ಚೇತನ್ ಚಂದ್ರ ಮೇಲೆ ಹಲ್ಲೆ: ಇಬ್ಬರ ಬಂಧನ; ನಟನ ವಿರುದ್ಧ ಮಹಿಳೆ ಪ್ರತಿದೂರು
ಬೆಂಗಳೂರಿನ ಕಗ್ಗಲಿಪುರದ ಬಳಿ ನಟ ಚೇತನ್ ಚಂದ್ರ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಕಿರಣ್ ಮತ್ತು ಹರೀಶ್ ಎಂಬುವವರನ್ನು ಬಂಧಿಸಲಾಗಿದೆ. ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಕಿರಣ್ ಪತ್ನಿ ಐಶ್ವರ್ಯಾ ಅವರು ಕೂಡ ಪ್ರತಿದೂರು ದಾಖಲಿಸಿದ್ದಾರೆ. ಹಲ್ಲೆಗೆ ಒಳಗಾಗಿರುವ ಚೇತನ್ ಚಂದ್ರ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕನ್ನಡದ ನಟ ಚೇತನ್ ಚಂದ್ರ (Chetan Chandra) ಮೇಲೆ ಭಾನುವಾರ (ಮೇ 12) ಬೆಂಗಳೂರಿನ ಕಗ್ಗಲಿಪುರ ಸಮೀಪ ಹಲ್ಲೆ ನಡೆದಿತ್ತು. ನಟನ ಮೇಲೆ ಮಾರಣಾಂತಿಕವಾಗಿ ಹಲ್ಲೆ (Assault) ಮಾಡಿದ ಆರೋಪದ ಮೇಲೆ ಕಿರಣ್ ಮತ್ತು ಹರೀಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಕಗ್ಗಲಿಪುರ (Kaggalipura) ಪೊಲೀಸ್ ಠಾಣೆಯಲ್ಲಿ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಹಲ್ಲೆಗೆ ಒಳಗಾಗಿರುವ ಚೇತನ್ ಚಂದ್ರ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು, ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಚೇತನ್ ಚಂದ್ರ ವಿರುದ್ಧ ಪ್ರತಿದೂರು ಕೂಡ ದಾಖಲಾಗಿದೆ.
ಹಲ್ಲೆ ಆರೋಪ ಹೊತ್ತಿರುವ ಕಿರಣ್ ಅವರ ಪತ್ನಿ ಐಶ್ವರ್ಯಾ ಅವರು ಚೇತನ್ ವಿರುದ್ಧ ಪ್ರತಿದೂರು ನೀಡಿದ್ದಾರೆ. ನಟನಿಂದ ತಮಗೆ ಹಾಗೂ ತಮ್ಮ ಪತಿ ಕಿರಣ್ ಮೇಲೆ ಹಲ್ಲೆ ಆಗಿದೆ ಎಂದು ಐಶ್ವರ್ಯಾ ದೂರಿನಲ್ಲಿ ತಿಳಿಸಿದ್ದಾರೆ. ಹಾಗಾಗಿ ಎಫ್ಐಆರ್ ದಾಖಲು ಮಾಡಲಾಗಿದೆ. ಕಗ್ಗಲಿಪುರ ಠಾಣೆಯಲ್ಲಿ ಐಶ್ವರ್ಯಾ ದೂರು ನೀಡಿದ್ದು, ಚೇತನ್ ಚಂದ್ರ ಹಾಗೂ ಇನ್ನಿಬ್ಬರ ವಿರುದ್ಧ ಐಪಿಸಿ ಸೆಕ್ಷನ್ 323, 354, 34ರಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ದೂರುದಾರೆ ಐಶ್ವರ್ಯಾ ಹೇಳಿಕೆ:
‘ನಿನ್ನೆ ರಾತ್ರಿ ಬೈಕ್ನಲ್ಲಿ ಬರಬೇಕಾದರೆ ಸೈಡ್ ತೆಗದುಕೊಂಡಿದ್ದಕ್ಕೆ ಚೇತನ್ಗೆ ಕೋಪ ಬಂದಿದೆ. ನನ್ನ ಗಂಡನಿಗೆ ಚೇತನ್ ಮಧ್ಯದ ಬೆರಳು ತೋರಿಸಿದ್ದಾರೆ. ನಂತರ ನನ್ನ ಗಂಡ ಬೇಕರಿ ಹತ್ತಿರ ಬೈಕ್ ನಿಲ್ಲಿಸಿದಾಗ ಚೇತನ್ ಬಂದು ಡಿಚ್ಚಿ ಹೊಡೆದಿದ್ದಾರೆ. ಆ ವೇಳೆ ನಾನು ಬೇಕರಿ ಬಳಿ ಇದ್ದೆ. ನಾನು ಹೋಗಿ ಕ್ಷಮೆ ಕೇಳಿದರೂ, ನನಗೂ ಚೇತನ್ ಹೊಡೆದಿದ್ದಾರೆ. ನನಗೆ ಹೊಡೆದಾಗ ಜನರು ಚೇತನ್ಗೆ ಹೊಡೆದಿದ್ದಾರೆ’ ಎಂದು ಐಶ್ವರ್ಯಾ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Chetan Chandra: ಕನ್ನಡದ ನಟ ಚೇತನ್ ಚಂದ್ರ ಮೇಲೆ ಬೆಂಗಳೂರಿನಲ್ಲಿ 20 ಜನರಿಂದ ಹಲ್ಲೆ
ಘಟನೆ ಹಿನ್ನಲೆ:
ಭಾನುವಾರ (ಮೇ 12) ಸಂಜೆ ಚೇತನ್ ಚಂದ್ರ ಅವರ ಮೇಲೆ ಸುಮಾರು 20 ಜನರು ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆದ ಬಳಿಕ ಅವರು ಕಗ್ಗಲಿಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಪ್ರಥಮ ಚಿಕಿತ್ಸೆ ಪಡೆಯಲು ಹತ್ತಿರದ ಆಸ್ಪತ್ರೆಗೆ ಬಂದು ಚೇತನ್ ಚಂದ್ರ ಇನ್ಸ್ಟಾಗ್ರಾಮ್ ಲೈವ್ನಲ್ಲಿ ಹಲ್ಲೆ ಬಗ್ಗೆ ವಿವರ ನೀಡಿದರು. ‘ಇದೊಂದು ದುರ್ಘಟನೆ. ನನಗೆ ನ್ಯಾಯ ಬೇಕು’ ಎಂದು ಅವರು ಮನವಿ ಮಾಡಿಕೊಂಡಿದ್ದರು. ಹಲವು ವರ್ಷಗಳಿಂದ ಚೇತನ್ ಚಂದ್ರ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.