ಸೆ.5ಕ್ಕೆ ರಿಲೀಸ್ ಆಗಲಿದೆ ಡಿಫರೆಂಟ್ ಕಥಾಹಂದರದ ‘ಆಸ್ಟಿನ್ನ ಮಹನ್ಮೌನ’ ಸಿನಿಮಾ
‘ಆಸ್ಟಿನ್ನ ಮಹನ್ಮೌನ’ ಚಿತ್ರದಲ್ಲಿ ಲವ್, ಥ್ರಿಲ್ಲಿಂಗ್ ಮತ್ತು ಭಾವನಾತ್ಮಕ ಕಥೆ ಇದೆ. ಈ ಮಹಾ ಮೌನದ ಹಿಂದಿರುವ ಘಟನೆಯೇ ಇಡಿ ಸಿನಿಮಾದ ಹೈಲೈಟ್. 90ರ ಕಾಲಘಟ್ಟದಲ್ಲಿ ನಡೆಯುವ , ಕಡಲ ತೀರದ ಒಂದು ಕುಟುಂಬದ ಕಥೆಯನ್ನು ಈ ಸಿನಿಮಾ ತೆರೆದಿಡಲಿದೆ ಎಂದು ಚಿತ್ರತಂಡ ಹೇಳಿದೆ.

ಡಿಫರೆಂಟ್ ಶೀರ್ಷಿಕೆಯಿಂದ ‘ಆಸ್ಟಿನ್ನ ಮಹನ್ಮೌನ’ (Austin Na Mahan Mouna) ಸಿನಿಮಾ ಗಮನ ಸೆಳೆಯುತ್ತಿದೆ. ಬಹುತೇಕ ಹೊಸಬರೇ ಸೇರಿಕೊಂಡು ಈ ಸಿನಿಮಾ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಮಾಡಲಾಯಿತು. ಸೆಪ್ಟೆಂಬರ್ 5ರಂದು ‘ಆಸ್ಟಿನ್ನ ಮಹನ್ಮೌನ’ ಚಿತ್ರ ತೆರೆಕಾಣಲಿದೆ. ಕೆ. ಮಂಜು (K Manju) ಅವರು ಮುಖ್ಯ ಅತಿಥಿಯಾಗಿ ಬಂದು ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದರು. ಬಳಿಕ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದರು. ಡಿವಿಜಿ ಅವರ ಮೊಮ್ಮಗ ಸುಬ್ರಮಣಿ ಕೂಡ ಈ ಕಾರ್ಯಕ್ರಮದಲ್ಲ ಭಾಗಿಯಾಗಿದ್ದರು. ಅದಕ್ಕೆ ಕಾರಣ ಕೂಡ ಇದೆ.
ಸುಬ್ರಮಣಿ ಅವರ ಅಳಿಯ ವಿನಯ್ ಕುಮಾರ್ ವೈದ್ಯನಾಥನ್ ಅವರು ‘ಆಸ್ಟಿನ್ನ ಮಹನ್ಮೌನ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಕೂಡ ಅವರದ್ದೇ. ಅಲ್ಲದೇ ಪ್ರಮುಖ ಪಾತ್ರದಲ್ಲೂ ಅವರು ಅಭಿನಯಿಸಿದ್ದಾರೆ. ಕೆ. ಮಂಜು ಮಾತನಾಡಿ, ‘ನಾನು ಈ ಕಾರ್ಯಕ್ರಮಕ್ಕೆ ಬರಲು ಮುಖ್ಯ ಕಾರಣ ನಮ್ಮ ಗುರುಗಳಾದ ಸುಬ್ರಮಣಿ. ಇವರು ಡಿವಿಜಿಯವರ ಮೊಮ್ಮಗ. ಅವರ ಅಳಿಯ ನಟಿಸಿ, ನಿರ್ಮಿಸಿರುವ ಈ ಸಿನಿಮಾದ ಟ್ರೇಲರ್ ಬಹಳ ಭಿನ್ನವಾಗಿದೆ’ ಎಂದು ಅವರು ಹೇಳಿದರು.
ಸುಬ್ರಮಣಿ ಅವರು ಮಾತನಾಡಿ, ‘ನನ್ನ ತಂಗಿಯ ಮಗ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಓದಿದ್ದಾನೆ. ಅವನು ಸಿನಿಮಾ ಕ್ಷೇತ್ರಕ್ಕೆ ಯಾಕೆ ಬಂದ ಎಂಬ ಪ್ರಶ್ನೆ ನನ್ನಲ್ಲಿ ಇತ್ತು. ಬರವಣಿಗೆ, ಸಾಹಿತ್ಯದ ಬಗ್ಗೆ ಬಹಳಷ್ಟು ಆಸಕ್ತಿ ಬೆಳೆಸಿಕೊಂಡಿದ್ದಾನೆ. ನಮ್ಮ ಹುಡುಗನ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲ ಬೇಕು’ ಎಂದರು. ‘ಕೆಆರ್‌ಜೆ ಫಿಲ್ಮ್ಸ್’ ಮೂಲಕ ‘ಆಸ್ಟಿನ್ನ ಮಹನ್ಮೌನ’ ಸಿನಿಮಾ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ.
‘ಆಸ್ಟಿನ್ನ ಮಹನ್ಮೌನ’ ಸಿನಿಮಾದ ಟ್ರೇಲರ್:
‘ಆಸ್ಟಿನ್ನ ಮಹನ್ಮೌನ’ ಸಿನಿಮಾದ ನಟ, ನಿರ್ದೇಶಕ , ನಿರ್ಮಾಪಕ ವಿನಯ್ ಕುಮಾರ್ ವೈದ್ಯನಾಥನ್ ಮಾತನಾಡಿದರು. ‘ಅನೇಕ ಸಿನಿಮಾಗಳಲ್ಲಿ ಸಹ-ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ನಂತರ ಕಿರುಚಿತ್ರಗಳನ್ನ ನಿರ್ದೇಶಿಸಿದ್ದೇನೆ. 13 ವರ್ಷದ ನಿರಂತರ ಶ್ರಮದ ಫಲವಾಗಿ ಈಗ AVV ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ಹೀರೋ ಆಗಿ ನಟಿಸಿ, ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದೇನೆ’ ಎಂದು ಹೇಳಿದರು.
ಇದನ್ನೂ ಓದಿ: ‘ಕಬ್ಜ’ ಚಿತ್ರದಿಂದ ಆದ ನಷ್ಟು ಎಷ್ಟು? ಕೊನೆಗೂ ಮೌನ ಮುರಿದ ಆರ್.ಚಂದ್ರು
ಈ ಸಿನಿಮಾಗೆ ವಿಶ್ವಿ ಅವರು ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿವೆ. ಪ್ರಕೃತಿ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ‘ನನಗೆ ನಿರ್ದೇಶಕರು ಕೊಟ್ಟಿರುವ ಪಾತ್ರ ಬಹಳ ಉತ್ತಮವಾಗಿದೆ’ ಎಂದು ಅವರು ಹೇಳಿದರು. ರಿಷಾ ಗೌಡ, ಬಾಲರಾಜ್ವಾಡಿ , ರಘು ರಾಮನಕೊಪ್ಪ, ಸ್ವಾತಿ, ಜಗಪ್ಪ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ರಾಜಕಾಂತ್ ಅವರ ಛಾಯಾಗ್ರಹಣ, ಶ್ರೀನಿವಾಸ್ ಮತ್ತು ಶಶಿಧರ್ ಅವರ ಸಂಕಲನ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




