆ ಎಂದಿದ್ದಾರೆ.
‘ಥಗ್ ಲೈಫ್’ ಸಿನಿಮಾ ಕರ್ನಾಟಕದ ವಿತರಕ ವೆಂಕಟೇಶ್ ಅವರನ್ನು ಚೇಂಬರ್ಗೆ ಕರೆಸಿ ಮಾತುಕತೆ ನಡೆಸಿದ್ದೇವೆ. ಕಮಲ್ ಹಾಸನ್ ಅವರನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಕಮಲ್ ಅವರಿಂದ ಕ್ಷಮೆ ಕೇಳಿಸುತ್ತೇವೆ. ಕಮಲ್ ಹಾಸನ್ ಅವರು ಕ್ಷಮೆ ಕೇಳಬೇಕು ಇಲ್ಲದೇ ಹೋದರೆ ಅವರ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ’ ಎಂದಿದ್ದಾರೆ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು.
ಸಾರಾ ಗೋವಿಂದು ಮಾತನಾಡಿ, ‘ಕಮಲ್ ಹಾಸನ್ ಬಗ್ಗೆ ಕನಿಕರ ಇಲ್ಲ ಇದನ್ನ ಸಹಿಸೋಕೆ ಸದ್ಯ ಇಲ್ಲ, ಇವತ್ತು ನಾಳೆ ಒಳಗೆ ಕ್ಷಮೆ ಕೇಳದೆ ಹೋದ್ರೆ ಚಿತ್ರ ಬಿಡುಗಡೆ ಆಗೋದಿಲ್ಲ, ಕಮಲ್ ಹಾಸನ್ ಅವರಿಗೆ ಮನದಟ್ಟು ಮಾಡಿಸುವ ಜವಾಬ್ದಾರಿ ವಿತರಕರದ್ದು ಅದನ್ನು ಅವಿರಗೆ ಹೇಳಿದ್ದೀವಿ ಎಂದು ಸಾರಾ ಗೋವಿಂದು ಹೇಳಿದ್ದಾರೆ.
ಇನ್ನು ಸಿನಿಮಾದ ಕರ್ನಾಟಕ ವಿತರಕ ವೆಂಕಟೇಶ್ ಮಾತನಾಡಿ, ‘ನಾನೊಬ್ಬ ಕನ್ನಡಿಗನಾಗಿ ಕಮಲ್ ಹಾಸನ್ ಅವರ ಹೇಳಿಕೆಯನ್ನು ಖಂಡಿಸುತ್ತೀನಿ. ಚೇಂಬರ್ ನಲ್ಲಿ ಏನೇನು ಮೀಟಿಂಗ್ ಆಗಿದೆ ಅದನ್ನೆಲ್ಲ ಕಮಲ್ ಹಾಸನ್ ಅವರಿಗೆ ಹೇಳುತ್ತೇವೆ. ಕಮಲ್ ಹಾಸನ್ ಅವರ ಹೇಳಿಕೆಯನ್ನು ನಾನು ಖಂಡಿಸ್ತಿನಿ, ಕನ್ನಡ ಹಾಗೂ ಬ್ಯುಸಿನೆಸ್ ಎರಡೂ ನನಗೆ ಬಹಳ ಮುಖ್ಯ. ಸಿನಿಮಾ ರಿಲೀಸ್ ಬಗ್ಗೆ ಥಿಯೇಟರ್ ಇನ್ನು ಫೈನಲ್ ಆಗಿಲ್ಲ, ಪ್ರೊಡಕ್ಷನ್ ಟೀಂ ಅವ್ರಿಗೆ ಹೇಳಿದೀವಿ ಅವರ ಜೊತೆ ಮಾತಾಡ್ತಿವಿ’ ಎಂದಿದ್ದಾರೆ.
ಇದನ್ನೂ ಓದಿ:ಕಮಲ್ ಹಾಸನ್ ಜೊತೆ ಲಿಪ್ಲಾಕ್, ನಟಿ ಅಭಿರಾಮಿ ಹೇಳಿದ್ದೇನು?
‘ಥಗ್ ಲೈಫ್’ ಜೂನ್ 5 ರಂದು ಬಿಡುಗಡೆ ಆಗಲಿದೆ. ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಸಿನಿಮಾನಲ್ಲಿ ಕಮಲ್ ಹಾಸನ್ ಜೊತೆಗೆ ಅಭಿರಾಮಿ, ಸಿಂಭು, ತ್ರಿಷಾ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಮಣಿರತ್ನಂ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




