ರಮ್ಯಾಗೆ ಅಶ್ಲೀಲ ಸಂದೇಶ ಕಳಿಸಿದ ಉಡುಪಿ ಮೂಲದ ಇಬ್ಬರ ಬಂಧನ
ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳಿಸಿದವರಿಗೆ ಸೈಬರ್ ಪೊಲೀಸರು ಕಾನೂನಿನ ಪಾಠ ಕಲಿಸುತ್ತಿದ್ದಾರೆ. 40ಕ್ಕೂ ಅಧಿಕ ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ ರಮ್ಯಾ ಅವರು ದೂರು ನೀಡಿದ್ದರು. ಅದರ ಆಧಾರದ ಮೇಲೆ ಹಲವರನ್ನು ಬಂಧಿಸಲಾಗಿದೆ. ಉಡುಪಿ ಮೂಲದ ಇಬ್ಬರು ಸೇರಿ ಒಟ್ಟು 9 ಮಂದಿ ಈವರೆಗೂ ಅರೆಸ್ಟ್ ಆಗಿದ್ದಾರೆ.

ದರ್ಶನ್ ವಿರುದ್ಧ ಮಾತನಾಡಿದ್ದ ನಟಿ ರಮ್ಯಾ (Ramya) ಅವರಿಗೆ ಕೆಲವರು ಅಶ್ಲೀಲ ಸಂದೇಶ ಕಳಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯವಾಗಿ ಮೆಸೇಜ್ ಮಾಡಿದವರ ಮೇಲೆ ರಮ್ಯಾ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಆರಂಭಿಸಿದ ಸೈಬರ್ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದರು. ಇದುವರೆಗೂ 7 ಜನರನ್ನು ಬಂಧಿಸಲಾಗಿತ್ತು. ಈಗ ಉಡುಪಿ ಮೂಲದ ಇನ್ನಿಬ್ಬರನ್ನು ಬಂಧಿಸಲಾಗಿದೆ. ಸುಜನ್ ಮತ್ತು ಆದರ್ಶ್ ಎಂಬುವರವನ್ನು ಅರೆಸ್ಟ್ ಮಾಡಲಾಗಿದೆ. ಅಲ್ಲಿಗೆ ಒಟ್ಟು 9 ಜನರನ್ನು ಸೈಬರ್ ಕ್ರೈಂ ಪೊಲೀಸರು (Cyber Crime Police) ಬಂಧಿಸಿದಂತಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳಿಗೆ ಹಾಗೂ ಸಾಮಾನ್ಯ ಹೆಣ್ಣು ಮಕ್ಕಳಿಗೆ ಕೂಡ ಕಿಡಿಗೇಡಿಗಳು ಅಸಭ್ಯವಾಗಿ ಕಮೆಂಟ್ ಮಾಡುತ್ತಾರೆ. ಅಶ್ಲೀಲ ಸಂದೇಶಗಳಿಗೆ ಹೆದರಿ ಎಷ್ಟೂ ಮಹಿಳೆಯರು ಸುಮ್ಮನಾಗುತ್ತಾರೆ. ಆದರೆ ರಮ್ಯಾ ಅವರು ಅಂಥ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಲು ಮುಂದಾದರು. ಅದರ ಪರಿಣಾಮವಾಗಿ ಆರೋಪಿಗಳನ್ನು ಬಂಧಿಸಿ, ತನಿಖೆ ಮಾಡಲಾಗುತ್ತಿದೆ.
40ಕ್ಕೂ ಅಧಿಕ ಸೋಶಿಯಲ್ ಮೀಡಿಯಾ ಖಾತೆಗಳಿಂದ ರಮ್ಯಾ ಅವರಿಗೆ ಅಶ್ಲೀಲ ಸಂದೇಶ ಬಂದಿತ್ತು. ಆ ಪೈಕಿ ಕೆಲವು ಅಸಭ್ಯ ಕಮೆಂಟ್ಗಳನ್ನು ರಮ್ಯಾ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡುವ ಮೂಲಕ ಎಲ್ಲವನ್ನೂ ಬಯಲಿಗೆ ಎಳೆದಿದ್ದರು. ಇಂಥವರಿಗೆ ಕಾನೂನಿನ ಮೂಲಕ ಪಾಠ ಕಲಿಸುವ ಉದ್ದೇಶದಿಂದ ರಮ್ಯಾ ದೂರು ನೀಡಿದರು.
‘ಸೆಲೆಬ್ರಿಟಿಯಾದ ನಮಗೆ ಟ್ರೋಲ್ ಇದ್ದೇ ಇರುತ್ತದೆ. ಆದರೆ ಈ ಮಟ್ಟಕ್ಕೆ ನನಗೆ ಯಾವಾಗಲೂ ಅನುಭವ ಆಗಿರಲಿಲ್ಲ. ರೇಣುಕಾಸ್ವಾಮಿ ಸಂದೇಶ ಕಳಿಸಿದ್ದಕ್ಕೂ ದರ್ಶನ್ ಅಭಿಮಾನಿಗಳು ಸಂದೇಶ ಕಳಿಸಿದ್ದಕ್ಕೂ ಯಾವುದೇ ವ್ಯತ್ಯಾಸವಿಲ್ಲ ಅನಿಸಿತು. ನನಗೆ ಈ ರೀತಿ ಕಳಿಸಿದ್ದಾರೆ ಎಂದರೆ ಸಾಮಾನ್ಯ ಹೆಣ್ಮಕ್ಕಳಿಗೆ ಇನ್ನು ಯಾವ ರೀತಿ ಮೆಸೇಜ್ ಕಳಿಸಿರಬಹುದು. ನಮ್ಮ ಸಮಾಜ ಎಷ್ಟು ಕೀಳು ಮಟ್ಟಕ್ಕೆ ಬಂದಿದೆ ಅಂತ ನನಗೆ ಬೇಸರ ಆಯಿತು. ಇದನ್ನು ಸುಮ್ಮನೆ ಬಿಡಬಾರದು ಅಂತ ನನಗೆ ಅನಿಸಿತು. ಹಾಗಾಗಿ ಕಮಿಷನರ್ ಸಾಹೇಬರಿಗೆ ನಾನು ದೂರು ಕೊಟ್ಟಿದ್ದೇನೆ’ ಎಂದು ರಮ್ಯಾ ಹೇಳಿದ್ದರು.
ಇದನ್ನೂ ಓದಿ: ಹೆಬ್ಬಾಳ ಫ್ಲೈಓವರ್ ಲೋಕಾರ್ಪಣೆ ಮಾಡಿದ ಸಿದ್ದರಾಮಯ್ಯ: ಡಿಕೆ ಶಿವಕುಮಾರ್, ರಮ್ಯಾ ಸಾಥ್
ಇತ್ತೀಚೆಗೆ ಈ ಕೇಸ್ ಬಗ್ಗೆ ರಮ್ಯಾ ಮಾತನಾಡಿದರು. ‘ಮೊದಲಿನ ರೀತಿ ಅಶ್ಲೀಲ ಸಂದೇಶಗಳು ಈಗ ಬರುತ್ತಿಲ್ಲ. ಉಳಿದಿರುವ ಇನ್ನಷ್ಟು ಜನರನ್ನು ಅರೆಸ್ಟ್ ಮಾಡಬೇಕಿದೆ. ನಾನು ದೂರು ಕೊಟ್ಟ ಬಳಿಕ ಒಂದು ಜಾಗೃತಿ ಮೂಡಿದೆ. ಎಷ್ಟೋ ಹೆಣ್ಣು ಮಕ್ಕಳು ನನಗೆ ಮೆಸೇಜ್ ಮಾಡಿದ್ದಾರೆ. ಈಗ ಅರೆಸ್ಟ್ ಆಗುತ್ತಿರುವುದರಿಂದ ಕೆಟ್ಟ ಕಮೆಂಟ್ ಮಾಡುವುದಕ್ಕೂ ಮುನ್ನ 10 ಸಾರಿ ಯೋಚನೆ ಮಾಡುತ್ತಾರೆ. ಟ್ರೋಲಿಂಗ್ ಕಡಿಮೆ ಆಗಿದೆ ಅಂತ ನನಗೆ ಹೆಣ್ಮಕ್ಕಳು ಹೇಳುತ್ತಿದ್ದಾರೆ’ ಎಂದಿದ್ದಾರೆ ರಮ್ಯಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



