‘ರೆಬೆಲ್ ಸ್ಟಾರ್’ ಅಂಬರೀಷ್ (Ambareesh) ಅವರ ಅಭಿಮಾನಿಗಳ ಪಾಲಿಗೆ ಇಂದು (ಮಾರ್ಚ್ 27) ವಿಶೇಷವಾದ ದಿನ. ಯಾಕೆಂದರೆ, ಈ ದಿನ ಅಂಬರೀಷ್ ಅವರಿಗೆ ಸಂಬಂಧಿಸಿದ ಎರಡು ಪ್ರಮುಖ ಘಟನೆಗಳು ನಡೆದಿವೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಅವರ ಹೆಸರನ್ನು ಇಡಲಾಗಿದೆ. ಅಲ್ಲದೇ, ಕಂಠೀರವ ಸ್ಟುಡಿಯೋ ಆವರಣದಲ್ಲಿ ಅಂಬರೀಷ್ ಸ್ಮಾರಕ (Ambareesh Memorial) ಮತ್ತು ಪ್ರತಿಮೆ ಅನಾವರಣ ಆಗಿದೆ. ಇದರ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ನೆರವೇರಿಸಿದ್ದಾರೆ. ಬೊಮ್ಮಾಯಿ ಮತ್ತು ಅಂಬರೀಷ್ ನಡುವೆ ಸ್ನೇಹವಿತ್ತು. ಆ ದಿನಗಳ ಬಗ್ಗೆ ಇಂದು ಸಿಎಂ ಮಾತನಾಡಿದ್ದಾರೆ. ಅಂಬರೀಷ್ ಸ್ಮಾರಕ ಉದ್ಘಾಟನೆ ಬಳಿಕ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು.
‘ಅಂಬರೀಷ್ ಅವರ ನೆನಪು ಸದಾ ಕಾಲ ಇರುತ್ತದೆ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವವನು ಸಾಧಕ. ಹೀಗೆ ಅಂಬರೀಷ್ ಅವರು ಸಾವಿನ ನಂತರವೂ ಬದುಕುತ್ತಿದ್ದಾರೆ. ಅವರ ಸವಿ ನೆನಪಿಗಾಗಿ ಈ ಸ್ಮಾರಕ, ಮ್ಯೂಸಿಯಂ ನಿರ್ಮಾಣಕ್ಕೆ ಅನುದಾನ ನೀಡಲಾಯಿತು. ಇಂದು ಉದ್ಘಾಟನೆ ಮಾಡಿದ್ದು ಸಂತಸ ತಂದಿದೆ’ ಎಂದಿದ್ದಾರೆ ಬಸವರಾಜ ಬೊಮ್ಮಾಯಿ.
‘ನನಗೆ ಅಂಬರೀಷ್ ಅವರು ಅತ್ಯಂತ ಅತ್ಮೀಯ ಮಿತ್ರನಾಗಿದ್ದರು. ‘ಈ ಸ್ಮಾರಕಕ್ಕೆ ನಾನೇ ಅಡಿಗಲ್ಲು ಹಾಕಿದ್ದು. ಇಂದು ನಾನೇ ಉದ್ಘಾಟನೆ ಮಾಡಿದ್ದೇನೆ. ಇದನ್ನು ದೇವರ ಇಚ್ಛೆ ಎಂದು ಭಾವಿಸುತ್ತೇನೆ. ಅಂಬರೀಷ್ ಅವರು ಮಾತಿನಲ್ಲಿ ಒರಟು. ಆದರೆ ಸ್ವಚ್ಛ ಹಾಗೂ ಸರಳ ಹೃದಯ ಇದ್ದಂತಹ ವ್ಯಕ್ತಿ ಅವರು. ಅವರ ಸ್ವಭಾವ ಬಹಳ ಮೃದು ಆಗಿತ್ತು’ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
‘ಅಂಬರೀಷ್ ಅವರು ಕೊಡುಗೈ ದಾನಿ ಆಗಿದ್ದರು. ದೀನ ದಲಿತರ ಬಗ್ಗೆ ಹಾಗೂ ಬಡವರ ಬಗ್ಗೆ ಕಾಳಜಿ ಹೊಂದಿದ್ದರು. ಅವರ ಸ್ಮಾರಕವನ್ನು ಇಡೀ ರಾಜ್ಯದ ಜನರು ನೋಡಿ ಅಭಿಮಾನಪಡುತ್ತಾರೆ. ಇದನ್ನು ರಾಜ್ಯದ ಜನರಿಗೆ ಅರ್ಪಿಸುತ್ತೇನೆ’ ಎಂದಿದ್ದಾರೆ ಬೊಮ್ಮಾಯಿ.
ಅಂಬರೀಷ್ ಅವರ ಸ್ಮಾರಕ ಉದ್ಘಾಟನೆ ವೇಳೆ ಸುಮಲತಾ ಅಂಬರೀಷ್, ಅಭಿಷೇಕ್ ಅಂಬರೀಷ್, ಭಾ.ಮ. ಹರೀಶ್, ದೊಡ್ಡಣ್ಣ, ರಾಕ್ಲೈನ್ ವೆಂಕಟೇಶ್, ರಾಘವೇಂದ್ರ ರಾಜ್ಕುಮಾರ್, ಸಂದರ್ ರಾಜ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:35 pm, Mon, 27 March 23