ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮಯೂರಿ; ಮೊದಲ ದಿನವೇ ಮಗನಿಗೆ ಆಕರ್ಷಕ ಗಿಫ್ಟ್!
2020ರ ಜೂನ್ನಲ್ಲಿ ತಮ್ಮ ಬಹುಕಾಲದ ಗೆಳಯ ಅರುಣ್ ಜೊತೆ ಬೆಂಗಳೂರಿನ ದೇವಸ್ಥಾನದಲ್ಲಿ ಮಯೂರಿ ಹಸೆಮಣೆ ಏರಿದ್ದರು. ಈಗ ಅವರು ತಾಯಿಯಾದ ಸಂಭ್ರಮದಲ್ಲಿದ್ದಾರೆ.
ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಖ್ಯಾತಿ ಪಡೆದಿರುವ ನಟಿ ಮಯೂರಿ ಅವರ ಬದುಕಿನಲ್ಲೀಗ ಹೊಸ ಅಧ್ಯಾಯ ಆರಂಭ ಆಗಿದೆ. ಲಾಕ್ಡೌನ್ನಲ್ಲಿ ಮದುವೆ ಆಗಿದ್ದ ಅವರು ಈಗ ತಾಯಿ ಆಗಿದ್ದಾರೆ. ಮಾ.15ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಸಂತೋಷದ ಸುದ್ದಿಯನ್ನು ಸೋಶಿಯಲ್ ಮೀಡಿಯಾ ಮೂಲಕ ಅವರು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
’ಗಂಡುಮಗು ಜನಿಸಿದೆ. ನಮ್ಮ ಮನೆಗೆ ಪುಟಾಣಿ ಆಗಮಿಸಿದ್ದಾನೆ. ಈ ಸುಮಧುರವಾದ ಅನುಭವವನ್ನು ಹೇಳಿಕೊಳ್ಳಲು ಪದಗಳೇ ಇಲ್ಲ. ಇನ್ನೊಂದು ಸುಂದರ ಪಯಣವನ್ನು ಆರಂಭಿಸುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆ ನನ್ನ ಮೇಲಿರಲಿ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿರುವ ಮಯೂರಿ ಅವರು ಇನ್ನೂ ಮಗುವಿನ ಫೋಟೋ ಬಹಿರಂಗಪಡಿಸಿಲ್ಲ. ಮುದ್ದು ಕಂದನನ್ನು ನೋಡಲು ಅವರ ಫ್ಯಾನ್ಸ್ ಕಾಯುತ್ತಿದ್ದಾರೆ.
ಸೆಲೆಬ್ರಿಟಿಗಳ ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗುವುದು ಸಹಜ. ಮಯೂರಿ ಮಗನೂ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಅಚ್ಚರಿ ಏನೆಂದರೆ, ತಾಯಿಯಾದ ದಿನವೇ ಮಗನಿಗಾಗಿ ಮಯೂರಿ ಒಂದು ಗಿಫ್ಟ್ ನೀಡಿದ್ದಾರೆ. ಏನದು? ಸೋಶಿಯಲ್ ಮೀಡಿಯಾ ಅಕೌಂಟ್! ಹೌದು, ಮಗನಿಗಾಗಿ ಮಯೂರಿ ಒಂದು ಹೊಸ ಇನ್ಸ್ಟಾಗ್ರಾಮ್ ಖಾತೆ ತೆರದಿದ್ದಾರೆ. starboii_1111 ಹೆಸರಿನ ಖಾತೆಯಲ್ಲಿ ಮಗನ ಕೈ ಬೆರಳಿನ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ವಿಶೇಷ ಏನೆಂದರೆ, ಈ ಖಾತೆಯನ್ನು ಈಗಾಗಲೇ ಸಾವಿರಾರು ಜನರು ಫಾಲೋ ಮಾಡುತ್ತಿದ್ದಾರೆ.
View this post on Instagram
ಕಿರುತೆರೆಯ ‘ಅಶ್ವಿನಿ ನಕ್ಷತ್ರ’ ಸೀರಿಯಲ್ ಮೂಲಕ ಹೆಚ್ಚು ಖ್ಯಾತಿ ಪಡೆದ ಮಯೂರಿ, ನಂತರ ಸಿನಿಮಾಗೂ ಕಾಲಿಟ್ಟರು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಷ್ಟಕಾಮ್ಯ’ ಸಿನಿಮಾದಲ್ಲಿ ಗಮನಾರ್ಹ ಪಾತ್ರ ಮಾಡಿದರು. ಇತ್ತೀಚೆಗೆ ಬಿಡುಗಡೆಯಾದ ‘ಪೊಗರು’ ಸಿನಿಮಾದಲ್ಲಿ ಧ್ರುವ ಸರ್ಜಾಗೆ ತಂಗಿಯಾಗಿ ಅವರು ನಟಿಸಿದ್ದಾರೆ. 2020ರ ಜೂನ್ನಲ್ಲಿ ತಮ್ಮ ಬಹುಕಾಲದ ಗೆಳಯ ಅರುಣ್ ಜೊತೆ ಬೆಂಗಳೂರಿನ ದೇವಸ್ಥಾನದಲ್ಲಿ ಮಯೂರಿ ಹಸೆಮಣೆ ಏರಿದ್ದರು. ಈಗ ಅವರು ತಾಯಿಯಾದ ಸಂಭ್ರಮದಲ್ಲಿದ್ದಾರೆ. ಹಲವು ಸಿನಿಮಾ ಆಫರ್ಗಳು ಅವರ ಕೈಯಲ್ಲಿವೆ.
ಇದನ್ನೂ ಓದಿ: ತುಂಬು ಗರ್ಭಿಣಿ ನಟಿ ಮಯೂರಿಗೆ ಹಲ್ವಾ ಜಜರತ್ ತಿನ್ನಿಸಿದ ಹಾಸ್ಯ ನಟ ಸಿಹಿ ಕಹಿ ಚಂದ್ರು..!