ನಟ ದರ್ಶನ್ ವಿದೇಶ ಪ್ರಯಾಣದ ಹೊಸ ದಿನಾಂಕಕ್ಕೆ ಕೋರ್ಟ್ ಅನುಮತಿ

ದರ್ಶನ್ ತೂಗುದೀಪ ಅವರು ಬಹುನಿರೀಕ್ಷಿತ ‘ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಹೊಸ ದಿನಾಂಕದಲ್ಲಿ ವಿದೇಶಕ್ಕೆ ತೆರಳಿ ಶೂಟಿಂಗ್ ಮಾಡಲು ಅವರಿಗೆ ನ್ಯಾಯಾಲಯದ ಅನುಮತಿ ಸಿಕ್ಕಿದೆ. ಈ ಸಿನಿಮಾಗೆ ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್ ಅಭಿಮಾನಿಗಳು ಈ ಚಿತ್ರದ ಮೇಲೆ ಸಖತ್ ನಿರೀಕ್ಷೆ ಹೊಂದಿದ್ದಾರೆ.

ನಟ ದರ್ಶನ್ ವಿದೇಶ ಪ್ರಯಾಣದ ಹೊಸ ದಿನಾಂಕಕ್ಕೆ ಕೋರ್ಟ್ ಅನುಮತಿ
Darshan Thoogudeepa

Updated on: Jul 08, 2025 | 5:06 PM

ಸಿನಿಮಾ ಶೂಟಿಂಗ್ ಸಲುವಾಗಿ ನಟ ದರ್ಶನ್ (Darshan Thoogudeepa) ಅವರು ವಿದೇಶಕ್ಕೆ ತೆರಳಲು ಹೊಸ ದಿನಾಂಕಕ್ಕೆ ಕೋರ್ಟ್ ಅನುಮತಿ ನೀಡಿದೆ. ಜುಲೈ 11ರಿಂದ ಜುಲೈ 30ರವರೆಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಲಾಗಿದೆ. ‘ಡೆವಿಲ್’ ಸಿನಿಮಾ (Devil Movie) ಚಿತ್ರೀಕರಣಕ್ಕಾಗಿ ಯುರೋಪ್ ಹಾಗೂ ದುಬೈಗೆ ದರ್ಶನ್ ಅವರು ತೆರಳಲಿದ್ದಾರೆ. ಈ ಹಿಂದೆ ಜುಲೈ 1ರಿಂದ 25ರವರೆಗೆ ಕೋರ್ಟ್ ಅನುಮತಿ ನೀಡಿತ್ತು. ಆದರೆ ದಿನಾಂಕ ಬದಲಾವಣೆ ಕೋರಿ ದರ್ಶನ್ (Darshan) ಅವರು ಅರ್ಜಿ ಸಲ್ಲಿಸಿದ್ದರು.

ದರ್ಶನ್ ನಟನಾಗಿರುವುದರಿಂದ ಜೀವನೋಪಾಯಕ್ಕೆ ನಟನೆಯನ್ನೇ ವೃತ್ತಿಯಾಗಿ ಸ್ವೀಕರಿಸಿದ್ದಾರೆ. ಈ ಮೊದಲು ಸಿನಿಮಾ ಶೂಟಿಂಗ್​ಗಾಗಿ ಜುಲೈ 1ರಿಂದ ಜುಲೈ 25ರವರೆಗೆ ಯೂರೋಪ್, ದುಬೈಗೆ ಶೂಟಿಂಗ್ ತೆರಳಲು ಅನುಮತಿ ಕೋರಿದ್ದರು. ಹೈಕೋರ್ಟ್ ನೀಡಿದ್ದ ಜಾಮೀನು ಆದೇಶದಲ್ಲಿ ಕೋರ್ಟ್ ಅನುಮತಿಯಿಲ್ಲದೇ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲವೆಂದು ಷರತ್ತು ವಿಧಿಸಿತ್ತು. ಹೀಗಾಗಿ ಷರತ್ತಿನಿಂದ ವಿನಾಯಿತಿ ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು.

ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದ ಎಸ್‌ಪಿಪಿ ಪ್ರಸನ್ನ ಕುಮಾರ್, ‘ನಟ ದರ್ಶನ್ ಆರ್ಥಿಕವಾಗಿ ಸಬಲನಾಗಿದ್ದು, ವಿದೇಶಕ್ಕೆ ತೆರಳಲು ಅನುಮತಿ ನೀಡಿದರೆ ಮರಳಿ ಬಾರದೇ ಇರಬಹುದು. ಹೀಗಾಗಿ ಅನುಮತಿ ನೀಡಬಾರದು’ ಎಂದು ಆಕ್ಷೇಪಣೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 57ನೇ ಸಿಸಿಹೆಚ್ ಕೋರ್ಟ್ ಜುಲೈ 1ರಿಂದ ಜುಲೈ 25ರವರೆಗೆ ವಿದೇಶ ಪ್ರಯಾಣಕ್ಕೆ ನಟ ದರ್ಶನ್ ಅವರಿಗೆ ಅನುಮತಿ ನೀಡಿತ್ತು. ವಿದೇಶದಿಂದ ಮರಳಿದ ನಂತರ ಕೋರ್ಟ್​ಗೆ ತಪ್ಪದೇ ಹಾಜರಾಗಬೇಕೆಂದು ಷರತ್ತು ವಿಧಿಸಿತ್ತು.

ಆದರೆ ಕೋರ್ಟ್ ನೀಡಿದ್ದ ಈ ಅವಧಿಯಲ್ಲಿ ವಿದೇಶಕ್ಕೆ ತೆರಳಲು ಸಾಧ್ಯವಾಗದ್ದರಿಂದ ಜುಲೈ 11ರಿಂದ ಜುಲೈ 30ರವರೆಗೆ ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿ ನಟ ದರ್ಶನ್ ಅರ್ಜಿ ಸಲ್ಲಿಸಿದರು. ಇಂದು (ಜುಲೈ 8) ಅದರ ವಿಚಾರಣೆ ನಡೆದಿದೆ. ಜುಲೈ 11ರಿಂದ ಜುಲೈ 30ರವರೆಗೆ ಸಿನಿಮಾದ ಶೂಟಿಂಗ್ ಸಲುವಾಗಿ ವಿದೇಶಕ್ಕೆ ತೆರಳಲು ಅನುಮತಿ ನೀಡಲಾಗಿದೆ.

ಇದನ್ನೂ ಓದಿ: ಫಾರ್ಮ್​ ಹೌಸ್​ನಲ್ಲಿ ಪಕ್ಷಿಗಳ ಜೊತೆ ವಿಜಯಲಕ್ಷ್ಮಿ ದರ್ಶನ್ ಖುಷಿಯ ಕ್ಷಣ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಆರೋಪಿ ಆಗಿದ್ದಾರೆ. ಆ ಪ್ರಕರಣದಲ್ಲಿ ಅವರು ಈಗಾಗಲೇ ಜೈಲುವಾಸ ಅನುಭವಿಸಿ ಬಂದಿದ್ದಾರೆ. ಇದರಿಂದಾಗಿ ‘ಡೆವಿಲ್’ ಸಿನಿಮಾದ ಕೆಲಸಗಳು ತಡವಾದವು. ಜಮೀನು ಸಿಕ್ಕ ಬಳಿಕ ಅವರು ಚಿತ್ರೀಕರಣಕ್ಕೆ ಮರುಚಾಲನೆ ನೀಡಿದರು. ವಿದೇಶದಲ್ಲಿ ನಡೆಯಬೇಕಿರುವ ಚಿತ್ರೀಕರಣಕ್ಕೆ ಈಗ ನ್ಯಾಯಾಲಯದಿಂದ ಅನುಮತಿ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.