7 ವರ್ಷದ ಬಳಿಕ ಹೊಸ ಸಿನಿಮಾ ಶುರು ಮಾಡಿದ ‘ಬೆಲ್ ಬಾಟಂ’ ನಿರ್ಮಾಪಕ ಸಂತೋಷ್

‘ಬೆಲ್ ಬಾಟಂ’ ಸಿನಿಮಾ ಮೂಲಕ ಗೆಲವು ಕಂಡಿದ್ದ ನಿರ್ಮಾಪಕ ಸಂತೋಷ್ ಕುಮಾರ್ ಅವರು ಮತ್ತೆ ಬಂದಿದ್ದಾರೆ. 7 ವರ್ಷಗಳ ಗ್ಯಾಪ್ ಬಳಿಕ ಅವರು ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಚಿತ್ರದ ಹೆಸರು ‘ಹುಬ್ಬಳ್ಳಿ ಹಂಟರ್ಸ್’. ಶೀರ್ಷಿಕೆಯೇ ಸೂಚಿಸುವಂತೆ ‘ಹುಬ್ಬಳ್ಳಿ ಹಂಟರ್ಸ್’ ಸಿನಿಮಾದಲ್ಲಿ ಉತ್ತರ ಕರ್ನಾಟದ ಸೊಗಡಿನ ಕಥೆ ಇರಲಿದೆ.

7 ವರ್ಷದ ಬಳಿಕ ಹೊಸ ಸಿನಿಮಾ ಶುರು ಮಾಡಿದ ‘ಬೆಲ್ ಬಾಟಂ’ ನಿರ್ಮಾಪಕ ಸಂತೋಷ್
Hubbli Hunters Poster

Updated on: Jan 23, 2026 | 8:05 PM

ರಿಷಬ್ ಶೆಟ್ಟಿ ಹೀರೋ ಆಗಿ ನಟಿಸಿದ್ದ ಮೊದಲ ಸಿನಿಮಾ ‘ಬೆಲ್ ಬಾಟಂ’ 2019ರಲ್ಲಿ ಬಿಡುಗಡೆ ಆಗಿತ್ತು. ಜಯತೀರ್ಥ ನಿರ್ದೇಶನದ ಆ ಸಿನಿಮಾವನ್ನು ಸಂತೋಷ್ ಕುಮಾರ್ ಕೆ.ಸಿ. (Santhosh Kumar KC) ಅವರು ನಿರ್ಮಾಣ ಮಾಡಿದ್ದರು. ಆ ಚಿತ್ರ ಸೂಪರ್ ಹಿಟ್ ಆದರೂ ಕೂಡ ಸಂತೋಷ್ ಅವರು ಇನ್ನೊಂದು ಸಿನಿಮಾ ನಿರ್ಮಾಣಕ್ಕೆ ಮುಂದಾಗಿರಲಿಲ್ಲ. ಈಗ ಮತ್ತೆ ಅವರು ಬಂಡವಾಳ ಹೂಡಲು ಸಜ್ಜಾಗಿದ್ದಾರೆ. ಹೌದು, ಬರೋಬ್ಬರಿ 7 ವರ್ಷಗಳ ಗ್ಯಾಪ್ ಬಳಿಕ ಸಂತೋಷ್ ಕುಮಾರ್ ಅವರು ಹೊಸ ಸಿನಿಮಾವನ್ನು ಘೋಷಿಸಿದ್ದಾರೆ. ‘ಹುಬ್ಬಳ್ಳಿ ಹಂಟರ್ಸ್’ (Hubbli Hunters) ಎಂದು ಶೀರ್ಷಿಕೆ ಇಡಲಾಗಿದೆ.

‘ಗೋಲ್ಡನ್ ಹಾರ್ಸ್ ಸಿನಿಮಾ’ ಬ್ಯಾನರ್ ಮೂಲಕ ನಿರ್ಮಾಪಕ ಸಂತೋಷ್ ಕುಮಾರ್ ಅವರು ‘ಹುಬ್ಬಳ್ಳಿ ಹಂಟರ್ಸ್’ ಸಿನಿಮಾದ ನಿರ್ಮಾಣಕ್ಕೆ‌ ಕೈ ಹಾಕಿದ್ದಾರೆ. ಈ ಸಿನಿಮಾಗೆ ‘ಎಡಗೈ ಅಪಘಾತಕ್ಕೆ ಕಾರಣ’ ಖ್ಯಾತಿಯ ನಿರ್ದೇಶಕರು ಸಾಥ್ ಕೊಟ್ಟಿದ್ದಾರೆ. ಹೌದು, ಕಳೆದ ವರ್ಷ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾ ಮಾಡಿ ಗಮನ ಸೆಳೆದ ಸಮರ್ಥ್ ಬಿ. ಕಡಕೋಳ ಅವರು ಈಗ ‘ಹುಬ್ಬಳ್ಳಿ ಹಂಟರ್ಸ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಲು ಸಜ್ಜಾಗಿದ್ದಾರೆ.

ಅನೇಕ ಸಿನಿಮಾಗಳ ಮೂಲಕ ಗಮನಾರ್ಹ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡ ನಟ ಪ್ರಮೋದ್ ಶೆಟ್ಟಿ ಅವರು ‘ಹುಬ್ಬಳ್ಳಿ ಹಂಟರ್ಸ್’ ಚಿತ್ರಕ್ಕೆ ಹೀರೋ ಆಗಿದ್ದಾರೆ. ‘ಮಹಾನಟಿ‌’ ಖ್ಯಾತಿಯ ಧನ್ಯಶ್ರೀ ಸುಜಿತ್ ಅವರು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಭಾರತದಾದ್ಯಂತ ಇರುವ ಖ್ಯಾತ ಕಂಟೆಂಟ್ ಕ್ರಿಯೇಟರ್ಸ್ ಈ ಸಿನಿಮಾದಲ್ಲಿ ನಟಿಸುತ್ತಿರುವುದು ಮತ್ತೊಂದು ವಿಶೇಷ.

Hubbli Hunters Team

‘ಹುಬ್ಬಳ್ಳಿ ಹಂಟರ್ಸ್’ ಎಂಬ ಶೀರ್ಷಿಕೆ ಹೇಳುತ್ತಿದ್ದಂತೆಯೇ ಇದು ಉತ್ತರ ಕರ್ನಾಟಕ ಭಾಗದ ಕಥೆ ಇರುವ ಸಿನಿಮಾ ಎಂಬುದು ಖಚಿತವಾಗುತ್ತದೆ. ಹೌದು, ಇದು ಉತ್ತರ ಕರ್ನಾಟಕದ ಸೊಗಡಿನ ಕಥೆ ಹೊಂದಿರುವ ಸಿನಿಮಾ ಎಂದು ಚಿತ್ರತಂಡ ಹೇಳಿದೆ. ಸಮರ್ಥ್ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅಭಿಮನ್ಯು ಸದಾನಂದನ್ ಅವರು ಈ ಸಿನಿಮಾಗೆ ಛಾಯಾಗ್ರಹಣ ಮಾಡಲಿದ್ದಾರೆ.

ಇದನ್ನೂ ಓದಿ: ‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ

ಜನವರಿ 26ರಿಂದ ‘ಹುಬ್ಬಳ್ಳಿ ಹಂಟರ್ಸ್’ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. ಪ್ರಸನ್ನ ಕೇಶವ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಮೂಲಕ ಸಖತ್ ಮನರಂಜನೆ ಇರುವ ಸಿನಮಾವನ್ನು ಪ್ರೇಕ್ಷಕರಿಗೆ ನೀಡಲು ಸಮರ್ಥ್ ಅವರು ಹೊರಟಿದ್ದಾರೆ. ರಾಹುಲ್ ವಿ. ಪಾರ್ವತಿಕರ್, ಅಮಿತ್ ಕಾರ್ವ್ಕರ್ ಮತ್ತು ಚೇತನ್ ಮರಂಬೀದ್, ಸಮರ್ಥ್ ಅವರ ಸಂಭಾಷಣೆ ಈ ಸಿನಿಮಾಗೆ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.