ಬೆಂಗಳೂರು ಚಿತ್ರೋತ್ಸವಕ್ಕೆ ಸರ್ಕಾರದ ದುಂದು ವೆಚ್ಚ! ಸ್ಯಾಂಡಲ್ವುಡ್ ಮಂದಿ ಏನ್ ಹೇಳ್ತಾರೆ?
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವಿರುದ್ದ ಕೆಲವು ಆಕ್ಷೇಪಗಳು ಕೇಳಿಬರುತ್ತಿವೆ. ಚಿತ್ರೋತ್ಸವದ ಹೆಸರಲ್ಲಿ ರಾಜ್ಯ ಸರ್ಕಾರ ಮಾಡುವ ದುಂದು ವೆಚ್ಚದ ಬಗ್ಗೆಯೂ ಈಗ ಚರ್ಚೆ ಆರಂಭ ಆಗಿದೆ.
13ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಅನೇಕ ವಿಘ್ನಗಳು ಎದುರಾಗುತ್ತಿವೆ. ಕೊರೊನಾ ವೈರಸ್ ಕಾರಣ ನೀಡಿ ಚಿತ್ರೋತ್ಸವದ ದಿನಾಂಕವನ್ನು ಮುಂದೂಡಲಾಗಿದೆ. ಜೊತೆಗೆ ಸಿನಿಮೋತ್ಸವದ ದುಂದುವೆಚ್ಚಗಳ ಬಗ್ಗೆ ವಿಧಾನ ಪರಿಷತ್ ಕಲಾಪದಲ್ಲೂ ಪ್ರಶ್ನೆ ಎದ್ದಿದೆ.
‘ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ದುಂದುವೆಚ್ಚ ಮಾಡಲಾಗುತ್ತಿದೆ. ಹೊರಗುತ್ತಿಗೆ ನೀಡುವುದರಿಂದ ಅನಗತ್ಯವಾಗಿ ವೆಚ್ಚ ಮಾಡಲಾಗುತ್ತದೆ. ಈ ಅದ್ಧೂರಿ ಕಾರ್ಯಕ್ರಮಕ್ಕೆ ಕೋಟ್ಯಂತರ ರೂ. ಸಂಭಾವನೆ ನೀಡಿ ಬಾಲಿವುಡ್ ಕಲಾವಿದರನ್ನು ಕರೆಸಲಾಗುತ್ತದೆ. ಈ ರೀತಿ ಕಲಾವಿದರಿಗೆ ಕೋಟಿಗಟ್ಟಲೆ ನೀಡುವ ಅಗತ್ಯವೇನಿದೆ? ವಿಧಾನಸೌಧದಲ್ಲಿ ಸರಳವಾಗಿ ಕಾರ್ಯಕ್ರಮ ಆಯೋಜಿಸಿ’ ಎಂದು ವಿಧಾನ ಪರಿಷತ್ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ ಹೇಳಿದ್ದಾರೆ.
ಮೋಹನ್ ಕುಮಾರ್ ಪ್ರಶ್ನೆಗೆ ಸಚಿವ ಜಗದೀಶ್ ಶೆಟ್ಟರ್ ಉತ್ತರ ನೀಡಿದ್ದಾರೆ. ಕೆಲವು ಕಾರ್ಯಕ್ರಮಗಳನ್ನು ಅವುಗಳ ಗುಣಮಟ್ಟಕ್ಕೆ ತಕ್ಕಂತೆ ಮಾಡಬೇಕಾಗುತ್ತದೆ. ಆದರೂ ಸದಸ್ಯರು ಎತ್ತಿದ ಈ ಪ್ರಶ್ನೆ ಬಗ್ಗೆ ಸರ್ಕಾರ ಪರಿಶೀಲಿಸುತ್ತದೆ’ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಈ ಚರ್ಚೆ ಬಗ್ಗೆ ಸ್ಯಾಂಡಲ್ವುಡ್ನ ಸೆಲೆಬ್ರಿಟಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ದುಂದುವೆಚ್ಚ ಮಾಡಬಾರದು ಎಂಬ ಮಾತನ್ನು ನಿರ್ದೇಶಕ ಮಂಸೋರೆ ಒತ್ತಿ ಹೇಳಿದ್ದಾರೆ. ‘ಮೋಹನ್ಕುಮಾರ್ ಕೊಂಡಜ್ಜಿ ಎತ್ತಿರುವ ಪ್ರಶ್ನೆ ಸರಿ. ಆದರೆ ತುಂಬ ಹಿಂದೆಯೇ ಈ ಮಾತನ್ನು ಅವರು ಹೇಳಬೇಕಿತ್ತು. ಜಗದೀಶ್ ಶೆಟ್ಟರ್ ಹೇಳಿರುವಂತೆ ಕಾರ್ಯಕ್ರಮದ ಗುಣಮಟ್ಟಕ್ಕೆ ಬೆಲೆ ಕೊಡುವುದೇ ಹೌದಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ಕ್ಷೇತ್ರಕ್ಕೆ ಕೊಡುಗೆ ನೀಡಿದ ನಿರ್ದೇಶಕರನ್ನು, ತಂತ್ರಜ್ಱರನ್ನು ಬೆಂಗಳೂರು ಸಿನಿಮೋತ್ಸವಕ್ಕೆ ಕರೆಸಲಿ. ಬರೀ ಬಾಲಿವುಡ್ ಸೆಲೆಬ್ರಿಟಿಗಳನ್ನು ಕರೆಸಬೇಕಿಲ್ಲ’ ಎಂದು ಮಂಸೋರೆ ಹೇಳಿದ್ದಾರೆ.
‘ದುಂದುವೆಚ್ಚದ ವಿಚಾರ ಮಾತ್ರವಲ್ಲದೆ ಚಿತ್ರೋತ್ಸವಕ್ಕೆ ಸಂಬಂಧಪಟ್ಟಂತೆ ಅಗತ್ಯವಾಗಿ ಬಗೆಹರಿಯಬೇಕಾದ ಸಮಸ್ಯೆಗಳು ಸಾಕಷ್ಟು ಇವೆ. ಸಿನಿಮಾಗಳ ಆಯ್ಕೆಯಲ್ಲಿ ಪಾರದರ್ಶಕತೆ ಬೇಕು. ಕನ್ನಡದ ‘ತಲೆದಂಡ’ ಚಿತ್ರಕ್ಕೆ ಈ ಬಾರಿ ಅವಕಾಶ ನೀಡಿಲ್ಲ. ಯಾಕೆ ಎಂಬುದನ್ನು ಆಯೋಜಕರು ಮೊದಲು ಸ್ಪಷ್ಟಪಡಿಸಬೇಕು. ಕಳೆದ ವರ್ಷವೂ ಕೆಲವು ಸಿನಿಮಾಗಳಿಗೆ ಹೀಗೆಯೇ ಆಗಿತ್ತು’ ಎಂದಿದ್ದಾರೆ ಮಂಸೋರೆ.
ಇದನ್ನೂ ಓದಿ: ಹೆಚ್ಚಿದ ಕೊರೊನಾ ಪ್ರಕರಣ; ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ