ಇಷ್ಟು ದಿನ ಗಾಯಕನಾಗಿ, ಗೀತರಚನಕಾರನಾಗಿ, ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಚಂದನ್ ಶೆಟ್ಟಿ (Chandan Shetty) ಅವರು ಈಗ ನಟನಾಗಿಯೂ ಸಕ್ರಿಯರಾಗಿದ್ದಾರೆ. ಅವರು ನಟಿಸಿದ ಮೊದಲ ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನವೇ ಎರಡನೇ ಸಿನಿಮಾ ಸೆಟ್ಟೇರಿದೆ. ಅವರ 2ನೇ ಚಿತ್ರಕ್ಕೆ ‘ಸೂತ್ರಧಾರಿ’ (Suthradaari) ಎಂದು ಶೀರ್ಷಿಕೆ ಇಡಲಾಗಿದೆ. ಇಂದಿನಿಂದ (ಅ.10) ಈ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. ನವರಸನ್ (Navarasan) ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಜೊತೆಗೆ ಕ್ರಿಯೇಟಿವ್ ಹೆಡ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಹೊಸ ನಿರ್ದೇಶಕ ಕಿರಣ್ ಕುಮಾರ್ ಅವರಿಗೆ ಈ ಚಿತ್ರದ ಮೂಲಕ ನವರಸನ್ ಅವಕಾಶ ನೀಡಿದ್ದಾರೆ.
ಬಹಳ ಅದ್ದೂರಿಯಾಗಿ ಈ ಚಿತ್ರದ ಟೈಟಲ್ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಸಮಾರಂಭದಲ್ಲಿ ಪಿ.ಆರ್.ಓ. ಸುಧೀಂದ್ರ ವೆಂಕಟೇಶ್ ಅವರು ಶೀರ್ಷಿಕೆ ಅನಾವರಣ ಮಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಅಧ್ಯಕ್ಷರಾದ ಭಾ.ಮ. ಹರೀಶ್, ನಿರ್ಮಾಪಕರಾದ ಕೆ.ಸಿ.ಎನ್. ಕುಮಾರ್, ಗೋವಿಂದರಾಜು, ಸಂಜಯ್ ಗೌಡ, ಗಿರೀಶ್, ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಮುಂತಾದವರು ಈ ಸಮಾರಂಭಕ್ಕೆ ಸಾಕ್ಷಿಯಾದರು.
ನವರಸನ್ ನಿರ್ಮಿಸುತ್ತಿರುವ 5ನೇ ಸಿನಿಮಾ ಇದು. ನಿರ್ದೇಶನ, ನಿರ್ಮಾಣ, ಸಿನಿಮಾ ವಿತರಣೆ ಮುಂತಾದ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಚಂದನ್ ಶೆಟ್ಟಿ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾಗೆ ನಾಯಕಿಯಾಗಿ ಅಪೂರ್ವಾ ಅಭಿನಯಿಸುತ್ತಿದ್ದಾರೆ. ಒಳ್ಳೆಯ ತಂಡದ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಅವರಿಗೆ ಖುಷಿ ಇದೆ.
ಚಂದನ್ ಶೆಟ್ಟಿ ಅವರ ಮೊದಲ ಸಿನಿಮಾ ‘ಎಲ್ರ ಕಾಲೆಳೆಯುತ್ತೆ ಕಾಲ’. ಆ ಚಿತ್ರದಲ್ಲಿ ಅವರಿಗೆ ರೆಟ್ರೋ ಲುಕ್ ಇರಲಿದೆ. ಎರಡನೇ ಸಿನಿಮಾ ‘ಸೂತ್ರಧಾರಿ’ಯಲ್ಲಿ ಪೊಲೀಸ್ ಪಾತ್ರವನ್ನು ಚಂದನ್ ಶೆಟ್ಟಿ ಮಾಡಲಿರುವುದು ವಿಶೇಷ. ‘ಕಿರಣ್ ಕುಮಾರ್ ಉತ್ತಮ ಕಥೆ ಬರೆದಿದ್ದಾರೆ. ಮರ್ಡರ್ ಮಿಸ್ಟರಿ ಕಥೆ. ಈ ಚಿತ್ರಕ್ಕಾಗಿ ನಾನು 12 ಕೆಜಿ ತೂಕ ಇಳಿಸಿಕೊಂಡಿದ್ದೀನಿ’ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
ನಟನೆ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನೂ ಚಂದನ್ ಶೆಟ್ಟಿ ಅವರೇ ವಹಿಸಿಕೊಂಡಿದ್ದಾರೆ. ಪಿ.ಕೆ.ಹೆಚ್. ದಾಸ್ ಛಾಯಾಗ್ರಹಣ, ಕಿನ್ನಲ್ ರಾಜ್ ಸಾಹಿತ್ಯ, ಸಂಭಾಷಣೆ, ಸತೀಶ್ ಚಂದ್ರಯ್ಯ ಸಂಕಲನ ಈ ಚಿತ್ರಕ್ಕೆ ಇರಲಿದೆ. ತಬಲ ನಾಣಿ ಕೂಡ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಮನ ಸೆಳೆಯುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.