
ವಿಷ್ಣುವರ್ಧನ್ ನಟನೆಯ ‘ಬಂಧನ’ ಸಿನಿಮಾ (Bandhana Movie) 1984ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದು ಗೊತ್ತೇ ಇದೆ. ಇದು ಇತಿಹಾಸ ಪುಟಗಳಲ್ಲಿ ಸೇರಿಕೊಂಡಿದೆ. ಈ ಚಿತ್ರ ತೆರೆಗೆ ಬಂದು 31 ವರ್ಷಗಳು ಕಳೆದಿವೆ. ಈ ಸಿನಿಮಾ ಹಿಟ್ ಆಗಿದ್ದರ ಹಿಂದೆ ಒಂದು ದೊಡ್ಡ ಕಥೆಯೇ ಇದೆ. ವಿಷ್ಣು ಚಿತ್ರಕ್ಕೆ ಅಡ್ಡಿ ಮಾಡಬೇಕು ಎಂದು ಸಾಕಷ್ಟು ಕುತಂತ್ರಗಳು ನಡೆದಿದ್ದವು. ಹಾಗಂತ ಇದ್ಯಾವುದೂ ಅಚಾನಕ್ಕಾಗಿ ಆಗಿದ್ದಲ್ಲ. ಅವೆಲ್ಲವೂ ಉದ್ದೇಶ ಪೂರ್ವಕವಾಗಿಯೇ ಮಾಡಿದ್ದಾಗಿತ್ತು ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಈ ಬಗ್ಗೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದರು.
‘ಬಂಧನ ಸಿನಿಮಾ ರಿಲೀಸ್ ಆಯಿತು. ಥಿಯೇಟರ್ ಒಳಗೆ ಖಾರದ ಪುಡಿ ಎರಚುತ್ತಿದ್ದರು. ಹೆಂಗಸರು ಬರಬಾರದು ಎನ್ನುವ ಕಾರಣಕ್ಕೆ ಈ ರೀತಿ ಮಾಡುತ್ತಿದ್ದರು. ಅಲ್ಲದೆ, ಟಿಕೆಟ್ ಕೌಂಟರ್ನಲ್ಲಿ ಬ್ಲೇಡ್ ಹೊಡೆಯುತ್ತಿದ್ದರು ಎಂದು ಥಿಯೇಟರ್ನವರು ಹೇಳಿದರು. ಆ ಸಂದರ್ಭದಲ್ಲಿ ಹೆಗಡೆ (ರಾಮಕೃಷ್ಣ ಹೆಗಡೆ) ಅವರು ಸಿಎಂ ಆಗಿದ್ದರು. ಅವರ ಬಳಿ ನಾವು ಮಾತನಾಡಿದೆವು. ಜೀವ್ರಾಜ್ ಆಳ್ವಾ ಆಪ್ತರು. ಸಿನಿಮಾ ನೋಡೋಕೆ ಬಿಡ್ತಿಲ್ಲ ಎಂದು ಅವರ ಬಳಿ ಹೇಳಿದ್ವಿ. ಅವರು ಪೊಲೀಸರಿಗೆ ರಕ್ಷಣೆ ಕೊಡುವಂತೆ ಸೂಚಿಸಿದರು. ಆ ಬಳಿಕ 25 ಜನರ ಬಂಧನ ಆಯಿತು’ ಎಂದಿದ್ದರು ರಾಜೇಂದ್ರ ಸಿಂಗ್ ಬಾಬು.
‘ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ದೊಡ್ಡ ಕಟೌಟ್ ಹಾಕಿದೆವು. ಆದರೆ, ಅದಕ್ಕೆ ಸೀಮೆ ಎಣ್ಣೆ ಹಾಕಿ ಸುಡಲಾಯಿತು. ಅಭಿಮಾನಿಗಳು ಬಂದು ಬೇರೆ ಕಟೌಟ್ ಹಾಕೋಣ ಎಂದರು. ಬೇಡ, ದೃಷ್ಟಿ ಪರಿಹಾರ ಎಂದು ನಾನು ಹೇಳಿದೆ. ಅದನ್ನು ಹಾಗೆಯೇ ಬಿಟ್ಟಿದ್ದೆ. ಸಿನಿಮಾನ ಯಾರೂ ನಿಲ್ಲಿಸೋಕೆ ಆಗಲಿಲ್ಲ. 25 ಸೆಂಟರ್ಗಳಲ್ಲಿ 25 ವಾರ ಸಿನಿಮಾ ಪ್ರದರ್ಶನ ಕಂಡಿತು. ಇದು ಸಿನಿಮಾ ಮಾಡಿದ ಸಾಧನೆ. 25 ವಾರ ಆ ಕಟೌಟ್ ಹಾಗೆಯೇ ಇತ್ತು’ ಎಂದರು ಅವರು.
‘ಕನ್ನಡ ಗೊತ್ತಿಲ್ಲದೆ ಇರುವವರು ಈ ಸಿನಿಮಾ ನೋಡಲು ಆರಂಭಿಸಿದರು. ಈ ಸಿನಿಮಾದ ಹಾಡನ್ನು ಇಷ್ಟಪಟ್ಟು ಹಾಡೋಕೆ ಆರಂಭಿಸಿದರು. ಇದು ಆ ಸಿನಿಮಾ ಮಾಡಿದ ದೊಡ್ಡ ಸಾಧನೆಗಳಲ್ಲಿ ಒಂದಾಗಿತ್ತು. ಈ ಚಿತ್ರವನ್ನು ಆಗಿನ ಕಾಲದಲ್ಲಿ ಯಾರೂ ತಡೆಯಲು ಸಾಧ್ಯವೇ ಆಗಿರಲಿಲ್ಲ’ ಎಂದು ಅವರು ವಿವರಿಸಿದರು.
ಇದನ್ನೂ ಓದಿ: ವಿಷ್ಣುವರ್ಧನ್ ಜನ್ಮದಿನವನ್ನು ‘ಯಜಮಾನರ ಅಮೃತ ಮಹೋತ್ಸವ’ ಆಗಿ ಆಚರಣೆ; ಹೀಗಿದೆ ಕಾರ್ಯಕ್ರಮದ ರೂಪುರೇಷೆ
ಶೀಘ್ರವೇ ವಿಷ್ಣುವರ್ಧನ್ ಬರ್ತ್ಡೇ ಬರುತ್ತಿದೆ. ಈ ವರ್ಷ ವಿಷ್ಣುವರ್ಧನ್ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.