ಹಾರರ್, ಆ್ಯಕ್ಷನ್, ಸಸ್ಪೆನ್ಸ್, ಕಾಮಿಡಿಯ ಝಲಕ್ ತೋರಿಸಿದ ‘ರಮೇಶ್ ಸುರೇಶ್’ ಟ್ರೇಲರ್
‘ರಮೇಶ್ ಸುರೇಶ್’ ಚಿತ್ರವು ಟ್ರೇಲರ್ ಮೂಲಕ ಕೌತುಕ ಸೃಷ್ಟಿಸಿದೆ. ಈ ಸಿನಿಮಾದಲ್ಲಿ ಬೆನಕ, ಯಶು ರಾಜ್ ಅವರು ಹೀರೋಗಳಾಗಿ ನಟಿಸಿದ್ದಾರೆ. ನಾಯಕಿಯಾಗಿ ಚಂದನಾ ಸೋಗು ಅಭಿನಯಿಸಿದ್ದಾರೆ. ಪಿ. ಕೃಷ್ಣ, ಬಿ. ಶಂಕರ್ ನಿರ್ಮಾಣದ ಈ ಸಿನಿಮಾಗೆ ನಾಗರಾಜ್ ಮಲ್ಲಿಗೇನಹಳ್ಳಿ, ರಘುರಾಜ್ ಗೌಡ ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ರಮೇಶ್ ಸುರೇಶ್’ ಸಿನಿಮಾ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..
ಜೂನ್ ತಿಂಗಳಲ್ಲಿ ಕನ್ನಡದ ಹಲವು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಜೂನ್ 21ರಂದು ‘ರಮೇಶ್ ಸುರೇಶ್’ ಸಿನಿಮಾ (Ramesh Suresh Movie) ಬಿಡುಗಡೆ ಆಗಲಿದೆ. ‘ಆರ್.ಕೆ. ಟಾಕೀಸ್’ ಮೂಲಕ ಪಿ. ಕೃಷ್ಣ ಮತ್ತು ಬಿ. ಶಂಕರ್ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ನಾಗರಾಜ್ ಮಲ್ಲಿಗೇನಹಳ್ಳಿ ಮತ್ತು ರಘುರಾಜ್ ಗೌಡ ಅವರು ಜಂಟಿಯಾಗಿ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಗುಬ್ಬಿ ವೀರಣ್ಣ ಅವರ ಮರಿಮಗ ಬೆನಕ (Benak Gubbi Veeranna) ಮತ್ತು ಯಶು ರಾಜ್ ಅವರು ನಟಿಸಿದ್ದಾರೆ. ಇತ್ತೀಚೆಗೆ ‘ರಮೇಶ್ ಸುರೇಶ್’ ಸಿನಿಮಾದ ಟ್ರೇಲರ್ (Ramesh Suresh Trailer) ಬಿಡುಗಡೆ ಮಾಡಲಾಯಿತು.
ಟ್ರೇಲರ್ ಮೂಲಕ ‘ರಮೇಶ್ ಸುರೇಶ್’ ಸಿನಿಮಾ ಕೌತುಕ ಮೂಡಿಸಿದೆ. ವಿಶೇಷ ಏನೆಂದರೆ, ಈ ಟ್ರೇಲರ್ನಲ್ಲಿ ಮನರಂಜನೆಯ ಹಲವು ಎಳೆಗಳು ಕಾಣಿಸಿವೆ. ಅಂದರೆ ಹಾರರ್, ಕಾಮಿಡಿ, ಆ್ಯಕ್ಷನ್, ಸಸ್ಪೆನ್ಸ್ ಮುಂತಾದ ಅಂಶಗಳು ಈ ಸಿನಿಮಾದಲ್ಲಿ ಇವೆ ಎಂಬುದಕ್ಕೆ ಟ್ರೇಲರ್ನಲ್ಲಿ ಝಲಕ್ ತೋರಿಸಲಾಗಿದೆ. ಬೆನಕ, ಯಶು ರಾಜ್ ಜೊತೆ ಸತ್ಯಪ್ರಕಾಶ್, ಉಮಾ, ನೀನಾಸಂ ರಂಗನಾಥ್, ಸಾಧುಕೋಕಿಲ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಂದನಾ ಸೇಗು ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: ‘ಕೋಟಿ’ ಸಿನಿಮಾ ಟ್ರೇಲರ್ ಮೂಲಕ ಕೌತುಕ ಹೆಚ್ಚಿಸಿದ ಡಾಲಿ, ಪರಮ್
‘ರಮೇಶ್ ಸುರೇಶ್’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಸಂತೋಷ್ ಆರ್ಯನ್, ವಿಜಯ್ ಚೆಂಡೂರ್, ನಾಗೇಂದ್ರ ಅರಸ್ ಅವರು ಮುಖ್ಯ ಅತಿಥಿಗಳಾಗಿ ಬಂದು ಶುಭ ಕೋರಿದರು. ಈ ಸಿನಿಮಾಗೆ ಇಬ್ಬರು ನಿರ್ಮಾಪಕರು, ಇಬ್ಬರು ನಾಯಕರು ಹಾಗೂ ಇಬ್ಬರು ನಿರ್ದೇಶಕರು ಎಂಬುದು ವಿಶೇಷ. ‘ನಮ್ಮ ಚಿತ್ರದಲ್ಲಿ ಡಬಲ್ ಮೀನಿಂಗ್ ಡೈಲಾಗ್ಗಳು ಇಲ್ಲ. ಅನವಶ್ಯಕವಾದ ಸನ್ನಿವೇಶಗಳು ಕೂಡ ಇಲ್ಲ. ಜನರಿಗೆ ಬೇಸರ ಆಗದಂತೆ ಉತ್ತಮ ಮನರಂಜನೆಯನ್ನು ನೀಡುವ ಸಿನಿಮಾ ಇದು’ ಎಂದು ಬೆನಕ ಗುಬ್ಬಿ ವೀರಣ್ಣ ಮತ್ತು ಯಶು ರಾಜ್ ಹೇಳಿದ್ದಾರೆ.
‘ರಮೇಶ್ ಸುರೇಶ್’ ಸಿನಿಮಾ ಟ್ರೇಲರ್:
ನಿರ್ಮಾಪಕರಾದ ಕೃಷ್ಣ ಮತ್ತು ಶಂಕರ್ ಅವರು ಮಾತನಾಡಿ, ‘ಹೊಸ ಪ್ರತಿಭೆಗಳಿಗೆ ಚಾನ್ಸ್ ಕೊಡುವ ಉದ್ದೇಶದಿಂದ ‘ಆರ್.ಕೆ. ಟಾಕೀಸ್’ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದೇವೆ. ಮೊದಲ ಹೆಜ್ಜೆಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದೇವೆ. ನಿರ್ದೇಶಕರಾದ ನಾಗರಾಜ್ ಮತ್ತು ರಘುರಾಜ್ ಅವರ ಉತ್ತಮವಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಟೀಸರ್, ಟ್ರೇಲರ್ ಮತ್ತು ಹಾಡುಗಳಿಗೆ ಮೆಚ್ಚುಗೆ ಸಿಕ್ಕಿದೆ’ ಎಂದು ಹೇಳಿದ್ದಾರೆ. ನಿರ್ದೇಶಕರಾದ ನಾಗರಾಜ್ ಮಲ್ಲಿಗೇನಹಳ್ಳಿ ಮತ್ತು ರಘುರಾಜ್ ಗೌಡ ಅವರು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ‘ಇದೊಂದು ಕಾಮಿಡಿ ಪ್ರಕಾರದ ಸಿನಿಮಾವಾದರೂ ಒಳ್ಳೆಯ ಸಂದೇಶ ಇದೆ. ಪ್ರೇಕ್ಷಕರಿಗೆ ಬೇಕಾದ ಎಲ್ಲ ಅಂಶಗಳು ನಮ್ಮ ಸಿನಿಮಾದಲ್ಲಿದೆ’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.