ಪರಪ್ಪನ ಅಗ್ರಹಾರದಲ್ಲಿ ಇರುವ ದರ್ಶನ್ ಅನೇಕ ನಿಯಮಗಳನ್ನು ಉಲ್ಲಂಘನೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಜಾಮೀನು ಪಡೆದು ಹೊರಗಿರುವ ರೌಡಿಶೀಟರ್ ಸತ್ಯ ಜೊತೆ ದರ್ಶನ್ ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದರು. ಆ ವಿಡಿಯೋ ಎಲ್ಲ ಕಡೆಗಳಲ್ಲಿ ವೈರಲ್ ಆಗಿತ್ತು. ವಿಡಿಯೋ ಕಾಲ್ ವಿಚಾರ ಬಹಿರಂಗ ಆದ ಕೂಡಲೇ ಪೊಲೀಸರು ಕ್ರಮ ಕೈಕೊಂಡಿದ್ದಾರೆ. ದರ್ಶನ್ ಜತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ ಸತ್ಯನನ್ನು ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆ ಪೊಲೀಸರು ಮಂಡ್ಯದಲ್ಲಿ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ.
ವಿಚಾರಣಾಧೀನ ಖೈದಿ ಆಗಿರುವ ದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಿನೊಳಗೆ ಅಕ್ರಮವಾಗಿ ಅನೇಕ ಸೌಕರ್ಯಗಳನ್ನು ಒದಗಿಸಲಾಗಿದೆ. ರೌಡಿಗಳ ಜೊತೆ ಸಂಪರ್ಕ, ಗಾರ್ಡನ್ ಏರಿಯಾದಲ್ಲಿ ಹರಟೆ ಹೊಡೆಯುವ ಅವಕಾಶ, ಸೀಗರೇಟ್, ಕುರ್ಚಿ ಸೇರಿದಂತೆ ವಿಐಪಿ ಟ್ರೀಟ್ಮೆಂಟ್ ಸಿಕ್ಕಿದೆ. ಅದರ ಜೊತೆಗೆ ವಿಡಿಯೋ ಕಾಲ್ ಕೂಡ ಮಾಡಿರುವುದು ಬಹಿರಂಗ ಆಗಿದ್ದು, ದೊಡ್ಡ ಸಂಚಲನ ಸೃಷ್ಟಿ ಮಾಡಿದೆ.
ವೈರಲ್ ಆದ ದರ್ಶನ್ ವಿಡಿಯೋ ಕಾಲ್ ತುಣುಕಿನಲ್ಲಿ ಇರುವವನು ಬ್ಯಾಡರಹಳ್ಳಿ ರೌಡಿಶೀಟರ್ ಜಾನಿ ಅಲಿಯಾಸ್ ಜನಾರ್ದನ್ನ ಮಗ ಸತ್ಯ. ಆತನಿಗೆ ಜೈಲಿನಿಂದ ವಿಡಿಯೋ ಕಾಲ್ ಮಾಡಿ ದರ್ಶನ್ರನ್ನು ತೋರಿಸಿದವನು ಕೂಡ ಇನ್ನೋರ್ವ ರೌಡಿಶೀಟರ್ ಮಾರ್ಕೆಟ್ ಧರ್ಮ. ಇತ್ತೀಚೆಗೆ ಸತ್ಯ ಕೂಡ ಜೈಲಿಗೆ ಹೋಗಿಬಂದಿದ್ದ. ಕೆಎಲ್ಇ ಕಾಲೇಜು ವಿದ್ಯಾರ್ಥಿಗಳಿಗೆ ಉಲ್ಟಾ ಮಚ್ಚಿನಲ್ಲಿ ಆತ ಹೊಡೆದಿದ್ದ. ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಕೇಸ್ ದಾಖಲಾಗಿತ್ತು. ಜೈಲಿಗೆ ಹೋಗಿದ್ದ ಸತ್ಯ ಜಾಮೀನನ ಮೇಲೆ ಹೊರಗೆ ಬಂದಿದ್ದ. ಹೊರಗೆ ಬಂದವನು ಮಾರ್ಕೆಟ್ ಧರ್ಮನಿಗೆ ವಿಡಿಯೋ ಕಾಲ್ ಮಾಡಿದ್ದ. ‘ದರ್ಶನ್ ಇರುವುದು ನಮ್ಮ ಪಕ್ಕದ ಸೆಲ್ನಲ್ಲಿ. ನಿನಗೂ ತೋರಿಸ್ತಿನಿ’ ಎಂದು ಸತ್ಯನಿಗೆ ಹೇಳಿದ್ದ ಮಾರ್ಕೆಟ್ ಧರ್ಮ, ದರ್ಶನ್ ಕೈಯಲ್ಲಿ ಹಾಯ್ ಹೇಳಿಸಿದ್ದ. ಅದೇ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ.
ಇದನ್ನೂ ಓದಿ: ಜೈಲಿನಲ್ಲಿ ಇರುವಾಗಲೇ ನಟ ದರ್ಶನ್ ಮೇಲೆ ಮೂರು ಹೊಸ ಎಫ್ಐಆರ್ ದಾಖಲು
ದರ್ಶನ್ಗೆ ಇರುವ ಅಭಿಮಾನಿ ಬಳಗ ದೊಡ್ಡದು. ದರ್ಶನ್ ಜೊತೆ ವಿಡಿಯೋ ಕಾಲ್ನಲ್ಲಿ ಮಾತನಾಡಿದ ಕ್ಲಿಪಿಂಗ್ ಇಟ್ಟುಕೊಂಡ ಸತ್ಯ ಕಲಾಸಿಪಾಳ್ಯದ ಒಂದಷ್ಟು ಹುಡುಗರಿಗೆ ಕಳಿಸಿದ್ದ. ಅಲ್ಲದೇ ತನ್ನ ಏರಿಯಾದಲ್ಲಿ ಬಿಲ್ಡಪ್ ಕೊಡಲು ಈ ವಿಡಿಯೋ ತುಣುಕನ್ನು ಬಳಸಿಕೊಂಡಿದ್ದ. ಸಹಚರರ ವಾಟ್ಸಪ್ ಸ್ಟೇಟಸ್ನಲ್ಲೂ ಅದನ್ನು ಅಪ್ಲೋಡ್ ಮಾಡಲಾಗಿತ್ತು. ಆದ್ದರಿಂದ ದರ್ಶನ್ ಜೊತೆಗಿನ ಆತನ ವಿಡಿಯೋ ಕಾಲ್ ಎಲ್ಲ ಕಡೆಗಳಲ್ಲಿ ವೈರಲ್ ಆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.