Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಮನೆ ಮುಂದೆ ಫ್ಲೆಕ್ಸ್, ಅಭಿಮಾನಿಗಳಿಗೆ ಕೆಲವು ಮನವಿ

Darshan fans: ನಟ ದರ್ಶನ್ ಹುಟ್ಟುಹಬ್ಬಕ್ಕೆ ಇನ್ನೊಂದು ತಿಂಗಳು ಸಮಯವಿದೆ. ಈ ನಡುವೆ ತಮ್ಮ ಅಭಿಮಾನಿಗಳ ಬಳಿ ಕೆಲವು ಮನವಿ ಮಾಡಿದ್ದಾರೆ. ಏನದು ಮನವಿ? ಇಲ್ಲಿದೆ ಮಾಹಿತಿ

ದರ್ಶನ್ ಮನೆ ಮುಂದೆ ಫ್ಲೆಕ್ಸ್, ಅಭಿಮಾನಿಗಳಿಗೆ ಕೆಲವು ಮನವಿ
Follow us
ಮಂಜುನಾಥ ಸಿ.
|

Updated on:Jan 18, 2024 | 7:41 PM

ದರ್ಶನ್ (Darshan Thoogudeepa) ಅವರಿಗೆ ವರ್ಷಾರಂಭದಲ್ಲಿಯೇ ದೊಡ್ಡ ಗೆಲುವು ‘ಕಾಟೇರ’ ಸಿನಿಮಾ ಮೂಲಕ ದೊರಕಿದೆ. ಸಿನಿಮಾ ಬಿಡುಗಡೆ ಆಗಿದ್ದು 2023ರ ಅಂತ್ಯವಾಗುವ ಎರಡು ದಿನ ಮುಂಚೆಯಾದರೂ ದೊಡ್ಡ ಗೆಲುವು ಲಭಿಸಿದ್ದು ಜನವರಿಯಲ್ಲಿಯೇ. ಇದೀಗ ಇನ್ನೊಂದು ದೊಡ್ಡ ಇವೆಂಟ್​ಗೆ ದರ್ಶನ್ ಹಾಗೂ ಅವರ ಅಭಿಮಾನಿಗಳು ತಯಾರಾಗುತ್ತಿದ್ದಾರೆ. ಅದುವೇ ದರ್ಶನ್​ರ ಹುಟ್ಟುಹಬ್ಬ. ದರ್ಶನ್ ಅವರ ಹುಟ್ಟುಹಬ್ಬಕ್ಕೆ ಇನ್ನೂ ಒಂದು ತಿಂಗಳಿರುವಾಗಲೇ ದರ್ಶನ್ ಮನೆಯ ಮುಂದೆ ಫ್ಲೆಕ್ಸ್​ ಒಂದು ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಕೆಲ ಮನವಿಯನ್ನು ದರ್ಶನ್ ಮಾಡಿದ್ದಾರೆ.

ದರ್ಶನ್​ರ ರಾಜರಾಜೇಶ್ವರಿ ನಗರ ಮನೆಯ ಮುಂದೆ ಫ್ಲೆಕ್ಸ್​ ಒಂದನ್ನು ಹಾಕಲಾಗಿದ್ದು, ಅದರಲ್ಲಿ ಅಭಿಮಾನಿಗಳಿಗೆ ಕೆಲವು ಮನವಿಗಳನ್ನು ದರ್ಶನ್ ಮಾಡಿದ್ದಾರೆ. ಈ ಮನವಿಗಳು ದರ್ಶನ್​ರ ಹುಟ್ಟುಹಬ್ಬಕ್ಕೆ ಸಂಬಂಧಿಸಿದ್ದಾಗಿವೆ. ದರ್ಶನ್​ರ ಹುಟ್ಟುಹಬ್ಬ ಫೆಬ್ರವರಿ 16 ರಂದು ಇದ್ದು, ಅಂದಿಗಾಗಿ ಈಗಿನಿಂದಲೇ ಅಭಿಮಾನಿಗಳು ತಯಾರಿ ಆರಂಭಿಸಿದ್ದಾರೆ.

‘ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಈ ವರ್ಷವೂ ಅದೇ ಹಣದಲ್ಲಿ ಅಕ್ಕಿ, ಬೇಳೆ, ಸಕ್ಕರೆ ಇತರೆ ದವಸ ಧಾನ್ಯಗಳನ್ನು ದಾನ ನೀಡಿ. ಅದನ್ನು ಒಗ್ಗೂಡಿಸಿ ಅವಶ್ಯಕತೆ ಇರುವ ಅನಾಥಾಶ್ರಮಗಳಿಗೆ ತಲುಪಿಸುವ ಜವಾಬ್ದಾರಿ ನನ್ನದು. ಈ ಸಂಭ್ರಮಾಚರಣೆಯಲ್ಲಿ ನಮ್ಮ ಅಕ್ಕ-ಪಕ್ಕದ ಮನೆಯವರಿಗೆ ತೊಂದರೆ ಆಗದಂತೆ ವರ್ತಿಸಿ. ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂಕುಂಡಗಳನ್ನು ಬೀಳಿಸುವುದು ಅವರ ಸ್ವತ್ತುಗಳಿಗೆ ಹಾನಿ ಮಾಡುವಂಥಹಾ ವರ್ತನೆಗಳು ಬೇಡ. ನನ್ನ ಮೇಲೆ ಇಷ್ಟೆಲ್ಲ ಪ್ರೀತಿ, ಅಭಿಮಾನ ಇಟ್ಟಿರುವ ನೀವು ನನ್ನ ಕೋರಿಕೆಯನ್ನು ನಡೆಸಿಕೊಡುತ್ತೀರಿ ಎಂದು ನಂಬಿದ್ದೇನೆ. ಹಾಗೂ ಸಂಘದ ಕಾರ್ಯಕರ್ತರು ಹಾಗೂ ಪೊಲೀಸರಿಗೆ ಸಹಕರಿಸಬೇಕೆಂದು ಮನವಿ ಮಾಡುತ್ತೇನೆ’ ಎಂದು ದರ್ಶನ್ ಮನವಿ ಮಾಡಿದ್ದಾರೆ. ದರ್ಶನ್​ರ ಈ ಮನವಿಯನ್ನು ಮುದ್ರಿಸಿ ಫ್ಲೆಕ್ಸ್​ ಮಾದರಿಯಲ್ಲಿ ದರ್ಶನ್​ರ ಮನೆ ಮುಂದೆ ಹಾಕಲಾಗಿದೆ.

ಇದನ್ನೂ ಓದಿ:‘ದರ್ಶನ್ ನಟನೆಯ ಕಾಟೇರ ನೋಡಿದ್ರಾ’; ಅಭಿಮಾನಿ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರ ಏನು?

ದರ್ಶನ್ ಸಾಮಾನ್ಯವಾಗಿ ತಮ್ಮ ಮನೆಯ ಬಳಿಯೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ತಮ್ಮ ಹುಟ್ಟುಹಬ್ಬಕ್ಕೆ ಕೇಕ್, ಹಾರಗಳ ಬದಲಿಗೆ ಅಕ್ಕಿ, ಬೇಳೆ ಇನ್ನಿತರೆಗಳನ್ನು ದಾನ ನೀಡುವಂತೆ ದರ್ಶನ್ ಈ ಹಿಂದೆ ಮನವಿ ಮಾಡಿದ್ದರು. ಹೀಗೆ ಬಂದ ದೇಣಿಗೆಯನ್ನು ಅಗತ್ಯ ಇರುವ ಅನಾಥಾಶ್ರಮಗಳಿಗೆ ತಲುಪಿಸುವ ವ್ಯವಸ್ಥೆಯನ್ನು ದರ್ಶನ್ ಮಾಡುತ್ತಾರೆ.

ದರ್ಶನ್​ರ ಹುಟ್ಟುಹಬ್ಬ ಆಚರಣೆ ವೇಳೆ ಅವರ ನೆರೆ-ಹೊರೆಯವರಿಗೆ ಸಮಸ್ಯೆ ಆಗುವುದು ಮಾಮೂಲಾಗಿಬಿಟ್ಟಿದೆ. ಈ ಬಗ್ಗೆ ಹಿಂದೆ ದೂರುಗಳು ಸಹ ಹೋಗಿದ್ದವು. ಇದೇ ಕಾರಣಕ್ಕೆ ದರ್ಶನ್, ತಮ್ಮ ಅಭಿಮಾನಿಗಳಲ್ಲಿ ಕೆಲವು ವಿಶೇಷ ಮನವಿಗಳನ್ನು ಮಾಡಿದ್ದಾರೆ.

ಇತ್ತೀಚೆಗಷ್ಟೆ ನಟ ಯಶ್​ರ ಹುಟ್ಟುಹಬ್ಬಕ್ಕೆಂದು ಫ್ಲೆಕ್ಸ್ ಕಟ್ಟಲು ಹೋದ ಮೂವರು ಅಭಿಮಾನಿಗಳು ನಿಧನ ಹೊಂದಿದ್ದರು. ಇದರಿಂದಾಗಿ ಇತರೆ ನಟರು ಸಹ ತಮ್ಮ ಅಭಿಮಾನಿಗಳಿಗೆ ಜಾಗೃತೆಯಿಂದ ಇರುವಂತೆ, ವರ್ತಿಸುವಂತೆ ಮನವಿ ಮಾಡುತ್ತಿದ್ದಾರೆ. ಇದೀಗ ದುನಿಯಾ ವಿಜಯ್ ಸಹ ಜನವರಿ 20ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅವರೂ ಸಹ ಅಭಿಮಾನಿಗಳಲ್ಲಿ ಕೆಲವು ಮನವಿಗಳನ್ನು ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:10 pm, Thu, 18 January 24