ದರ್ಶನ್ಗೆ ಹರಿದ ಚಾದರ: ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ಛೀಮಾರಿ
ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಜೈಲಿನಲ್ಲಿ ಇದ್ದಾರೆ. ಅವರಿಗೆ ಕೆಲವು ಮೂಲ ಸೌಕರ್ಯಗಳನ್ನು ನೀಡಿಲ್ಲ ಎಂದು ಅವರ ಪರ ವಕೀಲರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿ, ನ್ಯಾಯಾಲಯ ಆದೇಶ ಪ್ರಕಟಿಸಿದೆ. ದರ್ಶನ್ ಪರ ವಕೀಲರು ಆ ಬಗ್ಗೆ ಮಾಹಿತಿ ನೀಡಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ದರ್ಶನ್ (Darshan) ಅವರು ತಮಗೆ ಕೆಲವು ಮೂಲ ಸೌಕರ್ಯಗಳು ಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಈ ಕುರಿತಂತೆ ನ್ಯಾಯಾಲಯದಲ್ಲಿ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಇಂದು (ಅಕ್ಟೋಬರ್ 29) ಆದೇಶ ಪ್ರಕಟಿಸಿದೆ. ಆ ಬಗ್ಗೆ ದರ್ಶನ್ ಪರ ವಕೀಲರು ಟಿವಿ9 ಜೊತೆ ಮಾತನಾಡಿ ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ. ಹರಿದ ಚಾದರ ನೀಡಿದ ಜೈಲು ಅಧಿಕಾರಿಗಳಿಗೆ ಕೋರ್ಟ್ ಛೀಮಾರಿ ಹಾಕಿದೆ ಎಂದು ವಕೀಲ ಸುನಿಲ್ (Darshan Lawyer Sunil) ಅವರು ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೆಷನ್ಸ್ ನ್ಯಾಯಾಲಯದಲ್ಲಿ ಮೂರು ಅರ್ಜಿಗಳ ವಿಚಾರಣೆ ನಡೆದಿದೆ. ಅದರ ಬಗ್ಗೆ ಸುನಿಲ್ ಅವರು ವಿವರ ನೀಡಿದ್ದಾರೆ. ‘ದರ್ಶನ್ ಹಾಗೂ ಉಳಿದ ಆರೋಪಿಗಳಿಗೆ ಮೂಲ ಸೌಕರ್ಯಗಳನ್ನು ನೀಡಬೇಕು ಎಂದು ಮಾನ್ಯ ನ್ಯಾಯಾಲಯ ಆದೇಶಿಸಿತ್ತು. ಮ್ಯಾನುಯೆಲ್ ಪ್ರಕಾರ ಏನೆಲ್ಲ ಕೊಡಬೇಕೋ ಅದನ್ನೆಲ್ಲ ಕೊಡಿ ಎಂದು ಆದೇಶಿಸಿತ್ತು. ಆದರೂ ಕೂಡ ಜೈಲಾಧಿಕಾರಿಗಳು ಅದನ್ನು ಪಾಲನೆ ಮಾಡುತ್ತಿಲ್ಲ ಎಂದು ಅವರ ಮೇಲೆ ನ್ಯಾಯಾಂಗ ನಿಂದನೆ ಕೇಸ್ ಮಾಡುವಂತೆ ನ್ಯಾಯಲಯಕ್ಕೆ ಕೋರಿಕೊಂಡಿದ್ದೆವು. ಅವರ ವಿಚಾರವಾಗಿ ವಾದ-ಪ್ರತಿವಾದ ನಡೆದಿತ್ತು. ಇಂದು ಆ ಅರ್ಜಿ ವಿಚಾರಣೆಯ ಆದೇಶ ನೀಡಿದೆ’ ಎಂದು ಸುನಿಲ್ ಅವರು ಹೇಳಿದ್ದಾರೆ.
‘ಜೈಲು ಅಧಿಕಾರಿಗಳು ಇನ್ಮುಂದೆ ಈ ನ್ಯಾಯಾಲಯದಿಂದ ಯಾವುದೇ ಆದೇಶವನ್ನು ನಿರೀಕ್ಷಿಸದೇ ಜೈಲಿನ ಮ್ಯಾನುಯೆಲ್ನಲ್ಲಿ ಇರುವ ಎಲ್ಲ ಸೌಕರ್ಯಗಳನ್ನು ಕೊಡಿ ಎಂದು ಕಠಿಣ ಆದೇಶವನ್ನು ನ್ಯಾಯಾಲಯ ಮಾಡಿದೆ. ಆರೋಪಿಗಳನ್ನು ಇನ್ನೂ ಕೂಡ ಕ್ವಾರೆಂಟೈನ್ ಸೆಲ್ನಲ್ಲಿ ಇಟ್ಟಿದ್ದಾರೆ. ಸಾಧ್ಯವಾದರೆ ಬೇರೆ ಸೆಲ್ಗೆ ಶಿಫ್ಟ್ ಮಾಡಿ ಎಂದು ನ್ಯಾಯಾಲಯ ಆದೇಶ ನೀಡಿದೆ’ ಎಂದಿದ್ದಾರೆ ಸುನಿಲ್.
‘ಈ ವೇಳೆ ಇನ್ನೊಂದು ಅಂಶವನ್ನು ನ್ಯಾಯಾಲಯ ಗಮನಿಸಿದೆ. ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ಛೀಮಾರಿ ಹಾಕಿದೆ. ಆರೋಪಿಗೆ ಹರಿದು ಹೋಗಿರುವ ಚಾದರ ನೀಡಿದ್ದಕ್ಕೆ ಜೈಲಾಧಿಕಾರಿಗಳಿಗೆ ನಾಚಿಕೆ ಆಗಬೇಕು ಎಂದು ಆದೇಶದಲ್ಲಿ ಬರೆದಿದೆ. ಹಾಗಾಗಿ ಈಗಾಗಲೇ ನೀಡಿರುವ ಆದೇಶವನ್ನು ಜೈಲು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗಿದೆ’ ಎಂದು ವಕೀಲ ಸುನಿಲ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್ಗೆ ಗಲ್ಲು ಶಿಕ್ಷೆ ಕೊಡಿ: ಕೋರ್ಟ್ನಲ್ಲಿ ಅಬ್ಬರಿಸಿದ ದರ್ಶನ್ ಪರ ವಕೀಲ
‘ಹಾಸಿಗೆ ದಿಂಬು ಕೊಡಿ ಎಂದು ನಾವು ಈವರೆಗೂ ಕೇಳಿಯೇ ಇಲ್ಲ. ಅದು ಕೇವಲ ಮಾಧ್ಯಮದಲ್ಲಿ ಬರುತ್ತಿದೆ. ನಮ್ಮ ಮನವಿ ಇರುವುದು ಮೂಲ ಸೌಕರ್ಯಗಳನ್ನು ಕೊಡಿ ಎಂದು. ಹಾಸಿಗೆ, ದಿಂಬು, ಪಲ್ಲಂಗ ನಾವು ಕೇಳಿಲ್ಲ. ಬೇರೆ ಆರೋಪಿಗಳಿಗೆ ಏನೆಲ್ಲ ಕೊಡುತ್ತೀರೋ ಅದನ್ನು ಇವರಿಗೂ ಕೊಡಿ ಎಂದು ಮನವಿ ಮಾಡಿದ್ದೆವು. ಅದರ ಪರವಾಗಿ ಆದೇಶ ಆಗಿದೆ. ಕೊಡುವುದಾಗಿ ಜೈಲಾಧಿಕಾರಿಗಳು ಒಪ್ಪಿಕೊಂಡಿದ್ದಾರೆ’ ಎಂದಿದ್ದಾರೆ ಸುನಿಲ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:22 pm, Wed, 29 October 25



