ದೇಶವೇ ತಿರುಗಿ ನೋಡುವಂತಹ ಸಿನಿಮಾಗಳನ್ನು ಚಂದನವನದ ನಿರ್ದೇಶಕರು ಮಾಡುತ್ತಿದ್ದಾರೆ. ಹಾಗಾಗಿ ಕನ್ನಡದ ಸಿನಿಮಾಗಳ ಮೇಲೆ ಪರಭಾಷೆ ಮಂದಿಗೆ ಒಂದು ಭರವಸೆ ಮೂಡಿದೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ ‘ಕಾಂತಾರ’ (Kantara) ಸಿನಿಮಾ. ಈ ಚಿತ್ರ ಕನ್ನಡದಲ್ಲಿ ಅಬ್ಬರಿಸುತ್ತಿರುವಾಗಲೇ ಪರಭಾಷೆಗಳಿಗೂ ಡಬ್ ಆಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ವರ್ಷನ್ನಿಂದ ನಿರೀಕ್ಷೆಗೂ ಮೀರಿದ ಲಾಭ ಆಗುತ್ತಿದೆ. ತೆಲುಗು ಮಂದಿ ಈ ಚಿತ್ರವನ್ನು (Kantara Telugu) ಸಖತ್ ಇಷ್ಟಪಡುತ್ತಿದ್ದಾರೆ. ಇದರಿಂದ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರ ಜೇಬು ತುಂಬುತ್ತಿದೆ. ‘ಹೊಂಬಾಳೆ ಫಿಲ್ಮ್ಸ್’ ಕಡೆಯಿಂದ ತೆಲುಗು ವಿತರಣೆ ಹಕ್ಕುಗಳನ್ನು ಖರೀದಿಸಿದ ಅಲ್ಲು ಅರವಿಂದ್ (Allu Aravind) ಅವರು ಈ ಚಿತ್ರದಿಂದ ಸಖತ್ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿ ಆಗಿದೆ.
ಮೂಲಗಳ ಪ್ರಕಾರ, ಅಲ್ಲು ಅರವಿಂದ್ ಅವರು ‘ಕಾಂತಾರ’ ಚಿತ್ರದ ತೆಲುಗು ವಿತರಣೆ ಹಕ್ಕನ್ನು ಖರೀದಿಸಿದ್ದು ಕೇವಲ 3 ಕೋಟಿ ರೂಪಾಯಿಗೆ. ಈಗಾಗಲೇ ಅವರಿಗೆ ಬಾಕ್ಸ್ ಆಫೀಸ್ನಲ್ಲಿ ಅಷ್ಟು ಕಲೆಕ್ಷನ್ ಆಗಿದೆ. ನಂತರ ಬರುತ್ತಿರುವುದೆಲ್ಲವೂ ಲಾಭದ ಲೆಕ್ಕ. ಹಾಗಾಗಿ, ಅವರ ಮುಖದಲ್ಲಿ ನಗು ಮೂಡಿದೆ ಎಂದು ಹೇಳಲಾಗುತ್ತಿದೆ.
ಕರಾವಳಿ ನೆಲೆದ ಕಥೆಗೆ ಎಲ್ಲ ಪ್ರದೇಶದ ಜನರೂ ಮನಸೋತಿದ್ದಾರೆ. ರಿಷಬ್ ಶೆಟ್ಟಿ ಅವರ ನಟನೆ, ನಿರ್ದೇಶನಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತೆಲುಗು ಮಾತ್ರವಲ್ಲದೇ ಹಿಂದಿಯಲ್ಲೂ ಈ ಸಿನಿಮಾ ಗಮನಾರ್ಹ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಿದೆ. ಹೊರರಾಜ್ಯಗಳ ಚಿತ್ರಮಂದಿರಗಳು ಹೌಸ್ಫುಲ್ ಆಗುತ್ತಿವೆ. ಇದು ಸ್ಯಾಂಡಲ್ವುಡ್ ಪಾಲಿಗೆ ಹೆಮ್ಮೆ ತಂದಿದೆ.
ಉತ್ತರ ಭಾರತದಲ್ಲಿ ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾ ನೋಡಿ ಬಂದ ಪ್ರೇಕ್ಷಕರು ಪಾಸಿಟಿವ್ ವಿಮರ್ಶೆ ಹಂಚಿಕೊಳ್ಳುತ್ತಿದ್ದಾರೆ. ಅದರ ಪರಿಣಾಮವಾಗಿ ದಿನದಿಂದ ದಿನಕ್ಕೆ ಚಿತ್ರದ ಕಲೆಕ್ಷನ್ ಹೆಚ್ಚುತ್ತಿದೆ. ಬಾಯಿ ಮಾತಿನ ಪ್ರಚಾರ ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ವಿಜಯ್ ಕಿರಗಂದೂರು ಅವರು ನಿರ್ಮಾಣ ಮಾಡಿರುವ ‘ಕಾಂತಾರ’ ಸಿನಿಮಾದಿಂದ ‘ಹೊಂಬಾಳೆ ಫಿಲ್ಸ್ಮ್’ ಸಂಸ್ಥೆಗೆ ಬಹುಕೋಟಿ ರೂಪಾಯಿ ಲಾಭ ಆಗಿದೆ.
ಈ ಸಿನಿಮಾದಿಂದ ರಿಷಬ್ ಶೆಟ್ಟಿ ಅವರಿಗೆ ದೇಶಾದ್ಯಂತ ಡಿಮ್ಯಾಂಡ್ ಹೆಚ್ಚಿದೆ. ಅಚ್ಯುತ್ ಕುಮಾರ್, ಕಿಶೋರ್, ಸಪ್ತಮಿ ಗೌಡ, ಮಾನಸಿ ಸುಧೀರ್ ಮುಂತಾದವರ ನಟನೆಗೆ ಎಲ್ಲರಿಂದ ಮೆಚ್ಚುಗೆ ಕೇಳಿಬರುತ್ತಿದೆ. ಅಂತಿಮವಾಗಿ ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರಕ್ಕೆ ಎಷ್ಟು ಕಲೆಕ್ಷನ್ ಆಗಲಿದೆ ಎಂಬುದನ್ನು ಕಾದು ನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.