‘ಜಿಂಗೋ’ ಸಿನಿಮಾ ಸೆಕೆಂಡ್ ಲುಕ್, ‘ಜಿಂಗೋ’ ಎಂದರೆ ಅರ್ಥವೇನು?
Daali Dhananjay Jingo movie: ಡಾಲಿ ಧನಂಜಯ್ ನಟಿಸಿ ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾ ನಿರ್ದೇಶನ ಮಾಡಿರುವ ‘ಜಿಂಗೋ’ ಸಿನಿಮಾದ ಎರಡನೇ ಪೋಸ್ಟರ್, ಡಾಲಿ ಧನಂಜಯ್ ಹುಟ್ಟುಹಬ್ಬದಂದು ಬಿಡುಗಡೆ ಆಗಿದೆ. ಈಗ ಬಿಡುಗಡೆ ಆಗಿರುವ ಪೋಸ್ಟರ್ ಕೆಲ ಕುತೂಹಲಗಳನ್ನು ಅಡಗಿಸಿಟ್ಟಿಕೊಂಡಿದೆ. ಅವೇನು? ಸಿನಿಮಾದ ನಿರ್ಮಾಣ, ಬಿಡುಗಡೆ ಇತ್ಯಾದಿ ಮಾಹಿತಿಗಳು ಇಲ್ಲಿವೆ...

ಡಾಲಿ ಧನಂಜಯ್ (Daali Dhananjay) ಹುಟ್ಟುಹಬ್ಬ ಇಂದು (ಆಗಸ್ಟ್ 23). ಡಾಲಿ, ಈ ಬಾರಿ ಅಭಿಮಾನಿಗಳೊಟ್ಟಿಗೆ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ. ಈ ಬಾರಿ ಯಾರೂ ಸಹ ಹುಟ್ಟುಹಬ್ಬ ಆಚರಣೆಗೆ ಮನೆಯ ಬಳಿ ಬರಬಾರದೆಂದು ಮನವಿಯನ್ನು ಸಹ ಅವರು ಮಾಡಿದ್ದರು. ಅಂದಹಾಗೆ ಮದುವೆ ಆದ ಬಳಿಕ ಡಾಲಿ ಧನಂಜಯ್ ಅವರ ಮೊದಲ ಹುಟ್ಟುಹಬ್ಬ ಇದು. ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ನಟನೆಯ ಕೆಲ ಸಿನಿಮಾಗಳ ಟೀಸರ್, ಪೋಸ್ಟರ್ಗಳು ಬಿಡುಗಡೆ ಆಗಿವೆ. ಅದರಲ್ಲಿ ‘ಜಿಂಗೋ’ ಸಹ ಒಂದು.
ಈ ಹಿಂದೆ ಡಾಲಿ ಧನಂಜಯ್ ಪ್ರಸ್ತುತ ಪಡಿಸಿ, ವಿತರಣೆ ಮಾಡಿದ್ದ ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾ ನಿರ್ದೇಶಿಸಿದ್ದ ಶಶಾಂಕ್ ಸೋಗಾಲ ಅವರು ಇದೀಗ ಡಾಲಿ ಧನಂಜಯ್ ನಾಯಕನಾಗಿ ನಟಿಸಿರುವ ‘ಜಿಂಗೋ’ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಇಂದು ಡಾಲಿ ಧನಂಜಯ್ ಹುಟ್ಟುಹಬ್ಬದ ಪ್ರಯುಕ್ತ ‘ಜಿಂಗೋ’ ಸಿನಿಮಾದ ಎರಡನೇ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಈಗ ಬಿಡುಗಡೆ ಆಗಿರುವ ಪೋಸ್ಟರ್ನಲ್ಲಿಯೂ ‘ಜಿಂಗೋ’ನ ಹುಟ್ಟುಹಬ್ಬದ ಚಿತ್ರವೇ ಇದೆ.
ಈ ಸಿನಿಮಾದ ಟೀಸರ್, ಪೋಸ್ಟರ್, ಹಾಡು ಗಮನ ಸೆಳೆಯುತ್ತಲೇ ಬಂದಿವೆ. ಕಳೆದ ವರ್ಷ ಬಿಡುಗಡೆಯಾದ ಚಿತ್ರದ ಅನೌನ್ಸ್ಮೆಂಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಚರ್ಚೆಯನ್ನು ಸೃಷ್ಟಿಸಿತು. ಡಾಲಿ ಧನಂಜಯ ಅವರ “ಜಿಂಗೋ” ಮೋನೋಲಾಗ್ ಮತ್ತು ಅದರ ಜೊತೆಗಿನ ಸಂಗೀತ “ನರ ನರ ಜಿಂಗೋ” ಸಹ ಜನರ ಮೆಚ್ಚುಗೆ ಪಡೆಯಿತು. ಇದೀಗ ಎರಡನೇ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಈ ಪೋಸ್ಟರ್ ಸಹ ಕುತೂಹಲ ಕೆರಳಿಸಿದೆ. ಜೊತೆಗೆ ‘ಜಿಂಗೋ’ ಎಂದರೆ ಅರ್ಥವೇನು ಎಂದು ಸಹ ಹೇಳಿದೆ.
ಇದನ್ನೂ ಓದಿ:ನಾನು ಡಾಲಿ ಧನಂಜಯ್ ಅಭಿಮಾನಿ ಎಂದ ಸಿದ್ಧಾರ್ಥ್, ಕೊಟ್ಟರು ಕಾರಣ
ಸಿನಿಮಾದ ಪೋಸ್ಟರ್ನಲ್ಲಿ ಕಥಾನಾಯಕ ಜಿಂಗೋನ ಹುಟ್ಟುಹಬ್ಬ ಸೆಲೆಬ್ರೇಷನ್ ದೃಶ್ಯವಿದೆ. ಜಿಂಕೆ ಗೋಪಣ್ಣನೇ ಈ ‘ಜಿಂಗೋ’. ಪೋಸ್ಟರ್ನಲ್ಲಿ ಹಲವು ಬಂದೂಕುಗಳು ನಾಯಕ ಡಾಲಿ ಧನಂಜಯ್ ಕಡೆಗೆ ಮುಖ ಮಾಡಿರುವುದು ಕಾಣುತ್ತದೆ. ವಿಶೇಷವೆಂದರೆ ಕತ್ತರಿಸಿರುವ ಕೇಕ್ ಮೇಲೆ ‘ಫ್ರಂ ಆಂಡ್ ಟು’ ಎಂದಿದೆ. ಹಾಗಾಗಿ ‘ಜಿಂಗೋ’ ಸಿನಿಮಾನಲ್ಲಿ ಡಾಲಿಯದ್ದು ದ್ವಿಪಾತ್ರ ಇರಬಹುದಾ ಎಂಬ ಅನುಮಾನವೂ ಮೂಡುತ್ತದೆ. ಜಿಂಗೋ ಟೀಸರ್ನಲ್ಲಿ ‘ರಾಜಕಾರಣಿ ಡಾಲಿ’ಯ ಬಲಗೈನಲ್ಲಿದ್ದ ಮಣಿಗಳು, ಕಡಗ ಈಗ ಜಿಂಗೋನ ಎದುರಿಗಿರುವ ವ್ಯಕ್ತಿಯ ಕೈಯಲ್ಲಿರುವುದು ದ್ವಿಪಾತ್ರದ ಅನುಮಾನವನ್ನು ಬಲಗೊಳಿಸುತ್ತಿವೆ.
ಸಾಧಾರಣ ಸಿನಿಮಾ ಆಗಿ ಪ್ರಾರಂಭವಾಗಿದ್ದ ಈ ಸಿನಿಮಾ ಈಗ ಪ್ಯಾನ್ ಇಂಡಿಯಾ ಸಿನಿಮಾ ಆಗಿ ರೂಪುಗೊಂಡಿದೆ. ಈಗ ಬಿಡುಗಡೆ ಆಗಿರುವ ‘ಜಿಂಗೋ’ ಪೋಸ್ಟರ್ ಅನ್ನು ಕನ್ನಡದ ಜೊತೆಗೆ ತೆಲುಗು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದ ಕತೆ ಎಲ್ಲ ಭಾಷೆ, ರಾಜ್ಯಗಳ ಸ್ಥಳೀಯತೆಗೆ ಒಗ್ಗುತ್ತದೆಯಾದ್ದರಿಂದ ಸಿನಿಮಾ ಅನ್ನು ಪ್ಯಾನ್ ಇಂಡಿಯಾ ಮಾಡಲಾಗಿದೆ ಎಂಬುದು ಚಿತ್ರತಂಡದ ಹೇಳಿಕೆ. ಸಣ್ಣ ಪಟ್ಟಣದ ಕಥೆಯಾಗಿ ಆರಂಭವಾದದ್ದು ಇದೀಗ ಚಿತ್ರ ತನ್ನ ಕ್ಯಾನ್ವಾಸ್ ಅನ್ನು ವಿಸ್ತರಿಸಿಕೊಂಡಿದ್ದು ಒಂದು ಅಪ್ಪಟ ದೊಡ್ಡ ಪರದೆ ವೀಕ್ಷಣೆಗೆ ಸರಿಹೊಂದುವಂತೆ ದೃಶ್ಯಾವಳಿಗಳನ್ನು ಹೆಣೆಯಲಾಗಿದೆ ಎಂದಿದೆ ಚಿತ್ರತಂಡ.
“ ಈಗ ಬಿಡುಗಡೆಯಾಗಿರುವ ಪೋಸ್ಟರ್ ಅಲ್ಲಿ ತುಂಬಾ ವಿವರಗಳಿವೆ. ಮೇಲ್ನೋಟಕ್ಕೆ ಒಂದು ಫನ್ ಪೋಸ್ಟರ್ ಥರ ಕಾಣುತ್ತೆ, ಸೂಕ್ಷ್ಮವಾಗಿ ನೋಡುತ್ತಾ ಹೋದಂತೆ ತೆರೆದುಕೊಳ್ಳುತ್ತೆ. ಸಿನಿಮಾ ಕೂಡ ಇದೇ ಇರುತ್ತದೆ. ಎಲ್ಲ ವರ್ಗಗಳ ಪ್ರೇಕ್ಷಕರಿಗೂ ಒಗ್ಗುವ ಅಂಶಗಳಿವೆ. 2026 ಕ್ಕೆ ಒಂದು ಮಜಾ ಚಿತ್ರಕ್ಕೆ ಪ್ರೇಕ್ಷಕರು ಸಜ್ಜಾಗಲಿ” ಎಂದಿದ್ದಾರೆ ನಿರ್ದೇಶಕ ಶಶಾಂಕ್ ಸೋಗಾಲ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




