ಡಿ.17ಕ್ಕೆ ಕನ್ನಡದ ‘ಆನ’ ವರ್ಸಸ್ ತೆಲುಗಿನ ‘ಪುಷ್ಪ’; ಅದಿತಿ ಚಿತ್ರಕ್ಕೆ ಬೇಕಿದೆ ಕನ್ನಡಿಗರ ಬೆಂಬಲ
Aana Kannada Movie: ಕನ್ನಡದ ‘ಆನ’ ಚಿತ್ರ ಡಿ.17ರಂದು ರಿಲೀಸ್ ಆಗುತ್ತಿದೆ. ಪರಭಾಷೆ ಸಿನಿಮಾಗಳ ಅಬ್ಬರದ ನಡುವೆ ಕನ್ನಡದ ಸಿನಿಮಾಗಳು ಗೆಲ್ಲಲು ಕನ್ನಡಿಗರ ಬೆಂಬಲ ಬೇಕು ಎಂದು ನಿರ್ದೇಶಕ ಮನೋಜ್ ನಡಲುಮನೆ ಕೋರಿದ್ದಾರೆ.
ಸಿನಿಪ್ರಿಯರ ಪಾಲಿಗೆ ಈ ವರ್ಷದ ಡಿಸೆಂಬರ್ ತಿಂಗಳು ಮನರಂಜನೆಯ ಸುಗ್ಗಿ ಆಗಿದೆ. ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ. ದೊಡ್ಡ ಬಜೆಟ್ ಚಿತ್ರಗಳಿಗೆ ಥಿಯೇಟರ್ಗಳು ಸುಲಭವಾಗಿ ಸಿಗುತ್ತವೆ. ಆದರೆ ಚಿಕ್ಕ ಸಿನಿಮಾಗಳು ತುಂಬ ಕಷ್ಟಪಡಬೇಕಾದ ಪರಿಸ್ಥಿತಿ ಇದೆ. ಅದರಲ್ಲೂ ಪರಭಾಷೆಯ ಸ್ಟಾರ್ ಸಿನಿಮಾಗಳ ಎದುರು ಕನ್ನಡದ ಚಿತ್ರಗಳು ಸೊರಗುವಂಥ ಪರಿಸ್ಥಿತಿ ಇದೆ. ಡಿ.17ರಂದು ಕನ್ನಡದ ‘ಆನ’ (Aana Kannada Movie) ಚಿತ್ರ ಬಿಡುಗಡೆ ಆಗುತ್ತಿದೆ. ಅದೇ ದಿನ ತೆಲುಗಿನ ‘ಪುಷ್ಪ’ ಸಿನಿಮಾ (Pushpa Movie) ತೆರೆಕಾಣುತ್ತಿದೆ. ‘ಪುಷ್ಪ’ ಚಿತ್ರದಿಂದಾಗಿ ಕನ್ನಡದ ‘ಆನ’ ಸಿನಿಮಾಗೆ ಬೇಕಾದಷ್ಟು ಥಿಯೇಟರ್ಗಳು ಸಿಗುತ್ತಿಲ್ಲ. ಅದರ ನಡುವೆಯೂ ಧೈರ್ಯ ಮಾಡಿ ಈ ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ ನಿರ್ಮಾಪಕಿ ಪೂಜಾ ವಸಂತ್ ಕುಮಾರ್. ಈ ಸಿನಿಮಾದಲ್ಲಿ ನಾಯಕಿಯಾಗಿ ಅದಿತಿ ಪ್ರಭುದೇವ (Aditi Prabhudeva) ಅಭಿನಯಿಸಿದ್ದಾರೆ.
ಮನೋಜ್ ಪಿ. ನಡಲುಮನೆ ಅವರು ‘ಆನ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್ಗೆ ಜನರಿಂದ ಮೆಚ್ಚುಗೆ ಸಿಕ್ಕಿದೆ. ಹಾಗಾಗಿ ಪ್ರೇಕ್ಷಕರು ಥಿಯೇಟರ್ಗೆ ಬಂದು ಈ ಸಿನಿಮಾ ನೋಡುತ್ತಾರೆ ಎಂಬ ಭರವಸೆಯನ್ನು ನಿರ್ದೇಶಕರು ವ್ಯಕ್ತಪಡಿಸಿದ್ದಾರೆ. ಸುನೀಲ್ ಪುರಾಣಿಕ್ ಅವರು ‘ಆನ’ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿದ್ದಾರೆ. ಪರಭಾಷೆ ಸಿನಿಮಾಗಳ ಅಬ್ಬರದ ನಡುವೆ ಕನ್ನಡದ ಈ ಸಿನಿಮಾ ಗೆಲ್ಲಲು ಕನ್ನಡಿಗರ ಬೆಂಬಲ ಬೇಕು ಎಂದು ನಿರ್ದೇಶಕರು ಕೋರಿದ್ದಾರೆ.
ಲಾಕ್ಡೌನ್ ಹಿನ್ನೆಲೆಯನ್ನು ಇಟ್ಟುಕೊಂಡು ‘ಆನ’ ಸಿನಿಮಾ ಮಾಡಲಾಗಿದೆ. ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಸಿನಿಮಾ ಎಂದು ಕೂಡ ಚಿತ್ರತಂಡ ಹೇಳಿಕೊಂಡಿದೆ. ವಿಶೇಷ ಶಕ್ತಿ ಇರುವ ಯುವತಿಯ ಪಾತ್ರದಲ್ಲಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ‘ಆ ಪಾತ್ರದ ಬಗ್ಗೆ ಕೇಳಿದಾಗಲೇ ಸಖತ್ ಎಗ್ಸೈಟ್ ಎನಿಸಿತು. ನನ್ನಿಂದ ಈ ಪಾತ್ರ ಮಾಡಲು ಸಾಧ್ಯವೇ ಎನಿಸಿತ್ತು. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಬೇರೆ ಭಾಷೆಯ ಸಿನಿಮಾಗಳ ಎದುರು ಕನ್ನಡದ ಸಿನಿಮಾಗಳು ಸೊರಗುತ್ತಿವೆ. ಇನ್ನೂ ಮುಂದೆ ಯಾವ ರೀತಿ ಪರಿಸ್ಥಿತಿ ಬರಲಿದೆಯೋ ತಿಳಿದಿಲ್ಲ. ಒಳ್ಳೆಯ ಕನ್ನಡ ಸಿನಿಮಾವನ್ನು ಕರುನಾಡಿನ ಸಿನಿಪ್ರಿಯರು ಗೆಲ್ಲಿಸಬೇಕು’ ಎಂದು ಅದಿತಿ ಪ್ರಭುದೇವ ಹೇಳಿದ್ದಾರೆ.
ಈ ಚಿತ್ರಕ್ಕೆ ರಿತ್ವಿಕ್ ಮುರಳೀಧರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡಿನ ಜತೆಗೆ ಟ್ರೇಲರ್ನಲ್ಲಿರುವ ಹಿನ್ನೆಲೆ ಸಂಗೀತಕ್ಕೆ ಎಲ್ಲರಿಂದ ಪ್ರಶಂಸೆ ಸಿಕ್ಕಿರುವುದು ರಿತ್ವಿಕ್ ಸಂತಸಕ್ಕೆ ಕಾರಣ ಆಗಿದೆ. ‘ನಿರ್ದೇಶಕರ ಶ್ರಮದ ಜತೆಗೆ ಉದಯ್ ಲೀಲಾ ಅವರ ಛಾಯಾಗ್ರಹಣ, ವಿಜೇತ್ ಚಂದ್ರ ಅವರ ಸಂಕಲನ ತುಂಬಾ ಚೆನ್ನಾಗಿ ಹೊಂದಿಕೊಂಡಿದೆ. ಅವರೆಲ್ಲರ ಕೆಲಸಕ್ಕೆ ನ್ಯಾಯ ಒದಗಿಸುವ ರೀತಿಯಲ್ಲಿ ಸಂಗೀತ ನೀಡಲು ಪ್ರಯತ್ನಿಸಿದ್ದೇನೆ’ ಎಂದು ರಿತ್ವಿಕ್ ಹೇಳಿದ್ದಾರೆ. ನವೀನ್ ಕುಮಾರ್ ಸೌಂಡ್ ಡಿಸೈನಿಂಗ್ ಮಾಡಿದ್ದಾರೆ.
(ಆನ ಚಿತ್ರದ ಟ್ರೇಲರ್)
ಇದನ್ನೂ ಓದಿ:
ಯಾವ ಸ್ಥಿತಿಯಲ್ಲಿದೆ ನೋಡಿ ಡಾ. ರಾಜ್ ಬೆಳೆದ ಮನೆ; ಇದರ ಬಗ್ಗೆ ಪುನೀತ್ ಕಂಡಿದ್ದರು ಕನಸು
ಪುನೀತ್ ರಾಜ್ಕುಮಾರ್ ಭಾವಚಿತ್ರ ಹಿಡಿದುಕೊಂಡು ಶಬರಿಮಲೆ ಯಾತ್ರೆ ಮಾಡಿದ ಅಭಿಮಾನಿಗಳು