ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ, ಶಿವರಾಜ್ ಕುಮಾರ್ ಹೇಳಿದ್ದೇನು?
Shiva Rajkumar: ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ಆಡಿರುವ ಮಾತು ವಿವಾದಕ್ಕೆ ಕಾರಣವಾಗಿದೆ. ಅದೂ ಶಿವರಾಜ್ ಕುಮಾರ್ ಮುಂದೆಯೇ ಅವರು ಕನ್ನಡದ ಬಗ್ಗೆ ಮಾತನಾಡಿದ್ದರು. ಕಮಲ್ ಅವರ ಹೇಳಿಕೆಯನ್ನು ಚಿತ್ರರಂಗದ ಕೆಲವರು ಖಂಡಿಸಿದ್ದಾರೆ. ಇದೀಗ ಮೊದಲ ಬಾರಿಗೆ ಶಿವರಾಜ್ ಕುಮಾರ್ ಕಮಲ್ ಹಾಸನ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಮಲ್ ಹಾಸನ್ (Kamal Haasan) ಅವರು ‘ಥಗ್ ಲೈಫ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕನ್ನಡದ ಬಗ್ಗೆ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿವೆ. ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಅತಿಥಿಯಾಗಿದ್ದರು. ಕಮಲ್ ಹಾಸನ್ ಅವರ ಭಾಷಣದ ಸರದಿ ಬಂದಾಗ, ಡಾ ರಾಜ್ಕುಮಾರ್, ಶಿವರಾಜ್ ಕುಮಾರ್ ಅವರ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ ಕಮಲ್ ಹಾಸನ್, ಕರ್ನಾಟಕ, ಬೆಂಗಳೂರಿನ ಬಗ್ಗೆ ಮಾತನಾಡುತ್ತಾ ‘ತಮಿಳು ಭಾಷೆಯಿಂದ ಕನ್ನಡದ ಜನನಾವಾಯ್ತು’ ಎಂದರು. ಕಮಲ್ ಅವರ ಈ ಮಾತು ವಿವಾದಕ್ಕೆ ಕಾರಣವಾಗಿದೆ.
ನಟರಾದ ಜಗ್ಗೇಶ್, ಚೇತನ್ ಅಹಿಂಸ, ನಟ ಶ್ರೀನಾಥ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಇನ್ನೂ ಕೆಲವರು ಈಗಾಗಲೇ ಕಮಲ್ ಹಾಸನ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಕಮಲ್ ಅವರು ವಿವಾದಾತ್ಮಕ ಹೇಳಿಕೆ ನೀಡಿದಾಗ ಅಲ್ಲಿಯೇ ಇದ್ದ ಶಿವರಾಜ್ ಕುಮಾರ್ ಅವರು ಈ ವರೆಗೆ ವಿವಾದದ ಬಗ್ಗೆ ಮಾತನಾಡಿರಲಿಲ್ಲ. ಆದರೆ ಈಗ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
‘ಕಮಲ್ ಅವರು ಬಂದಿದ್ದಾಗ ಅವರು ಕನ್ನಡದ ಬಗ್ಗೆ, ಕರ್ನಾಟಕ, ಬೆಂಗಳೂರಿನ ಬಗ್ಗೆ ಬಹಳ ಹೆಮ್ಮೆಯಿಂದ ಮಾತನಾಡಿದರು. ಹಲವು ವಿಷಯಗಳನ್ನು ನೆನಪು ಮಾಡಿಕೊಂಡರು. ನಾನು ಅವರ ಬಹಳ ದೊಡ್ಡ ಅಭಿಮಾನಿ, ಅವರನ್ನು ನೋಡಿ ನಾನು ಸ್ಪೂರ್ತಿ ಪಡೆದಿದ್ದೀನಿ. ನಮ್ಮನ್ನು ಗೌರವದಿಂದ ಸಮಾರಂಭಕ್ಕೆ ಕರೆದಿದ್ದರು, ಅದೇ ಗೌರವದಿಂದ ನಾನೂ ಸಹ ಹೋಗಿದ್ದೆ. ಅವರು ದೊಡ್ಡವರು, ಅವರಿಗೆ ಗೊತ್ತಾಗುತ್ತೆ, ಯಾವುದಕ್ಕೇ ಏನು ಮಾಡಬೇಕೊ ಅದನ್ನು ಅವರು ಮಾಡಿಯೇ ಮಾಡುತ್ತಾರೆ’ ಎಂದಿದ್ದಾರೆ ಶಿವರಾಜ್ ಕುಮಾರ್. ಆ ಮೂಲಕ ಕಮಲ್ ಅವರು ಸ್ಪಷ್ಟನೆ ನೀಡುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ:ಭಾಷೆಯ ಬಗ್ಗೆ ಮಾತನಾಡುವ ಅರ್ಹತೆ ನನಗಿಲ್ಲ: ವಿವಾದದ ಬಗ್ಗೆ ಕಮಲ್ ಹಾಸನ್ ಸ್ಪಷ್ಟನೆ
‘ವೇದಿಕೆ ಮೇಲೆ ಏನು ತಪ್ಪಾಯ್ತು ಎಂಬುದು ನನಗೂ ಗೊತ್ತಾಗಲಿಲ್ಲ. ಇಂದು ಬಂದು ನೋಡಿದಾಗ ವಿವಾದ ಆಗಿತ್ತು. ಅವರು ಇಲ್ಲಿಯೇ ಇದ್ದರು, ಎಲ್ಲರೊಟ್ಟಿಗೆ ಮಾತನಾಡುತ್ತಿದ್ದರು. ಇಲ್ಲಿಯೇ ಅವರನ್ನು ಕೇಳಬಹುದಿತ್ತು, ಆದರೆ ಯಾಕೆ ಆಗ ಕೇಳಲಿಲ್ಲವೊ ಗೊತ್ತಿಲ್ಲ. ಆದರೆ ಕನ್ನಡ ಪ್ರೀತಿ ಎಂಬುದು ಯಾರೋ ಒಬ್ಬರು ಮಾತನಾಡಿದಾಗ ಮಾತ್ರವೇ ಬರಬಾರದು. ಕನ್ನಡ ಪ್ರೇಮ ಎಂಬುದು ಸದಾ ಕಾಲ ಜೊತೆಗೆ ಇರಬೇಕು’ ಎಂದರು ಶಿವಣ್ಣ.
‘ನಾವು ಕನ್ನಡಕ್ಕಾಗಿ ಹೋರಾಡುತ್ತೀವಿ, ಸಾಯುತ್ತೀವಿ ಬೇಕಾದರೆ. ಕೇವಲ ಮಾತಿನಲ್ಲಿ ಮಾತನಾಡಿ, ಫೋಸು ಕೊಡುವುದು ದೊಡ್ಡ ವಿಷಯ ಅಲ್ಲ. ಕನ್ನಡಕ್ಕೆ ಏನು ಮಾಡುತ್ತಿದ್ದೀವಿ ಎಂಬುದನ್ನು ನೀವೇ ಹುಡುಕಿ ನೋಡಿ, ನಿಮ್ಮ ಮನಸ್ಸನ್ನು ಕೇಳಿಕೊಂಡು ನೋಡಿ ನಿಮಗೆ ಉತ್ತರ ಸಿಗುತ್ತದೆ. ಕನ್ನಡ ಸಿನಿಮಾಕ್ಕೆ ನೀವು ಏನು ಮಾಡಿದ್ದೀರಿ, ಯಾರೋ ಸ್ಟಾರ್ ನಟರ ಸಿನಿಮಾಗಳಿಗೆ ಬೆಂಬಲ ಕೊಟ್ಟರೆ ಮಾತ್ರ ಸಾಲದು. ಹೊಸಬರ ಸಿನಿಮಾಕ್ಕೂ ಬೆಂಬಲ ಕೊಡಿ. ನಾವು ಮಾಡುತ್ತಿರುವುದು ಸರಿಯಾ, ತಪ್ಪಾ ಎಂದು ನೀವೇ ಕೇಳಿಕೊಳ್ಳಿ, ನಿಮಗೆ ಉತ್ತರ ಸಿಗುತ್ತೆ’ ಎಂದು ಯಾರ ಹೆಸರೂ ಹೇಳದೆ ಶಿವಣ್ಣ ಹೇಳಿದರು.
‘ಕಮಲ್ ಹಾಸನ್ ಅವರ ಬಗ್ಗೆ ನಾನು ಪ್ರತ್ಯೇಕವಾಗಿ ಮಾತನಾಡಬೇಕಾಗಿಲ್ಲ. ಅವರು ಹಿರಿಯರು, ಯಾವುದು ಸರಿ ತಪ್ಪು ಎಂಬುದು ಅವರಿಗೆ ಗೊತ್ತಿರುತ್ತೆ. ಅವರಿಗೂ ಕನ್ನಡ ಭಾಷೆ ಬಗ್ಗೆ ಪ್ರೀತಿ ಇದೆ. ಸಾಕಷ್ಟು ಕನ್ನಡ ಸಿನಿಮಾಗಳಲ್ಲಿಯೂ ಅವರು ನಟಿಸಿದ್ದಾರೆ. ಈ ಸಮಯದಲ್ಲಿ ಏನು ಮಾಡಬೇಕೊ ಅದನ್ನು ಅವರು ಮಾಡುತ್ತಾರೆ ಎಂಬ ಭರವಸೆ ನನಗೆ ಇದೆ’ ಎಂದಿದ್ದಾರೆ ಶಿವರಾಜ್ ಕುಮಾರ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




