ಪತಿ ಶಕ್ತಿ ಪ್ರಸಾದ್ ಸಮಾಧಿ ಪಕ್ಕದಲ್ಲೇ ಅರ್ಜುನ್​ ಸರ್ಜಾ ತಾಯಿ ಲಕ್ಷ್ಮೀದೇವಮ್ಮ ಅಂತ್ಯಕ್ರಿಯೆ

Arjun Sarja Mother | Lakshmi Devamma Funeral: ಮಧುಗಿರಿ ತಾಲ್ಲೂಕಿನ ಜಕ್ಕೇನಹಳ್ಳಿಯಲ್ಲಿ ಲಕ್ಷ್ಮೀದೇವಮ್ಮ ಅವರ ಅಂತ್ಯಕ್ರಿಯೆ ಮಾಡಲಾಗಿದೆ. ಅರ್ಜುನ್​ ಸರ್ಜಾ ಕುಟುಂಬದ ಸದಸ್ಯರ ಜತೆ ಗ್ರಾಮಸ್ಥರು ಕೂಡ ಅಂತಿಮ ಸಂಸ್ಕಾರದಲ್ಲಿ ಭಾಗಿ ಆಗಿದ್ದಾರೆ.

ಪತಿ ಶಕ್ತಿ ಪ್ರಸಾದ್ ಸಮಾಧಿ ಪಕ್ಕದಲ್ಲೇ ಅರ್ಜುನ್​ ಸರ್ಜಾ ತಾಯಿ ಲಕ್ಷ್ಮೀದೇವಮ್ಮ ಅಂತ್ಯಕ್ರಿಯೆ
ಲಕ್ಷ್ಮೀದೇವಮ್ಮ ಅಂತ್ಯಕ್ರಿಯೆ
TV9kannada Web Team

| Edited By: Madan Kumar

Jul 24, 2022 | 3:16 PM

ನಟ ಅರ್ಜುನ್​ ಸರ್ಜಾ (Arjun Sarja) ಅವರ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಅವರ ತಾಯಿ ಲಕ್ಷ್ಮೀದೇವಮ್ಮ (Lakshmi Devamma) ಶನಿವಾರ (ಜುಲೈ 23) ನಿಧನರಾಗಿದ್ದು, ಇಂದು (ಜುಲೈ 24) ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಕುಟುಂಬದ ಹಿರಿಯ ಜೀವವನ್ನು ಕಳೆದುಕೊಂಡು ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ. ಲಕ್ಷ್ಮೀದೇವಮ್ಮ ಅವರಿಗೆ 83 ವರ್ಷ ವಯಸ್ಸಾಗಿತ್ತು. ಹೆಸರಾಂತ ನಟ ಶಕ್ತಿ ಪ್ರಸಾದ್​ ಅವರ ಪತ್ನಿ ಆಗಿದ್ದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹುಟ್ಟೂರಾದ ಮಧುಗಿರಿ ತಾಲ್ಲೂಕಿನ ಜಕ್ಕೇನಹಳ್ಳಿಯಲ್ಲಿ ಅವರ ಅಂತಿಮ ಸಂಸ್ಕಾರ (Lakshmi Devamma Funeral) ಮಾಡಲಾಗಿದೆ. ಶಕ್ತಿ ಪ್ರಸಾದ್ ಸಮಾಧಿ ಪಕ್ಕವೇ ಲಕ್ಷ್ಮೀದೇವಮ್ಮ ಕೂಡ ಮಣ್ಣಲ್ಲಿ ಮಣ್ಣಾಗಿದ್ದಾರೆ. ಅರ್ಜುನ್​ ಸರ್ಜಾ, ಧ್ರುವ ಸರ್ಜಾ ಸೇರಿದಂತೆ ಕುಟುಂಬದ ಹಲವರ ಜತೆ ಗ್ರಾಮಸ್ಥರು ಕೂಡ ಅಂತ್ಯಕ್ರಿಯೆಯಲ್ಲಿ ಭಾಗಿ ಆಗಿದ್ದಾರೆ.

ಜುಲೈ 24ರ ಬೆಳಗ್ಗೆ ಬೆಂಗಳೂರಿನಿಂದ ಲಕ್ಷ್ಮೀದೇವಮ್ಮ ಅವರ ಪಾರ್ಥಿವ ಶರೀರವನ್ನು ಜಕ್ಕೇನಹಳ್ಳಿಯ ತೋಟದ ಮನೆಗೆ ತರಲಾಯಿತು. ಅಲ್ಲಿ ಕೆಲವು ಗಂಟೆಗಳ ಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಹೋಬಲ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಬೀದಿ ಮೂಲಕ ಪಾರ್ಥಿವ ಶರೀರ ತರಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಮುಖ್ಯಸ್ಥೆ ಆಗಿ ಅವರು ಕೆಲಸ ಮಾಡಿದ್ದರು. ದೇವಸ್ಥಾನದ ಅಭಿವೃದ್ಧಿಗೆ ನೆರವು ನೀಡಿದ್ದರು.

ಲಕ್ಷ್ಮೀದೇವಮ್ಮ ಅವರ ಅಂತ್ಯಕ್ರಿಯೆಯನ್ನು ಒಕ್ಕಲಿಗ ಸಂಪ್ರದಾಯದಂತೆ ನೆರವೇರಿಸಲಾಗಿದೆ. ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರು ಅಂತಿಮ ದರ್ಶನ ಪಡೆದರು. ಬಳಿಕ ಅವರು ಅರ್ಜುನ್​ ಸರ್ಜಾಗೆ ಸಾಂತ್ವನ ಹೇಳಿದರು. ಲಕ್ಷ್ಮೀದೇವಮ್ಮ ಅವರಿಗೆ ಮೂವರು (ಕಿಶೋರ್ ಸರ್ಜಾ, ಅರ್ಜುನ್ ಸರ್ಜಾ ಹಾಗೂ ಅಮ್ಮಾಜಿ) ಮಕ್ಕಳು. ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಹಾಗೂ ಸೂರಜ್ ಸರ್ಜಾ ಮೊಮ್ಮಕ್ಕಳು.

2020ರ ಜೂನ್ 7ರಂದು ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದು ನೋವಿನ ಸಂಗತಿ. ಸರ್ಜಾ ಕುಟುಂಬದವರಿಗೆ ಆ ನೋವು ಎಂದಿಗೂ ಮರೆಯಾಗುವಂಥದ್ದಲ್ಲ. ಚಿರು ನಿಧನದ ಬಳಿಕ ಲಕ್ಷ್ಮೀದೇವಮ್ಮ ತೀವ್ರವಾಗಿ ನೊಂದಿದ್ದರು. ಈಗ ಅವರು ಕೂಡ ಇಹಲೋಕ ತ್ಯಜಿಸಿರುವುದು ಇಡೀ ಸರ್ಜಾ ಕುಟುಂಬಕ್ಕೆ ದುಃಖ ತಂದಿದೆ.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada