ಕೌತುಕ ಮೂಡಿಸಿದ ‘ಅಮರಾವತಿ ಪೊಲೀಸ್ ಸ್ಟೇಷನ್’ ಸಿನಿಮಾದ ಟ್ರೇಲರ್

ಧರ್ಮ ಕೀರ್ತಿರಾಜ್, ವೇದ್ವಿಕಾ, ಗುರುರಾಜ್ ಜಗ್ಗೇಶ್, ಕಾಕ್ರೋಚ್ ಸುಧಿ, ಡ್ರ್ಯಾಗನ್ ಮಂಜು, ಸಾಧು ಕೋಕಿಲ, ಮಾಳವಿಕಾ ಅವಿನಾಶ್ ಮುಂತಾದವರು ‘ಅಮರಾವತಿ ಪೊಲೀಸ್ ಸ್ಟೇಷನ್’ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಕಥೆಯ ಬಗ್ಗೆ ಕೌತುಕ ಮೂಡಿಸಲಾಗಿದೆ.

ಕೌತುಕ ಮೂಡಿಸಿದ ‘ಅಮರಾವತಿ ಪೊಲೀಸ್ ಸ್ಟೇಷನ್’ ಸಿನಿಮಾದ ಟ್ರೇಲರ್
Vedvika, Dharma Keerthiraj, Gururaj Jaggesh

Updated on: Nov 04, 2026 | 10:55 AM

‘ಅಮರಾವತಿ ಪೊಲೀಸ್ ಸ್ಟೇಷನ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಕಡಲ ತೀರದಲ್ಲಿನ ‘ಅಮರಾವತಿ’ ಎಂಬ ಕಾಲ್ಪನಿಕ ಊರಲ್ಲಿ ನಡೆಯುವ ಮಿಸ್ಸಿಂಗ್, ಮರ್ಡರ್, ಅಚ್ಚರಿ ಎನಿಸುವ ಘಟನೆಗಳ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಈ ಸಿನಿಮಾದಲ್ಲಿ ಇದೆ. ಧರ್ಮ ಕೀರ್ತಿರಾಜ್ ಅವರು ನಾಯಕನಾಗಿ ಅಭಿನಯಿಸಿರುವ ಈ ಸಿನಿಮಾದಲ್ಲಿ ಗುರುರಾಜ್ ಜಗ್ಗೇಶ್ ಅವರು ಒಂದು ವಿಶೇಷವಾದ ಪಾತ್ರವನ್ನು ಮಾಡಿದ್ದಾರೆ.

ಪುನೀತ್ ಅರಸೀಕೆರೆ ಅವರು ‘ಅಮರಾವತಿ ಪೊಲೀಸ್ ಸ್ಟೇಷನ್’ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಬಾಮ ಹರೀಶ್ ಹಾಗೂ ಹಿರಿಯ ಪ್ರಚಾರಕರ್ತರಾದ ನಾಗೇಂದ್ರ ಅವರು ಈ ಸಿನಿಮಾದ ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಕೋರಿದರು. ಇದ್ದಕ್ಕಿದ್ದ ಹಾಗೆ ಊರಗೌಡ ಕಾಣೆಯಾಗುತ್ತಾನೆ. ಆ ಪ್ರಕರಣ ಪತ್ತೆಹಚ್ಚಲು ಬಂದ ಪೊಲೀಸ್ ಕೂಡ ಕಾಣೆಯಾಗುತ್ತಾನೆ. ಇದೆಲ್ಲದರ ಹಿಂದೆ ಯಾರ ಕೈವಾಡವಿದೆ? ಇದರ ಮರ್ಮವೇನು ಎಂದು ಪತ್ತೆ ಹಚ್ಚಲು ಅಮರಾವತಿಗೆ ಬರುವ ಮಫ್ತಿ ಪೊಲೀಸ್ ಕಥೆಯೇ ಈ ಚಿತ್ರದ ಸಸ್ಪೆನ್ಸ್ ಅಂಶ.

‘ಅಮರಾವತಿ ಪೊಲೀಸ್ ಸ್ಟೇಷನ್’ ಚಿತ್ರದಲ್ಲಿ ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ಧರ್ಮ ಕೀರ್ತಿರಾಜ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ನಿರ್ದೇಶಕರು ನನಗೆ ಸಹೋದರನ ಹಾಗೆ. ಸಿನಿಮಾ ಚೆನ್ನಾಗಿ ಬರಬೇಕೆಂದು ಕೆಲವು ಭಾಗವನ್ನು ಮರುಚಿತ್ರೀಕರಣ ಮಾಡಲಾಗಿದೆ. ಹೆಸರಾಂತ ಖಳ ನಟರನ್ನು ಹಾಕಿಕೊಂಡು ಸಿನಿಮಾ ಮಾಡಿದ್ದಾರೆ’ ಎಂದು ಅವರು ಹೇಳಿದರು.

Amaravathi Police Station - Trailer | Kannada Movie |Dharma Keerthiraj | Shashikumar |Ronada Bakkesh

ಜಗ್ಗೇಶ್ ಪುತ್ರ ಗುರುರಾಜ್ ಮಾತನಾಡುತ್ತ, ‘ನಿರ್ದೇಶಕರಿಗೆ ಬಹಳ ಆತ್ಮವಿಶ್ವಾಸ ಇದೆ. ಅಂದುಕೊಂಡ ಹಾಗೇ ಸಿನಿಮಾ ಬರಬೇಕೆಂದು ತುಂಬಾ ಶ್ರಮಪಟ್ಟಿದ್ದಾರೆ. ನನ್ನದು ನೆಗೆಟಿವ್ ಶೇಡ್ ಇರುವಂತಹ, ಟಗರು ಡಾಲಿ ರೀತಿ ಕ್ರೂರಿಯ ಪಾತ್ರ. ಇದು ನನಗೆ ಚಾಲೆಂಜಿಂಗ್ ಆಗಿತ್ತು’ ಎಂದರು. ಹಿರಿಯ ನಟ ಧರ್ಮ ಮಾತನಾಡಿ, ‘ಚಿತ್ರದಲ್ಲಿ ನಾನು ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದೇನೆ. ಆ್ಯಕ್ಷನ್ ತುಂಬಾ ವಿಶೇಷವಾಗಿದೆ. ಧರ್ಮ ಕೀರ್ತಿರಾಜ್ ತುಂಬಾ ರಿಸ್ಕ್ ತೆಗೆದುಕೊಂಡು ಆ್ಯಕ್ಷನ್ ಮಾಡಿದ್ದಾರೆ. ಅಲ್ಲದೆ ನಿರ್ಮಾಪಕರು ಪುನೀತ್ ನಂಬಿ ಹಣ ಹಾಕಿದ್ದಾರೆ’ ಎಂದರು.

ಇದನ್ನೂ ಓದಿ: ಅನುಷಾ ರೈ ಜೊತೆ ಮದುವೆ ಆಗ್ತೀರಾ? ಧರ್ಮ ಕೀರ್ತಿರಾಜ್ ನೇರ ಉತ್ತರ

ತೆಲುಗು ಮೂಲದ ವೇದ್ವಿಕಾ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದು ಅವರ ಮೊದಲ ಕನ್ನಡ ಸಿನಿಮಾ. ನಿರ್ದೇಶಕ ಪುನೀತ್ ಮಾತನಾಡಿ, ‘ನಾನು ಈ ಕಥೆ ರೆಡಿ ಮಾಡಿಕೊಂಡ ತಕ್ಷಣ ನಾಗೇಂದ್ರ ಅವರಿಗೆ ಹೇಳಿದ್ದೆ. ಚಿತ್ರದಲ್ಲಿ ರೈತರ ಬಗ್ಗೆ ಹೇಳಿದ್ದೇವೆ. ಕೃತಕ ಆಹಾರದಿಂದ ಜನರಿಗೆ ಏನೆಲ್ಲ ತೊಂದರೆಗಳಾಗುತ್ತಿವೆ ಎಂದು ತೋರಿಸಿದ್ದೇವೆ. ಮಾಳವಿಕಾ ಅವರು ಕಮಿಷನರ್ ಆಗಿ ನಟಿಸಿದ್ದಾರೆ. ವಿಶೇಷವಾಗಿ ಚಿತ್ರದಲ್ಲಿ 29 ಜನ ಕಲಾವಿದರಿದ್ದಾರೆ. ಸಿನಿಮಾ ಬಹಳ ಚೆನ್ನಾಗಿ ಮೂಡಿಬಂದಿದೆ. ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇದೆ’ ಎಂದರು.

ಕಾಕ್ರೋಚ್ ಸುಧಿ, ಡ್ರ್ಯಾಗನ್ ಮಂಜು, ಸಾಧು ಕೋಕಿಲ, ಮಾಳವಿಕಾ ಅವಿನಾಶ್, ನಾಗೇಂದ್ರ ಪ್ರಸಾದ್, ಧರ್ಮಣ್ಣ ಕಡೂರು ಮಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಪವರ್ ಪಿಕ್ಚರ್, ಎನ್. ಅನಿತಾ ಸುಕೇಂದ್ರ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಕೆ.ಆರ್. ಪ್ರದೀಪ್ ಕಮಲಾಪುರ, ಶ್ರೀಮತಿ ಗೀತಾ ಅಂಜನರೆಡ್ಡಿ ಅವರು ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us