ಚಿತ್ರಮಂದಿರದ ಬಳಿಕ ಯೂಟ್ಯೂಬ್ನಲ್ಲೂ ಹಿಟ್ ಆಯ್ತು ‘ನೈಂಟಿ ಬಿಡಿ ಮನೀಗ್ ನಡಿ’ ಸಿನಿಮಾ
‘ನೈಂಟಿ ಬಿಡಿ ಮನೀಗ್ ನಡಿ’ ಸಿನಿಮಾ ಕಳೆದ ವರ್ಷ ತೆರೆಕಂಡು ಚಿತ್ರಮಂದಿರದಲ್ಲಿ 50 ದಿನ ಪ್ರದರ್ಶನ ಕಂಡಿತ್ತು. ಈಗ ಇದೇ ಸಿನಿಮಾ ಮತ್ತೆ ಸದ್ದು ಮಾಡುತ್ತಿದೆ. ಹೌದು, ಯೂಟ್ಯೂಬ್ ಮೂಲಕ ವೀಕ್ಷಣೆಗೆ ಲಭ್ಯವಾಗಿದ್ದು, ವಿಶೇಷವಾಗಿ ಉತ್ತರ ಕರ್ನಾಟಕದ ಪ್ರೇಕ್ಷಕರನ್ನು ರಂಜಿಸುತ್ತಿದೆ. ಈ ಸಿನಿಮಾದಲ್ಲಿ ವೈಜನಾಥ ಬಿರಾದಾರ ಅವರು ಹೀರೋ ಆಗಿ ನಟಿಸಿದ್ದಾರೆ.
2023ರ ಜೂನ್ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ‘ನೈಂಟಿ ಬಿಡಿ ಮನೀಗ್ ನಡಿ’ (90 Bidi Manig Nadi) ಸಿನಿಮಾ ಈಗ ಮತ್ತೆ ಸದ್ದು ಮಾಡುತ್ತಿದೆ ಎಂಬುದು ವಿಶೇಷ. ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತ್ತು. ಈಗ ಪನೋರಮಾ ಸಿನಿಟೈಮ್ಸ್ ಯೂಟ್ಯೂಬ್ (YouTube) ಚಾನೆಲ್ನಲ್ಲಿ ಇದು ವೀಕ್ಷಣೆಗೆ ಲಭ್ಯವಾಗಿದೆ. ಆ ಮೂಲಕ ಡಿಜಿಟಲ್ನಲ್ಲೂ ಈ ಸಿನಿಮಾ ಟ್ರೆಂಡಿಂಗ್ನಲ್ಲಿದೆ. ದಿನ ಕಳೆದಂತೆ ಇದಕ್ಕೆ ವೀವ್ಸ್ ಹೆಚ್ಚುತ್ತಿದೆ. ಇದರ ಆರ್ಗ್ಯಾನಿಕ್ ವೀವ್ಸ್ ಈಗಾಗಲೇ ಒಂದು ಲಕ್ಷ ದಾಟಿದೆ ಎಂಬುದು ಗಮನಾರ್ಹ. ಈ ಸಿನಿಮಾದಲ್ಲಿ ಹಿರಿಯ ನಟ ವೈಜನಾಥ ಬಿರಾದಾರ (Vaijanath Biradar) ಅವರು ಪ್ರಮುಖ ಪಾತ್ರ ಮಾಡಿದ್ದಾರೆ.
ವೈಜನಾಥ ಬಿರಾದಾರ ಅವರು ತಮ್ಮ 70ರ ಪ್ರಾಯದಲ್ಲಿ ಕಮರ್ಷಿಯಲ್ ಹೀರೋ ಆಗಿ ಕಾಣಿಸಿಕೊಂಡ ಸಿನಿಮಾ ‘ನೈಂಟಿ ಬಿಡಿ ಮನೀಗ್ ನಡಿ’. ‘ಅಮ್ಮಾ ಟಾಕೀಸ್ ಬಾಗಲಕೋಟ’ ಬ್ಯಾನರಿ ಮೂಲಕ ರತ್ನಮಾಲಾ ಬಾದರದಿನ್ನಿ ಅವರು ಇದನ್ನು ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿನ ‘ಸಿಂಗಲ್ ಕಣ್ಣಾ ಹಾರಸ್ತಿ, ಡಬ್ಬಲ್ ಹಾರನ್ ಬಾರಸ್ತೀ..’ ಎಂಬ ಉತ್ತರ ಕರ್ನಾಟಕದ ಜವಾರಿ ಶೈಲಿಯ ಹಾಡು ಇದೆ. ಇದರಲ್ಲಿ ಹದಿಹರೆಯದವರೂ ನಾಚುವಂತೆ ಬಿರಾದಾರ ಅವರು ಭರ್ಜರಿ ಸ್ಟೆಪ್ ಹಾಕಿದ್ದಾರೆ. ಆ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ.
ಬಿರಾದಾರ ಅವರು ಈ ಸಿನಿಮಾದಲ್ಲಿ ನಗುತ್ತಾ, ನಗಿಸುತ್ತಾ, ಅಳುತ್ತಾ, ಅಳಿಸುತ್ತಾ ಸಂದೇಶ ಹೇಳಿದ್ದಾರೆ. ಅವರ ನಟನೆ ಕಂಡು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಅವರ ಉತ್ಸಾಹ ನೋಡಿ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್, ‘ಹ್ಯಾಟ್ರಿಕ್ ಹೀರೋ’ ಶಿವರಾಜ್ ಕುಮಾರ್, ಶರಣ್, ನವರಸ ನಾಯಕ ಜಗ್ಗೇಶ್ ಮುಂತಾದ ಹೀರೋಗಳು ಭೇಷ್ ಎಂದಿದ್ದಾರೆ. ಬೆಂಗಳೂರಿನ ಗಾಂಧಿನಗರದಲ್ಲಿ ಇರುವ ‘ಅನುಪಮ’ ಚಿತ್ರಮಂದಿರದ ಎದುರು 40 ಅಡಿ ಎತ್ತರದ ಕಟೌಟ್ ಹಾಕಿಸುವ ಮೂಲಕ ವೈಜನಾಥ ಬಿರಾದಾರ ಅವರ ವೃತ್ತಿಜೀವನಕ್ಕೆ ಗೌರವ ಸಲ್ಲಿಸಿತ್ತು ಎಂಬುದು ವಿಶೇಷ.
ಇದನ್ನೂ ಓದಿ: ‘ಶೆಫ್ ಚಿದಂಬರ’ ಸಿನಿಮಾದ ಮೊದಲ ಹಾಡಿಗಾಗಿ ಮೈಕ್ ಹಿಡಿದ ಅನಿರುದ್ಧ್
ಈ ಸಿನಿಮಾವನ್ನು ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ್ ಅರೆಹೊಳೆ ಅವರು ಜಂಟಿಯಾಗಿ ನಿರ್ದೇಶಿಸಿದ್ದಾರೆ. ಕುಡಿತ, ಡ್ರಗ್ಸ್, ಜೂಜು, ಧೂಮಪಾನಗಳ ಭಯಾನಕ ಲೋಕವನ್ನು ತೆರೆದಿಟ್ಟಿದೆ. ಮನರಂಜನೆ ನೀಡುವುದರ ಜೊತೆಗೆ ಜನರಿಗೆ ಬೇಕಾದ ಸಂದೇಶವನ್ನು ಕೊಟ್ಟಿದೆ. ಬಿರಾದಾರ ಅವರ ಜೊತೆಯಲ್ಲಿ ಕರಿಸುಬ್ಬು, ನೀತಾ ಮೈಂದರ್ಗಿ, ಧರ್ಮ, ಆರ್.ಡಿ. ಬಾಬು, ಪ್ರೀತು ಪೂಜಾ, ಪ್ರಶಾಂತ್ ಸಿದ್ಧಿ, ವಿವೇಕ್ ಜಂಬಗಿ, ಅಭಯ್ ವೀರ್, ಮುರಳಿ ಹೊಸಕೋಟೆ, ರಿಷಬ್ ಬಾದರದಿನ್ನಿ, ರಕ್ಷಿತ್ ಗೌಡ, ಲೋಕೇಶ್ ಮಾಲೂರು, ರವಿದೀಪ್ ದಳವಾಯಿ ಅವರು ನಟಿಸಿದ್ದಾರೆ.
‘ನೈಂಟಿ ಬಿಡಿ ಮನೀಗ್ ನಡಿ’ ಸಿನಿಮಾ:
ಕೃಷ್ಣ ನಾಯ್ಕರ್ ಅವರ ಛಾಯಾಗ್ರಹಣ, ಕಿರಣ್ ಶಂಕರ್ ಹಾಗೂ ಶಿವು ಭೇರಗಿ ಅವರ ಸಂಗೀತ ನಿರ್ದೇಶನ, ಭೂಷಣ್ ಅವರ ಕೊರಿಯೋಗ್ರಫಿ, ಯುಡಿವಿ ವೆಂಕಟೇಶ್ ಅವರ ಸಂಕಲನ ಈ ಸಿನಿಮಾಗೆ ಇದೆ. ರಾಕಿ ರಮೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ. ವೀರ್ ಸಮರ್ಥ್ ಹಿನ್ನೆಲೆ ಸಂಗೀತ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.