‘ಕೆಜಿಎಫ್’ ಮತ್ತು ‘ಕಾಂತಾರ’ ಬಗ್ಗೆ ಅನಂತ್ನಾಗ್ ಭಿನ್ನ ಅಭಿಪ್ರಾಯ
Anant Nag: ಹಿರಿಯ ನಟ ಅನಂತ್ ನಾಗ್ ಅವರು 'ಕೆಜಿಎಫ್' ಹಾಗೂ 'ಕಾಂತಾರ' ಸಿನಿಮಾಗಳ ಬಗ್ಗೆ ಭಿನ್ನವಾದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
‘ಕೆಜಿಎಫ್‘ (KGF), ‘ಕಾಂತಾರ‘ (Kantara), ಕನ್ನಡ ಸಿನಿಮಾ ಪ್ರೇಕ್ಷಕರು, ಕನ್ನಡ ಚಿತ್ರರಂಗದವರು ಅತಿ ಹೆಚ್ಚು ಸಂಭ್ರಮಿಸಿದ ಸಿನಿಮಾಗಳು. ಸಂಭ್ರಮಿಸಲೇ ಬೇಕಾದಂಥಹಾ ಗೆಲುವನ್ನು, ಚಿತ್ರರಂಗಕ್ಕೆ ಹೊಸ ಸ್ಪೂರ್ತಿಯನ್ನು ತಂದುಕೊಟ್ಟ ಸಿನಿಮಾಗಳು ಇವು. ಈ ಎರಡು ಸಿನಿಮಾಗಳು ಮಾಡಿರುವ ಅದ್ಭುತವನ್ನು ಮೆಚ್ಚುತ್ತಲೇ ಈ ಸಿನಿಮಾಗಳ ಬಗೆಗೆ ಇರುವ ಭಿನ್ನ ಅಭಿಪ್ರಾಯಗಳನ್ನು ಕೇಳಬೇಕಾದ ಅವಶ್ಯಕತೆ ಇದೆ. ಅಂಥಹಾ ಭಿನ್ನ ಅಭಿಪ್ರಾಯವನ್ನು ಹಿರಿಯ ನಟ ಅನಂತ್ ನಾಗ್ (Anant Nag) ಹಂಚಿಕೊಂಡಿದ್ದಾರೆ.
ಅನಂತ್ ನಾಗ್ ಅವರು ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಆಯೋಜಿಸಿದ್ದ ಸುವರ್ಣ ಅನಂತ ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್, ಅನಂತ್ನಾಗ್ ಜೊತೆ ಆಪ್ತ ಸಂವಾದ ನಡೆಸಿದರು, ಈ ಸಂದರ್ಭದಲ್ಲಿ ಚಿತ್ರರಂಗದಲ್ಲಿ ‘ಹೊಸ ನೀರು’ ಹರಿಯುತ್ತಿರುವ ಬಗ್ಗೆ ರಮೇಶ್ ಅರವಿಂದ್ ಪ್ರಶ್ನೆ ಕೇಳಿ, ‘ಕೆಜಿಎಫ್’, ‘ಕಾಂತಾರ’ ಸಿನಿಮಾಗಳ ಹೆಸರು ಹೇಳಿ ಅನಂತ್ ನಾಗ್ ಅವರ ಅಭಿಪ್ರಾಯ ಕೇಳಿದರು.
”ಆಶ್ಚರ್ಯ ಆಗುತ್ತದೆ, ಹೇಗೆ ಜನರ ಅಭಿರುಚಿ, ಅಪೇಕ್ಷೆಗಳು, ದಶಕ ದಶಕಗಳಲ್ಲಿ ಬದಲಾಗುತ್ತದೆ ಎಂಬುದನ್ನು ನೋಡಿ. ಆದರೂ ಎಲ್ಲೋ ಒಂದು ಕಡೆ, ಅಲ್ಲಲ್ಲಿ, ಜೀವನದ ಸತ್ಯ, ಸದಾ ಸತ್ಯವಾಗಿರುವ ವಿಷಯಗಳನ್ನು ಮರೆಯದೆ, ಇಂಥಹಾ ಬದಲಾವಣೆಗಳು ಆಗಬೇಕು. ಚಲನಚಿತ್ರದಲ್ಲಿ ಇತ್ತೀಚೆಗೆ ಬಹಳ ಕ್ರೌರ್ಯ ನೋಡುತ್ತಿದ್ದೇವೆ, ದೇಶದಲ್ಲಿ ಎಲ್ಲ ಕಡೆ ಕ್ರೌರ್ಯ ಹೆಚ್ಚಾಗಿದೆ. ಮುಂಚೆ ಎಲ್ಲ ಇಷ್ಟೆಲ್ಲ ಕ್ರೌರ್ಯ ಇರಲಿಲ್ಲ. ಪೇಪರ್ ನೋಡಿದರೆ ಕ್ರೌರ್ಯದ ಸುದ್ದಿಗಳೇ ತುಂಬಿ ತುಳುಕಾಡುತ್ತಿದೆ, ಅಸಹನೆ ತುಂಬಿ ತುಳುಕಾಡುತ್ತಿದೆ. ಅದರ ಬಗ್ಗೆ ಎಲ್ಲರೂ ಗಮನ ಕೊಡಬೇಕು ಎನಿಸುತ್ತದೆ” ಎಂದಿದ್ದಾರೆ ಅನಂತ್ ನಾಗ್.
ಇದನ್ನೂ ಓದಿ:‘ನನ್ನ ಸಿನಿಮಾಗಳನ್ನೂ ನಾನು ನೋಡುವುದಿಲ್ಲ’; ಅಚ್ಚರಿಯ ವಿಚಾರ ಬಿಚ್ಚಿಟ್ಟ ಅನಂತ್ ನಾಗ್
ಆ ಮೂಲಕ ಪರೋಕ್ಷವಾಗಿ ಕ್ರೌರ್ಯವನ್ನು ಮೆರೆಸುವ ಸಿನಿಮಾಗಳು ಗೆಲ್ಲುತ್ತಿವೆ, ಆದರೆ ಜೀವನದ ಸತ್ಯಗಳನ್ನು ತಿಳಿಸುವ ಸಿನಿಮಾಗಳೂ ನಿರ್ಮಾಣವಾಗಬೇಕು ಗೆಲ್ಲಬೇಕು ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ. ಅನಂತ್ ನಾಗ್ ಅವರು ಸಹ ಮೊದಲಿನಿಂದಲೂ ಮಾಸ್ ಕತೆಗಳಿಗೆ ಜೋತುಬಿದ್ದವರಲ್ಲ, ಬದಲಿಗೆ ಅಂಥಹಾ ಸಿನಿಮಾಗಳನ್ನು ವಿರೋಧಿಸಿ ಕೆಲವು ಬಾರಿ ಮಾತನಾಡಿದ್ದು ಸಹ ಇದೆ.
‘ಕೆಜಿಎಫ್ 2’ ನಲ್ಲಿ ನಟಿಸಲಿಲ್ಲ ಅನಂತ್ ನಾಗ್
‘ಕೆಜಿಎಫ್’ ಸಿನಿಮಾದಲ್ಲಿ ಅನಂತ್ ನಾಗ್ ನಟಿಸಿದ್ದರು, ಅವರ ಪಾತ್ರ ಭಾರಿ ಹಿಟ್ ಆಗಿತ್ತು, ಆದರೆ ‘ಕೆಜಿಎಫ್ 2’ ಸಿನಿಮಾದಲ್ಲಿ ಅನಂತ್ ನಾಗ್ ನಟಿಸಲಿಲ್ಲ. ‘ಕೆಜಿಎಫ್’ ತಂಡದೊಟ್ಟಿಗೆ ಭಿನ್ನಾಭಿಪ್ರಾಯದಿಂದಾಗಿ ಅನಂತ್ ನಾಗ್ ‘ಕೆಜಿಎಫ್ 2’ ಸಿನಿಮಾದಲ್ಲಿ ನಟಿಸಲಿಲ್ಲ ಎಂಬ ಮಾತುಗಳು ಹರಿದಾಡಿದವು. ಆದರೆ ಆ ಬಗ್ಗೆ ಅನಂತ್ ನಾಗ್ ಪ್ರತಿಕ್ರಿಯೆ ನೀಡಿಲ್ಲ. ‘ಕೆಜಿಎಫ್ 2’ ಸಿನಿಮಾದಲ್ಲಿ ಅನಂತ್ ನಾಗ್ ಬದಲಿಗೆ ಅವರ ಪುತ್ರನಾಗಿ ಪ್ರಕಾಶ್ ರೈ ನಟಿಸಿ, ಕತೆಯನ್ನು ಮುಂದುವರೆಸಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ