ಯಶಸ್ವಿಯಾಗಿ 25 ದಿನ ಪೂರೈಸಿದ ‘ಸು ಫ್ರಮ್ ಸೋ’: ಪರಭಾಷೆ ಚಿತ್ರಗಳ ಎದುರು ಭಾರಿ ಪೈಪೋಟಿ
ಜೆ.ಪಿ. ತುಮಿನಾಡು ನಿರ್ದೇಶನ ಮಾಡಿರುವ ‘ಸು ಫ್ರಮ್ ಸೋ’ ಸಿನಿಮಾ ಸೂಪರ್ ಹಿಟ್ ಆಗಿದೆ. ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿರುವ ಈ ಚಿತ್ರಕ್ಕೆ ಈಗಲೂ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಪರಭಾಷೆ ಮಂದಿ ಕೂಡ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. 25 ದಿನ ಕಳೆದರೂ ಹಲವು ಕಡೆಗಳಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ.

ಕನ್ನಡ ಚಿತ್ರರಂಗದ ಮಾರುಕಟ್ಟೆ ಚಿಕ್ಕದು ಎಂದು ಕೊರಗುವವರು ಅನೇಕರಿದ್ದಾರೆ. ಆದರೆ ಉತ್ತಮ ಸಿನಿಮಾಗಳನ್ನು ಮಾಡಿದರೆ ಮಾರುಕಟ್ಟೆ ತಂತಾನೆ ದೊಡ್ಡದಾಗುತ್ತದೆ ಎಂಬುದಕ್ಕೆ ಈಗಾಗಲೇ ಹಲವು ಉದಾಹರಣೆಗಳು ಸಿಕ್ಕಿವೆ. ‘ಸು ಫ್ರಮ್ ಸೋ’ (Su From So) ಸಿನಿಮಾ ಕೂಡ ಆ ಮಾತಿಗೆ ಬೆಸ್ಟ್ ಉದಾಹರಣೆ. ಸಣ್ಣ ಬಜೆಟ್ನಲ್ಲಿ ನಿರ್ಮಾಣ ಆದ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ರಾಜ್ ಬಿ. ಶೆಟ್ಟಿ (Raj B Shetty), ಜೆ.ಪಿ. ತುಮಿನಾಡು, ಸಂಧ್ಯಾ ಅರಕೆರೆ ಮುಂತಾದವರು ನಟಿಸಿದ ಈ ಸಿನಿಮಾ ಈಗ ಯಶಸ್ವಿಯಾಗಿ 25 ದಿನಗಳ ಪ್ರದರ್ಶನ ಕಂಡಿದೆ. ಇಂದಿಗೂ ಹಲವು ಕಡೆಗಳಲ್ಲಿ ಹೌಸ್ಫುಲ್ ಆಗುತ್ತಿದೆ.
ಜುಲೈ 25ರಂದು ‘ಸು ಫ್ರಮ್ ಸೋ’ ಸಿನಿಮಾ ಬಿಡುಗಡೆ ಆಯಿತು. ಅಂದಾಜು 5.50 ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿರುವುದು ಈ ಚಿತ್ರದ ಹೆಚ್ಚುಗಾರಿಕೆ. ಇಷ್ಟಕ್ಕೇ ನಿಂತಿಲ್ಲ. ಇನ್ನೂ ಹಲವು ದಿನಗಳ ಕಾಲ ‘ಸು ಫ್ರಮ್ ಸೋ’ ಸಿನಿಮಾದ ಅಬ್ಬರ ಮುಂದುವರಿಯಲಿದೆ.
‘ಸು ಫ್ರಮ್ ಸೋ’ ಸಿನಿಮಾ ಬಿಡುಗಡೆ ಆದ ಬಳಿಕ ಪರಭಾಷೆ ಸಿನಿಮಾಗಳಿಂದ ಸಖತ್ ಪೈಪೋಟಿ ಇತ್ತು. ತೆಲುಗಿನ ‘ಕಿಂಗ್ಡಮ್’, ತಮಿಳಿನ ‘ಕೂಲಿ’, ಹಿಂದಿಯ ‘ವಾರ್ 2’ ಸಿನಿಮಾಗಳು ಬಿಡುಗಡೆ ಆದವು. ಅದಕ್ಕೂ ಮುನ್ನ ಬಂದಿದ್ದ ‘ಸೈಯಾರ’ ಸಿನಿಮಾ ಸಹ ಚೆನ್ನಾಗಿ ಪ್ರದರ್ಶನ ಕಾಣುತ್ತಿತ್ತು. ಹಾಗಿದ್ದರೂ ಕೂಡ ‘ಸು ಫ್ರಮ್ ಸೋ’ ಸಿನಿಮಾದ ಹವಾ ಕಡಿಮೆ ಆಗಲಿಲ್ಲ.
View this post on Instagram
ಪ್ರತಿ ದಿನವೂ ‘ಸು ಫ್ರಮ್ ಸೋ’ ಸಿನಿಮಾ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡಿತು. ನೋಡನೋಡುತ್ತಿದ್ದಂತೆಯೇ ವಿಶ್ವಾದ್ಯಂತ ನೂರು ಕೋಟಿ ರೂಪಾಯಿ ಬಾಚಿಕೊಂಡಿತು. ಕರ್ನಾಟಕದಲ್ಲೇ ಈ ಚಿತ್ರಕ್ಕೆ 25 ದಿನಗಳಲ್ಲಿ 70 ಕೋಟಿ ರೂಪಾಯಿಗೂ ಹೆಚ್ಚು ಕಮಾಯಿ ಆಗಿದೆ. ಮಲಯಾಳಂ, ತೆಲುಗು ವರ್ಷನ್ನಿಂದಲೂ ಕೋಟ್ಯಂತರ ರೂಪಾಯಿ ಸಿಕ್ಕಿದೆ. ವಿದೇಶದ ಗಳಿಕೆಯೂ ಸೇರಿ 24 ದಿನಕ್ಕೆ 105 ಕೋಟಿ ರೂಪಾಯಿ ಆಗಿದೆ.
ಇದನ್ನೂ ಓದಿ: ‘ಸು ಫ್ರಮ್ ಸೋ’ ರವಿ ಅಣ್ಣನಿಗೆ ಪ್ರೇಕ್ಷಕರಿಂದ ಸಿಕ್ತು ಸಿಕ್ಕಾಪಟ್ಟೆ ಪ್ರೀತಿ
‘ಕೂಲಿ’, ‘ವಾರ್ 2’ ಸಿನಿಮಾಗಳು ಮಿಶ್ರ ಪ್ರತಿಕ್ರಿಯೆ ಪಡೆದಿವೆ. ಇದರಿಂದ ‘ಸು ಫ್ರಮ್ ಸೋ’ ಸಿನಿಮಾಗೆ ಪ್ಲಸ್ ಆಗಿದೆ. ಪ್ರತಿ ವೀಕೆಂಡ್ನಲ್ಲಿ ಈ ಸಿನಿಮಾ ಅಬ್ಬರಿಸುತ್ತಿದೆ. ಹಿಂದಿ ಮತ್ತು ತಮಿಳು ರಿಮೇಕ್ ಹಕ್ಕುಗಳು ಒಳ್ಳೆಯ ಮೊತ್ತಕ್ಕೆ ಮಾರಾಟ ಆಗಿವೆ. ಒಟಿಟಿ ಡೀಲ್ ಬಾಕಿ ಇದೆ. ಒಟ್ಟಾರೆಯಾಗಿ ಈ ಸಿನಿಮಾದ ನಿರ್ಮಾಪಕರಿಗೆ ಹಣದ ಹೊಳೆಯೇ ಹರಿದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








