ಅಪ್ಪು ಬಾಸ್, ಪುನೀತ್ ರಾಜ್​ಕುಮಾರ್ ಅನ್ನು ನೆನಪಿಸಿಕೊಂಡ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್

ಯೂನಿವರ್ಸಲ್ ಬಾಸ್ ಎಂದು ಕರೆಯಲಾಗುವ ಖ್ಯಾತ ಕ್ರಿಕೆಟಿಗ ಕ್ರಿಸ್ ಗೇಲ್, ಪುನೀತ್ ರಾಜ್​ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ.

ಅಪ್ಪು ಬಾಸ್, ಪುನೀತ್ ರಾಜ್​ಕುಮಾರ್ ಅನ್ನು ನೆನಪಿಸಿಕೊಂಡ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್
ಅಪ್ಪು-ಗೇಲ್
Follow us
|

Updated on:Apr 09, 2023 | 4:02 PM

ಮತ್ತೊಂದು ಐಪಿಎಲ್ ಸೀಸನ್ (IPL 2023) ಪ್ರಾರಂಭವಾಗಿದ್ದು ಆರ್​ಸಿಬಿ (RCB) ಅಭಿಮಾನಿಗಳು ಈ ಬಾರಿಯೂ ಕಪ್ ನಮ್ದೆ ಎನ್ನುತ್ತಿದ್ದಾರೆ. ಈ ಐಪಿಎಲ್​ನ ವಿಶೇಷತೆಯೆಂದರೆ ಆರ್​ಸಿಬಿಯ ಇಬ್ಬರು ಲಿಜೆಂಡ್​ಗಳು ಕಮೆಂಟರಿ ಬಾಕ್ಸ್ ಮೂಲಕ ಆರ್​ಸಿಬಿಗೆ ಬೆಂಬಲ ನೀಡುತ್ತಿದ್ದಾರೆ. ಹೌದು, ಕ್ರಿಸ್ ಗೇಲ್ (Chris Gayle) ಹಾಗೂ ಎಬಿ ಡಿವಿಲಿಯರ್ಸ್ ಅವರುಗಳು ಈ ಬಾರಿ ಐಪಿಎಲ್ ಆಡುತ್ತಿಲ್ಲ ಬದಲಿಗೆ ಕಮೆಂಟರಿ ಮಾಡುತ್ತಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ನಡೆದ ಆರ್​ಸಿಬಿ ಅನ್​ಬಾಕ್ಸಿಂಗ್​ನಲ್ಲಿಯೂ ಈ ದಿಗ್ಗಜರು ಪಾಲ್ಗೊಂಡಿದ್ದರು. ಆರ್​ಸಿಬಿಯ ಭಾಗವಾಗಿರುವ ಮಿಸ್ಟರ್ ನ್ಯಾಗ್ಸ್ ಕ್ರಿಸ್ ಗೇಲ್ ಸಂದರ್ಶನ ಮಾಡಿದ್ದು ಸಂದರ್ಶನದಲ್ಲಿ ಪುನೀತ್ ರಾಜ್​ಕುಮಾರ್ (Puneeth Rajkumar) ಅವರನ್ನು ಕ್ರಿಸ್ ಗೇಲ್ ನೆನಪು ಮಾಡಿಕೊಂಡಿದ್ದಾರೆ.

ಮಿಸ್ಟರ್ ನಾಗ್ಸ್ ಅಲಿಯಾಸ್ ದಾನಿಶ್ ಸೇಠ್ ತಮಾಷೆಯಾಗಿ ಪ್ರಶ್ನೆಗಳನ್ನು ಕೇಳುತ್ತಾ, ನಿಮ್ಮ ತವರು ಯಾವುದು ಅಥವಾ ನಿಮ್ಮ ಹೋಮ್​ಟೌನ್ ಯಾವುದು ಎಂದಾಗ ನನಗೆ ಎರಡು ಹೋಮ್ ಟೌನ್ ಇದೆ. ಒಂದು ಕೆರೆಬಿಯನ್ ಮತ್ತೊಂದು ಕಲಬುರ್ಗಿ ಎಂದಿದ್ದಾರೆ ಕ್ರಿಸ್ ಗೇಲ್. ಕಲಬುರ್ಗಿಗೆ ಭೇಟಿ ನೀಡಿರುವುದಾಗಿಯೂ ಹೇಳಿರುವ ಕ್ರಿಸ್ ಗೇಲ್, ಜೋಳದ ರೊಟ್ಟಿ, ಶೆಂಗ ಚಟ್ನಿ ಚೆನ್ನಾಗಿರುತ್ತೆ ಎಂದು ಸಹ ಹೇಳಿದ್ದಾರೆ. ‘ತ್ರಾಸಾಕ್ಕೆತಿ’ ಹಾಡು ಸಹ ಹಾಡಿದ್ದಾರೆ. ಈ ನಡುವೆ ವಿಶ್ವದಲ್ಲಿ ಇರುವುದು ಇಬ್ಬರೇ ಬಾಸ್​ಗಳು ಒಬ್ಬರು ಅಪ್ಪು ಬಾಸ್ ಹಾಗೂ ಮತ್ತೊಬ್ಬರು ಯೂನಿವರ್ಸಲ್ ಬಾಸ್ ಎಂದಿದ್ದಾರೆ ಕ್ರಿಸ್ ಗೇಲ್. ಮಾತ್ರವಲ್ಲದೆ ಅಪ್ಪುವನ್ನು ಮಿಸ್ ಮಾಡಿಕೊಳ್ಳುವುದಾಗಿಯೂ ಹೇಳಿದ್ದಾರೆ.

ಕ್ರಿಕೆಟಿಗ ಕ್ರಿಸ್ ಗೇಲ್, ಅಪ್ಪು ಅವರನ್ನು ನೆನಪಿಸಿಕೊಂಡಿರುವುದು ಅಪ್ಪು ಅಭಿಮಾನಿಗಳಿಗೆ ಖುಷಿ ತಂದಿರುವುದು ಮಾತ್ರವೇ ಅಲ್ಲದೆ, ಸ್ವತಃ ಯೂನಿವರ್ಸಲ್ ಬಾಸ್ ಎಂದು ಕರೆಸಿಕೊಳ್ಳುವ ಕ್ರಿಸ್ ಗೇಲ್ ಅವರು ಅಪ್ಪು ಅವರನ್ನು ಬಾಸ್ ಎಂದು ಕರೆದಿರುವುದಕ್ಕೆ ಹೆಮ್ಮೆ ಪಡುತ್ತಿದ್ದಾರೆ. ಕ್ರಿಸ್ ಗೇಲ್, ಅಪ್ಪು ಬಾಸ್ ಎಂದಿರುವುದು ವಿಡಿಯೋ ತುಣುಕು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಅಂದಹಾಗೆ ಪುನೀತ್ ರಾಜ್​ಕುಮಾರ್ ಅವರಿಗೆ ಆರ್​ಸಿಬಿ ಜೊತೆಗೆ ಉತ್ತಮ ಬಾಂಧವ್ಯ ಮೊದಲಿನಿಂದಲೂ ಇತ್ತು. ಆರ್​ಸಿಬಿ ತಂಡಕ್ಕೆ ರಾಯಭಾರಿಯಾಗಿಯೂ ಕೆಲ ಕಾಲ ಇದ್ದರು. ಆರ್​ಸಿಬಿಯ ಹಲವು ಆಟಗಾರರೊಟ್ಟಿಗೆ ಸ್ನೇಹವನ್ನು ಪುನೀತ್ ರಾಜ್​ಕುಮಾರ್ ಹೊಂದಿದ್ದರು. ಇನ್ನು ಆರ್​ಸಿಬಿ ಗಾಗಿ ದಾನಿಶ್ ಸೇಠ್ ಹಲವು ವರ್ಷಗಳಿಂದ ಸಂದರ್ಶನ ಮಾಡುತ್ತಲೇ ಬರುತ್ತಿದ್ದಾರೆ. ಈ ಹಿಂದೆಯೂ ಹಲವು ಬಾರಿ ಕ್ರಿಸ್ ಗೇಲ್ ಅನ್ನು ಸಂದರ್ಶನ ಮಾಡಿದ್ದರು. ಆಗ ಹಿಂದೊಮ್ಮೆ ಕಲಬುರ್ಗಿ ಬಗ್ಗೆ ಕ್ರಿಸ್ ಗೇಲ್ ಮಾತನಾಡಿದ್ದರು. ಇದೀಗ ಮತ್ತೊಮ್ಮೆ ಕಲಬುರ್ಗಿ ಬಗ್ಗೆ ಕ್ರಿಸ್ ಮಾತನಾಡಿದ್ದಾರೆ.

ಇನ್ನು ಈ ಐಪಿಎಲ್​ನಲ್ಲಿ ಆರ್​ಸಿಬಿ ಈವರೆಗೆ ಎರಡು ಪಂದ್ಯಗಳನ್ನು ಆಡಿದೆ. ಮೊದಲ ಪಂದ್ಯದಲ್ಲಿ ದೊಡ್ಡ ವಿಜಯ ಗಳಿಸಿದರೆ ಎರಡನೇ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಆರ್​ಸಿಬಿಯ ಮುಂದಿನ ಪಂದ್ಯ ಲಖನೌ ಸೂಪರ್ ಜಾಯಿಂಟ್ಸ್ ವಿರುದ್ಧ ಸೋಮವಾರ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:00 pm, Sun, 9 April 23