
ದರ್ಶನ್ ಅಭಿಮಾನಿಗಳು ಮತ್ತು ಕಿಚ್ಚ ಸುದೀಪ್ (Kichcha Sudeep) ಅವರ ಅಭಿಮಾನಿಗಳ ನಡುವೆ ಘರ್ಷಣೆ ಏರ್ಪಟ್ಟಿದೆ. ಕಿಚ್ಚ ಸುದೀಪ್ ಅವರು ‘ಮಾರ್ಕ್’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ವೇಳೆ ನೀಡಿದ ಹೇಳಿಕೆಯಿಂದ ವಿವಾದ ಶುರುವಾಗಿದೆ. ಡಿಸೆಂಬರ್ 25ರಂದು ‘ಮಾರ್ಕ್’ ಚಿತ್ರ ಬಿಡುಗಡೆ ಆಗಲಿದೆ. ಈ ಸಮಯಕ್ಕೆ ವಿವಾದ ಆರಂಭ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ನಟ ರಜತ್ ಕಿಶನ್ (Rajath Kishan) ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಫ್ಯಾನ್ಸ್ ವಾರ್ ಬಗ್ಗೆ ಟಿವಿ9 ಜೊತೆ ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ದಯವಿಟ್ಟು ಇದನ್ನ ಫ್ಯಾನ್ಸ್ ವಾರ್ ಎಂದು ಕರೆಯಬೇಡಿ. ದರ್ಶನ್ ಮತ್ತು ಸುದೀಪ್ ಅವರು ಕರ್ನಾಟಕದ ಆಸ್ತಿ. ಅಭಿಮಾನಿಗಳು ಇದನ್ನು ಸಭ್ಯ ರೀತಿಯಲ್ಲಿ ನೋಡಬೇಕು. ಅವರ ಬಗ್ಗೆ ಮಾತಾಡುವಷ್ಟು ದೊಡ್ಡವನು ನಾನಲ್ಲ. ನನ್ನನ್ನು ಎಲ್ಲರೂ ದರ್ಶನ ಸರ್ ಫ್ಯಾನ್ ಎಂದು ಹೇಳಿದ್ದಾರೆ. ಅದು ನಿಜ ಕೂಡ ಹೌದು. ನನಗೆ ಒಂದು ಪರ್ಸನಲ್ ಸಮಸ್ಯೆ ಆಗಿತ್ತು. ರಾತ್ರಿ 2 ಗಂಟೆ, 3 ಗಂಟೆಗೆಲ್ಲ ಸುದೀಪ್ ಸರ್ ನಮ್ಮ ಮನೆಗೆ ಫೋನ್ ಮಾಡಿ, ನಾವು ಸೇಫ್ ಆಗಿದ್ದೇವೆ ಎಂಬ ವಿಷಯ ತಿಳಿದುಕೊಳ್ಳುವ ತನಕ ನಿದ್ದೆ ಮಾಡಿರಲಿಲ್ಲ. ಹಾಗಾಗಿ ಒಬ್ಬ ದರ್ಶನ್ ಸರ್ ಅಭಿಮಾನಿಯನ್ನು ಕಾಪಾಡಿದ್ದು ಸುದೀಪ್ ಸರ್’ ಎಂದಿದ್ದಾರೆ ರಜತ್.
‘ಸುದೀಪ್ ಮತ್ತು ದರ್ಶನ್ ಅವರು ನನ್ನ ಜೀವನದಲ್ಲಿ ಬಹಳ ಮುಖ್ಯ. ನಮ್ಮ ಅಪ್ಪ, ಅಮ್ಮನನ್ನು ಬಿಟ್ಟರೆ ನಾನು ತುಂಬಾ ಪ್ರೀತಿಸುವ ಅತಿ ಮುಖ್ಯವಾದ ವ್ಯಕ್ತಿಗಳು ಅವರಿಬ್ಬರು. ಇಬ್ಬರಿಗೂ ಒಳ್ಳೆಯದಾಗಲಿ. ಯಾರೂ ಇದನ್ನು ದೊಡ್ಡ ವಿಷಯ ಮಾಡುವುದು ಬೇಡ’ ಎಂದಿದ್ದಾರೆ ರಜತ್. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿರುವ ಅವರು ‘ದಿ ಡೆವಿಲ್’ ಮತ್ತು ‘ಮಾರ್ಕ್’ ಎರಡೂ ಸಿನಿಮಾವನ್ನು ವೀಕ್ಷಿಸುವುದಾಗಿ ಹೇಳಿದ್ದಾರೆ.
‘ದಿ ಡೆವಿಲ್ ಮತ್ತು ಮಾರ್ಕ್ ನಡುವೆ ನನ್ನ ಆಯ್ಕೆ ಯಾವುದು ಅಂತ ಕೇಳಿದರೆ, ಕನ್ನಡ ಸಿನಿಮಾ ಎಂಬುದು ನನ್ನ ಉತ್ತರ. ನಾನು ರಾಜ್ಕುಮಾರ್ ಫ್ಯಾನ್. ಅಲ್ಲಿಂದ ನೋಡಿಕೊಂಡು ಬಂದಿದ್ದೇವೆ. ಯಾವ ಸಿನಿಮಾ ಚೆನ್ನಾಗಿ ಇದೆಯೋ ಅದನ್ನು ನೋಡುತ್ತೇವೆ. ಇಷ್ಟ ಆಗಿಲ್ಲ ಎಂದರೆ ನೋಡಲ್ಲ. ದಿ ಡೆವಿಲ್ ಮತ್ತು ಮಾರ್ಕ್ ಎರಡೂ ಕೂಡ ನಮ್ಮ ಸಿನಿಮಾ’ ಎಂದಿದ್ದಾರೆ ರಜತ್.
ಇದನ್ನೂ ಓದಿ: ಯುದ್ಧಕ್ಕೆ ಸಿದ್ಧ: ಸುದೀಪ್ ಮಾತಿನ ನಿಜವಾದ ಅರ್ಥ ಏನು? ವಿವರಿಸಿದ ಕಿಚ್ಚನ ಆಪ್ತ ರಾಜು ಗೌಡ
‘ಆಗುತ್ತಿರುವ ವಿವಾದದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಅವರಿಬ್ಬರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ದರ್ಶನ್ ಸರ್ ಎಂದರೆ ನನಗೆ ಅತಿಯಾದ ಪ್ರೀತಿ. ಸುದೀಪ್ ಸರ್ ಎಂದರೆ ಅಪಾರ ಗೌರವ. ನನಗೆ ಬಿಗ್ ಬಾಸ್ ತುಂಬಾ ಇಷ್ಟ ಯಾಕೆಂದರೆ, ಅದು ನನಗೆ ಸುದೀಪ್ ಅವರನ್ನು ಮೊದಲ ಬಾರಿಗೆ ಪರಿಚಯ ಮಾಡಿಸಿತು. ಅಲ್ಲಿ ನಮ್ಮ ಮಾತನ್ನು ಕೇಳಿ ಖುಷಿಯಿಂದ ನಕ್ಕ ವ್ಯಕ್ತಿ ಅವರು. ನಮಗೆ ಒಂದು ರೆಸಾರ್ಟ್ ಓಪನಿಂಗ್ ಇದ್ದಾಗ ಏನೂ ನಿರೀಕ್ಷೆ ಮಾಡದೇ ಬಂದು ಓಪನಿಂಗ್ ಮಾಡಿಕೊಟ್ಟಿದ್ದು ದರ್ಶನ್ ಸರ್. ಎಂದಿಗೂ ನಾನು ನಿಯತ್ತಿಗೆ ಆಭಾರಿ. ಇಬ್ಬರೂ ನನಗೆ ಸಿಕ್ಕಾಪಟ್ಟೆ ಇಷ್ಟ’ ಎಂದು ರಜತ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.