ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾವನ್ನು ನೋಡಿ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಫ್ಯಾನ್ಸ್ ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ (Anil Kumble) ಸಹ ‘ವಿಕ್ರಾಂತ್ ರೋಣ’ ಚಿತ್ರವನ್ನು ವೀಕ್ಷಿಸಿದ್ದಾರೆ. ಸಿನಿಮಾ ನೋಡಿ ಮೆಚ್ಚಿಕೊಂಡಿರುವ ಅವರು ತಮ್ಮ ವಿಮರ್ಶೆ ತಿಳಿಸಿದ್ದಾರೆ. ಕನ್ನಡ ಚಿತ್ರರಂಗದ ಜೊತೆ ಅನಿಲ್ ಕುಂಬ್ಳೆ ಅವರು ಮೊದಲಿನಿಂದಲೂ ನಂಟು ಹೊಂದಿದ್ದಾರೆ. ಅವರ ಮತ್ತು ಸುದೀಪ್ (Kichcha Sudeep) ನಡುವೆ ಉತ್ತಮ ಸ್ನೇಹ ಇದೆ. ಈಗ ಸ್ನೇಹಿತನ ಚಿತ್ರಕ್ಕೆ ಅವರು ಭೇಷ್ ಎಂದಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಈ ಸಿನಿಮಾಗೆ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಒಟಿಟಿಯಲ್ಲೂ ‘ವಿಕ್ರಾಂತ್ ರೋಣ’ ಚಿತ್ರ ಧೂಳೆಬ್ಬಿಸುತ್ತಿದೆ.
‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಒಂದು ಸಸ್ಪೆನ್ಸ್ ಕಥೆ ಇದೆ. ಅದೇ ಈ ಚಿತ್ರದ ಜೀವಾಳ. ಸಿನಿಮಾದ ಆ ಗುಣ ಅನಿಲ್ ಕುಂಬ್ಳೆ ಅವರಿಗೆ ಇಷ್ಟ ಆಗಿದೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ. ‘ವಿಕ್ರಾಂತ್ ರೋಣ ಸಿನಿಮಾ ನೋಡಿದೆ. ನನ್ನ ಪ್ರೀತಿಯ ಸ್ನೇಹಿತ ಕಿಚ್ಚ ಸುದೀಪ್ ಅವರ ನಟನೆ ಆಕರ್ಷಕವಾಗಿದೆ. ಕೊನೆವರೆಗೂ ಈ ಸಿನಿಮಾ ಸಸ್ಪೆನ್ಸ್ ಕಾಯ್ದುಕೊಂಡಿದೆ. ವಿಜಯ್ ಪ್ರಕಾಶ್ ಅವರ ಹಾಡು ಅದ್ಭುತವಾಗಿದೆ. ಅನೂಪ್ ಭಂಡಾರಿ ಮತ್ತು ಅವರ ಇಡೀ ತಂಡಕ್ಕೆ ಅಭಿನಂದನೆಗಳು’ ಎಂದು ಅನಿಲ್ ಕುಂಬ್ಳೆ ಪೋಸ್ಟ್ ಮಾಡಿದ್ದಾರೆ.
Watched #VikrantRоna. Stellar performance by my dear friend @KicchaSudeep Element of suspense remained till the end. Wonderful lullaby song by @rvijayprakash ??Congratulations to the entire team #anupbhandari ? ???
— Anil Kumble (@anilkumble1074) September 7, 2022
‘ಸಮಯ ಮಾಡಿಕೊಂಡು ನಮ್ಮ ಸಿನಿಮಾ ನೋಡಿದ್ದಕ್ಕೆ ಧನ್ಯವಾದಗಳು ಸರ್’ ಎಂದು ಕಿಚ್ಚ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಜೀ 5’ ಒಟಿಟಿ ಮೂಲಕ ‘ವಿಕ್ರಾಂತ್ ರೋಣ’ ಚಿತ್ರ ವೀಕ್ಷಣೆಗೆ ಲಭ್ಯವಾಗಿದೆ. ದಾಖಲೆ ಪ್ರಮಾಣದಲ್ಲಿ ವೀಕ್ಷಣೆ ಕಂಡಿರುವುದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ಚಿತ್ರಮಂದಿರದಲ್ಲಿ ಅಬ್ಬರಿಸಿದ ಬಳಿಕ ಒಟಿಟಿಯಲ್ಲಿ 500 ಮಿಲಿಯನ್ ನಿಮಿಷಗಳಷ್ಟು ವೀಕ್ಷಣೆ ಕಂಡಿದ್ದು ಇಡೀ ತಂಡಕ್ಕೆ ಹೆಮ್ಮೆ ತಂದಿದೆ. ‘ಜೀ 5’ನಲ್ಲಿ ಚಿತ್ರದ ನಾಗಾಲೋಟ ಮುಂದುವರಿದಿದೆ.
ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆಗೆ ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್, ನಿರೂಪ್ ಭಂಡಾರಿ, ಮಿಲನಾ ನಾಗರಾಜ್ ಮುಂತಾದವರು ನಟಿಸಿದ್ದಾರೆ. ಅಜನೀಶ್ ಬಿ. ಲೋಕನಾಥ್ ಸಂಗೀತ ನೀಡಿರುವ ಹಾಡುಗಳು ಜನಮನ ಗೆದ್ದಿವೆ. ಅದರಲ್ಲೂ ‘ರಾ ರಾ ರಕ್ಕಮ್ಮ..’ ಹಾಡು ಸೆನ್ಸೇಷನಲ್ ಹಿಟ್ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:28 am, Thu, 8 September 22