Apoorva Bharadwaj: ಹಿರಿದಾಗುತ್ತಿದೆ ‘ಬ್ಯಾಡ್’ ಸಿನಿಮಾದ ಪಾತ್ರವರ್ಗ; ಪಿ.ಸಿ. ಶೇಖರ್ ನಿರ್ದೇಶನದ ಚಿತ್ರಕ್ಕೆ ಅಪೂರ್ವಾ ಭಾರದ್ವಾಜ್ ಎಂಟ್ರಿ
Bad Kannada movie: ‘ಈ ಮೊದಲು ಅಪೂರ್ವಾ ನಟಿಸಿದ್ದ ಧಾರಾವಾಹಿ ಮತ್ತು ಚಿತ್ರಗಳನ್ನು ನೋಡಿದ್ದೆ. ಅವರೇ ಈ ಪಾತ್ರಕ್ಕೆ ಹೊಂದಿಕೆ ಆಗುತ್ತಾರೆ ಅಂತ ಆಯ್ಕೆ ಮಾಡಿಕೊಂಡೆವು’ ಎಂದು ನಿರ್ದೇಶಕ ಪಿ.ಸಿ. ಶೇಖರ್ ಹೇಳಿದ್ದಾರೆ.
ಕನ್ನಡದ ‘ಬ್ಯಾಡ್’ (Bad movie) ಸಿನಿಮಾಗೆ ಪಿ.ಸಿ. ಶೇಖರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆ ಗಮನ ಸೆಳೆಯುತ್ತಿದೆ. ಕಾಮ, ಕ್ರೋಧ, ಮತ್ಸರ ಮುಂತಾದ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ 6 ಪಾತ್ರಗಳು ಈ ಸಿನಿಮಾದಲ್ಲಿ ಇರಲಿವೆ ಎಂದು ಚಿತ್ರತಂಡದವರು ಈ ಮೊದಲೇ ತಿಳಿಸಿದ್ದರು. ‘ಪ್ರೀತಿಯ ರಾಯಭಾರಿ’ ಖ್ಯಾತಿಯ ನಕುಲ್ ಗೌಡ, ಮಾನ್ವಿತಾ ಕಾಮತ್ (Manvitha Kamath) ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಈಗಾಗಲೇ ಮಾಹಿತಿ ಸಿಕ್ಕಿತ್ತು. ಈಗ ಈ ಚಿತ್ರದಲ್ಲಿನ ಮತ್ತೋರ್ವ ಕಲಾವಿದೆಯನ್ನು ಪರಿಚಯಿಸಲಾಗಿದೆ. ನಟಿ ಅಪೂರ್ವಾ ಭಾರದ್ವಾಜ್ (Apoorva Bharadwaj) ಕೂಡ ‘ಬ್ಯಾಡ್’ ಸಿನಿಮಾ ತಂಡವನ್ನು ಸೇರಿಕೊಂಡಿದ್ದಾರೆ.
ಕನ್ನಡ ಕಿರುತೆರೆಯ ಅನೇಕ ಫೇಮಸ್ ಧಾರಾವಾಹಿಗಳಲ್ಲಿ ಅಪೂರ್ವಾ ಭಾರದ್ವಾಜ್ ನಟಿಸಿದ್ದಾರೆ. ಆ ಮೂಲಕ ಅವರು ಜನರಿಗೆ ಪರಿಚಿತರಾಗಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ‘ನಾನು, ಅದು ಮತ್ತು ಸರೋಜ’ ಸಿನಿಮಾದಲ್ಲಿ ಅಪೂರ್ವಾ ನಟಿಸಿದ್ದರು. ಈಗ ಅವರಿಗೆ ‘ಬ್ಯಾಡ್’ ಸಿನಿಮಾದಲ್ಲೂ ನಟಿಸುವ ಅವಕಾಶ ಸಿಕ್ಕಿದೆ. ಅವರ ಪಾತ್ರ ಇಂಟರೆಸ್ಟಿಂಗ್ ಆಗಿದೆ. ಕಾಮವನ್ನು ಪ್ರತಿನಿಧಿಸುವ ಅನು ಎಂಬ ಪಾತ್ರಕ್ಕೆ ಅವರು ಬಣ್ಣ ಹಚ್ಚುತ್ತಿದ್ದಾರೆ. ಸಾಯಿ ಕೃಷ್ಣ, ಅಶ್ವಿನಿ, ಮಂಜುನಾಥ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ‘BAD’ ಸಿನಿಮಾದಲ್ಲಿ ನಟಿ ಮಾನ್ವಿತಾ ಕಾಮತ್; ಯಾವುದಕ್ಕೂ ಅಂಜದ ಬೋಲ್ಡ್ ಹುಡುಗಿ ಪಾತ್ರ
‘ಸಣ್ಣ ವಯಸ್ಸಿನಲ್ಲೇ ಅಮ್ಮನನ್ನು ಕಳೆದುಕೊಂಡ ಹುಡುಗಿಯ ಪಾತ್ರ ಇದು. ಅಪ್ಪನ ಆಸರೆಯಲ್ಲಿ ಆಕೆ ಬೆಳೆಯುತ್ತಾಳೆ. ತಾಯಿಯ ಪ್ರೀತಿಯನ್ನು ಕಾಣದ ಈ ಅನು ಎಂಬ ಹುಡುಗಿಗೆ ಜನರ ಬಳಿ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದು ತಿಳಿದಿರುವುದಿಲ್ಲ. ಇಂಥ ಪಾತ್ರಕ್ಕೆ ಡೈಲಾಗ್ ಕಡಿಮೆ. ಕಣ್ಣಿನಲ್ಲೇ ಎಲ್ಲ ಭಾವನೆಗಳನ್ನು ವ್ಯಕ್ತಪಡಿಸುವ ಪಾತ್ರವಿದು. ಗುಂಗುರು ಕೂದಲು ಹೊಂದಿರುವ ಸಹಜ ಸುಂದರಿಯ ರೀತಿ ಕಾಣುವ ನಟಿ ಬೇಕಿತ್ತು. ಅಪೂರ್ವಾ ನಟಿಸಿದ್ದ ಧಾರಾವಾಹಿ ಮತ್ತು ಚಿತ್ರಗಳನ್ನು ನೋಡಿದ್ದೆ. ಅವರೇ ಈ ಪಾತ್ರಕ್ಕೆ ಹೊಂದಿಕೆ ಆಗುತ್ತಾರೆ ಅಂತ ಆಯ್ಕೆ ಮಾಡಿಕೊಂಡೆವು’ ಎಂದಿದ್ದಾರೆ ನಿರ್ದೇಶಕ ಪಿ.ಸಿ. ಶೇಖರ್.
ಪಿಂಕ್ ಶೇಡ್ನಲ್ಲಿ ಈ ಪಾತ್ರವನ್ನು ನಿರ್ದೇಶಕರು ಚಿತ್ರಿಸಿದ್ದಾರೆ. ಎಸ್.ಆರ್. ವೆಂಕಟೇಶ್ ಗೌಡ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಶಕ್ತಿ ಶೇಖರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸಚಿನ್ ಬಿ. ಹೊಳಗುಂಡಿ ಅವರು ‘ಬ್ಯಾಡ್’ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ. ಜಿ. ರಾಜಶೇಖರ್ ಅವರು ಕಲಾ ನಿರ್ದೇಶನ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.