ಗಾಂಧೀನಗರದ ಗಲ್ಲಿ ಗಲ್ಲಿಗಳಲ್ಲೂ ಸಿನಿಮಾ ಹಬ್ಬ ಮತ್ತೆ ಮರುಕಳಿಸಿದೆ. ಕೊರೋನಾ ಅಲೆಗಳಿಂದ ಕಂಗೆಟ್ಟಿದ್ದ ಚಿತ್ರರಂಗಕ್ಕೆ ಚೇತರಿಕೆಯ ದಿನಗಳು ಬಂದಿವೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಕೆಲವೊಂದಿಷ್ಟು ಸಿನಿಮಾಗಳು ಬಿಡುಗಡೆಯ ಸರತಿಯಲ್ಲಿವೆ. ಆ ಸಾಲಿನಲ್ಲಿ ಸಾಕಷ್ಟು ಗಮನ ಸೆಳೆಯುತ್ತಿರುವ ಚಿತ್ರ ಚಂದ್ರಕಾಂತ್ ನಿರ್ದೇಶನದ ‘ತ್ರಿಕೋನ’. ಆಕ್ಷನ್ ಥ್ರಿಲ್ಲರ್ ಚಿತ್ರವಾದ ‘ತ್ರಿಕೋನ’ (Trikona Movie) ಮೊದಲು ಹೈಲೈಟ್ ಆಗಿರುವುದೇ ಅದರ ತಾರಾಬಳಗದಿಂದ. ಕಾರಣ, ಚಿತ್ರದಲ್ಲಿ ಸ್ಟಾರ್ ಕಲಾವಿದರ ದಂಡೇ ಇದೆ. ಅದರಲ್ಲೂ ಹಿರಿಯ ನಟಿ ಜೂಲಿ ಲಕ್ಷ್ಮಿ ಹಾಗೂ ಸುರೇಶ್ ಹೆಬ್ಳಿಕರ್ ಕಾಂಬಿನೇಶ್ ಇರೋದು ಸಿನಿಮಾ ಪ್ರೇಮಿಗಳಿಗೆ ವಿಶೇಷ ವಿಚಾರ. ಈ ಇಬ್ಬರು ‘ಪಲ್ಲವಿ ಅನುಪಲ್ಲವಿ’ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದರು. ಅದಾಗಿ ಬರೋಬ್ಬರಿ ನಾಲ್ಕು ದಶಕಗಳ ನಂತರ ಒಂದೇ ಸಿನಿಮಾದಲ್ಲಿ ಅದರಲ್ಲೂ ಜೋಡಿಯಾಗಿ ಅವರು ‘ತ್ರಿಕೋನ’ದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಇಬ್ಬರ ರೇರ್ ಕಾಂಬಿನೇಶನ್ ಪ್ರೇಕ್ಷಕರ ಗಮನ ಸೆಳೆಯೋದಂತೂ ಖಂಡಿತ ಎನ್ನುತ್ತಾರೆ ಚಿತ್ರದ ನಿರ್ದೇಶಕ ಚಂದ್ರಕಾಂತ್.
ಚಿತ್ರದಲ್ಲಿ 25, 45, 65 ಹೀಗೆ ಮೂರು ವಯೋಮಾನದವರ ಕಥೆ ಇದೆ. ಈ ಮೂರು ವಯೋಮಾನವು ಚಿತ್ರದಲ್ಲಿ ಶಕ್ತಿ, ಅಹಂ ಮತ್ತು ತಾಳ್ಮೆಯನ್ನು ಪ್ರತಿನಿಧಿಸುತ್ತವೆ. ರಾಜ್ ವೀರ್, ಮಾರುತೇಶ್ 25 ವರ್ಷದವರನ್ನು ಚಿತ್ರದಲ್ಲಿ ಪ್ರತಿನಿಧಿಸಿದರೆ, ಅಚ್ಯುತ್ ಕುಮಾರ್, ಸುಧಾರಾಣಿ 45 ವರ್ಷದವರನ್ನು ಪ್ರತಿನಿಧಿಸಲಿದ್ದಾರೆ. ಲಕ್ಷ್ಮಿ, ಸುರೇಶ್ ಹೆಬ್ಳಿಕರ್ 65ರ ವಯೋಮಾನದವರನ್ನು ಪ್ರತಿನಿಧಿಸುವ ಪಾತ್ರವನ್ನು ನಿಭಾಯಿಸಿದ್ದಾರೆ.
ಬದುಕಿನಲ್ಲಿ ಕಷ್ಟಗಳು ಎದುರಾದಾಗ ಶಕ್ತಿ, ಅಹಂ, ತಾಳ್ಮೆ ಮೂಲಕ ಮೂರು ವಯೋಮಾನದವರು ಹೇಗೆ ಬಗೆಹರಿಸಿಕೊಳ್ಳುತ್ತಾರೆ, ತಾಳ್ಮೆ ಜೀವನದಲ್ಲಿ ಎಷ್ಟು ಮುಖ್ಯ ಅನ್ನೋದೇ ಚಿತ್ರದ ಒನ್ ಲೈನ್ ಕಹಾನಿ. ಇದನ್ನು ತೆರೆ ಮೇಲೆ ಅಷ್ಟೇ ಚೆಂದಗಾಣಿಸಿ ಕಮರ್ಶಿಯಲ್ ಎಳೆಯಲ್ಲಿ, ಅಷ್ಟೇ ಅದ್ದೂರಿಯಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಚಂದ್ರಕಾಂತ್. ಪ್ರಸ್ತುತ ದಿನಮಾನಕ್ಕೆ ಕನೆಕ್ಟ್ ಆಗುವ ಕಥೆ ಚಿತ್ರದಲ್ಲಿದ್ದು ಪ್ರತಿಯೊಬ್ಬರಿಗೂ ಒಂದೊಳ್ಳೆ ಸಂದೇಶವನ್ನು ತ್ರಿಕೋನ ನೀಡಲಿದೆ ಅನ್ನೋದು ಚಿತ್ರತಂಡದ ಭರವಸೆಯ ಮಾತು.
ಚಿತ್ರಕ್ಕೆ ರಾಜ್ ಶೇಖರ್ ಬಂಡವಾಳ ಹೂಡಿದ್ದು, ಪೊಲೀಸ್ ಪ್ರಕಿ ಪ್ರೊಡಕ್ಷನ್ ಬ್ಯಾನರ್ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುರೇಂದ್ರನಾಥ್ ಸಂಗೀತ ನಿರ್ದೇಶನ ಮಾಡಿದ್ದು, ಶ್ರೀನಿವಾಸ್ ವಿನ್ನಕೋಟ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಏಪ್ರಿಲ್ 8ರಂದು ‘ತ್ರಿಕೋನ’ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ: ಆಕ್ಷನ್ ಥ್ರಿಲ್ಲರ್ ‘ತ್ರಿಕೋನ’ ಮೂಲಕ ಕಂಬ್ಯಾಕ್ ಮಾಡಿದ ಡೈರೆಕ್ಟರ್ ಚಂದ್ರಕಾಂತ್
Samantha: ಸಮಂತಾ ಸ್ಟೈಲ್ಗಿಲ್ಲ ಸರಿಸಾಟಿ; ಬಗೆಬಗೆಯ ಫ್ಯಾಶನ್ ಅವತಾರದಲ್ಲಿ ಮಿಂಚುವ ನಟಿ- ಫೋಟೋಗಳು ಇಲ್ಲಿವೆ