‘ಮಾರ್ಟಿನ್​’ ಸಿನಿಮಾ ಬಜೆಟ್​ ಬಗ್ಗೆ ಅಚ್ಚರಿಯ ಮಾಹಿತಿ ನೀಡಿದ ಎ.ಪಿ. ಅರ್ಜುನ್​

ಆದಷ್ಟು ಬೇಗ ‘ಮಾರ್ಟಿನ್​’ ಸಿನಿಮಾವನ್ನು ನೋಡಬೇಕು ಎಂದು ಪ್ರೇಕ್ಷಕರು ಕಾದಿದ್ದಾರೆ. ಧ್ರುವ ಸರ್ಜಾ ಅವರ ಫ್ಯಾನ್ಸ್​ ತುಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬರೋಬ್ಬರಿ 240 ದಿನಗಳ ಕಾಲ ಈ ಸಿನಿಮಾದ ಶೂಟಿಂಗ್​ ಮಾಡಲಾಗಿದೆ. ಇಷ್ಟು ಲೇಟ್​ ಆಗಲು ಕಾರಣ ಏನು ಎಂಬುದನ್ನು ನಿರ್ದೇಶಕ ಎ.ಪಿ. ಅರ್ಜುನ್​ ಅವರು ವಿವರಿಸಿದ್ದಾರೆ. ಅಲ್ಲದೇ ಬಜೆಟ್​ ಬಗ್ಗೆಯೂ ಅವರು ಮಾತನಾಡಿದ್ದಾರೆ.

‘ಮಾರ್ಟಿನ್​’ ಸಿನಿಮಾ ಬಜೆಟ್​ ಬಗ್ಗೆ ಅಚ್ಚರಿಯ ಮಾಹಿತಿ ನೀಡಿದ ಎ.ಪಿ. ಅರ್ಜುನ್​
ಎ.ಪಿ. ಅರ್ಜುನ್​, ಧ್ರುವ ಸರ್ಜಾ
Follow us
ಮದನ್​ ಕುಮಾರ್​
|

Updated on: Mar 06, 2024 | 10:39 PM

‘ಆ್ಯಕ್ಷನ್​ ಪ್ರಿನ್ಸ್​’ ಧ್ರುವ ಸರ್ಜಾ (Dhruva Sarja) ನಟನೆಯ ‘ಮಾರ್ಟಿನ್​’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಮೂಡಿದೆ. ಫಸ್ಟ್​ ಲುಕ್​ ರಿಲೀಸ್​ ಆದ ದಿನದಿಂದಲೂ ಈ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ಅದ್ದೂರಿ ಬಜೆಟ್​ನಲ್ಲಿ ಉದಯ್​ ಕೆ. ಮೆಹ್ತಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಷ್ಟಕ್ಕೂ ‘ಮಾರ್ಟಿನ್​’ ಸಿನಿಮಾದ (Martin Movie) ಬಜೆಟ್​ ಎಷ್ಟು? ಈ ಬಗ್ಗೆ ಎಲ್ಲರಲ್ಲೂ ಕೌತುಕ ಇದೆ. ಸದ್ಯಕ್ಕೆ ಈ ಸಿನಿಮಾದ ಶೂಟಿಂಗ್​ ಮುಗಿದಿದೆ. ಕೊನೇ ದಿನದ ಶೂಟಿಂಗ್​ ಮುಗಿಸಿದ ಬಳಿಕ ನಿರ್ದೇಶಕ ಎ.ಪಿ. ಅರ್ಜುನ್​ (AP Arjun) ಅವರು ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ಚಿತ್ರದ ಬಜೆಟ್​ ಬಗ್ಗೆಯೂ ಅವರು ಇಂಟರೆಸ್ಟಿಂಗ್​ ವಿಚಾರ ಹಂಚಿಕೊಂಡಿದ್ದಾರೆ.

‘ಈ ಸಿನಿಮಾ ಶುರುವಾಗಿ ಎರಡೂವರೆ ವರ್ಷ ಆಯಿತು. 240 ದಿನಗಳ ಕಾಲ ಶೂಟಿಂಗ್​ ಮಾಡಿದ್ದೇವೆ. ಎಷ್ಟು ದಿನ ಶೂಟಿಂಗ್​ ಮಾಡುತ್ತೀರಿ ಅಂತ ಎಲ್ಲರೂ ಕೇಳುತ್ತಿದ್ದರು. ಅದರಿಂದ ನನಗೆ ಮುಜುಗರ ಆಗುತ್ತಿತ್ತು. ಮಾರ್ಟಿನ್​ ಸಿನಿಮಾಗೆ ಇಷ್ಟು ದಿನ ಚಿತ್ರೀಕರಣ ಮಾಡಲಾಗುತ್ತೆ ಅಂತ ನಾನಾಗಲಿ, ನಿರ್ಮಾಪಕರಾಗಲಿ ಅಥವಾ ಧ್ರುವ ಸರ್ಜಾ ಅವರಾಗಲಿ ಊಹಿಸಿರಲಿಲ್ಲ’ ಎಂದು ಎ.ಪಿ. ಅರ್ಜುನ್​ ಹೇಳಿದ್ದಾರೆ.

ಇದನ್ನೂ ಓದಿ: ‘ನಾವೆಲ್ಲ ಸಾಯ್ತೀವಿ’: ತಂದೆ-ತಾಯಿಗೆ ಮೆಸೇಜ್​ ಕಳಿಸಿದ್ದ ‘ಮಾರ್ಟಿನ್​’ ಸಿನಿಮಾ ನಟಿ

‘ಮೊದಲಿಗೆ ಅಂದುಕೊಂಡ ಬಜೆಟ್​ ಬೇರೆ. 35ರಿಂದ 40 ಕೋಟಿ ರೂಪಾಯಿ ಬಜೆಟ್​ನಲ್ಲಿ ಮಾರ್ಟಿನ್​ ಸಿನಿಮಾ ಮಾಡಬೇಕು ಎಂದುಕೊಂಡಿದ್ದೆವು. ಹೋಗ್ತಾ ಹೋಗ್ತಾ 80-90 ದಿನಕ್ಕೆ ಆ ಬಜೆಟ್​ ತಲುಪಿತು. ಇದೊಂದು ಎಪಿಸೋಡ್​ ಚೆನ್ನಾಗಿ ಮಾಡೋಣ ಎಂದುಕೊಂಡು ಎಲ್ಲ ಎಪಿಸೋಡ್​ ದೊಡ್ಡದಾಗುತ್ತಲೇ ಹೋಯ್ತು. ಚೆನ್ನಾಗಿ ಮಾಡಬೇಕು ಎಂದಾಗ ಎಲ್ಲೋ ಒಂದು ಲೊಕೇಷನ್​ನಲ್ಲಿ ಶೂಟ್​ ಮಾಡೋಕೆ ಆಗಲ್ಲ. ಅದಕ್ಕೆ ಅದ್ದೂರಿ ಸೆಟ್​ ಹಾಕಬೇಕಾಯ್ತು’ ಎಂದು ಎ.ಪಿ. ಅರ್ಜುನ್​ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎ.ಪಿ. ಅರ್ಜುನ್​:

‘ಸೆಟ್​ ರೆಡಿ ಮಾಡಿದ ಬಳಿಕ ಬೇರೆ ಬೇರೆ ಅಡೆತಡೆ ಬಂದವು. 18ರಿಂದ 20 ರೀತಿಯ ಸೆಟ್​ ಹಾಕಿದ್ದೆವು. ನಾವು ಪ್ಲಾನ್​ ಮಾಡಿದಾಗ 20 ದಿನಕ್ಕೆ ಸೆಟ್​ ಕೆಲಸ ಮುಗಿಯಬಹುದು ಎಂದುಕೊಂಡಿರುತ್ತೇವೆ. ಆದರೆ ಅದು ಇನ್ನೂ ಹೆಚ್ಚಿನ ದಿನ ಬೇಡುತ್ತದೆ. ಇನ್ನೇನು ಶೂಟ್​ ಮಾಡಬೇಕು ಎಂದಾಗ ಮಳೆ ಬರುತ್ತದೆ. ಕ್ಲೈಮ್ಯಾಕ್ಸ್​ ದೃಶ್ಯವನ್ನು 25 ದಿನದಲ್ಲಿ ಶೂಟಿಂಗ್​ ಮಾಡಬೇಕು ಎಂದುಕೊಂಡಿದ್ವಿ. ಆದರೆ ಅದು 52 ದಿನ ಆಯ್ತು. 52 ದಿನದಲ್ಲಿ ಇಡೀ ಸಿನಿಮಾ ಚಿತ್ರೀಕರಣ ಮಾಡಬಹುದು ಅಂತ ಎಲ್ಲರೂ ಕಾಲೆಳೆದರು’ ಎಂದಿದ್ದಾರೆ ಎ.ಪಿ. ಅರ್ಜುನ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.