ಸದ್ದಿಲ್ಲದೆ ಆರಂಭ ಆಯ್ತು ‘ಡೆವಿಲ್’ ಸಿನಿಮಾ ಶೂಟ್; ದರ್ಶನ್ ಎಂಟ್ರಿಗೂ ಸಮಯ ನಿಗದಿ
ದರ್ಶನ್ ಅವರ ‘ಡೆವಿಲ್’ ಸಿನಿಮಾದ ಚಿತ್ರೀಕರಣ ಸ್ಥಗಿತಗೊಂಡಿತ್ತು. ಈಗ ಅದು ಮತ್ತೆ ಆರಂಭವಾಗಿದೆ. ನಟನ ಆರೋಗ್ಯದ ಸಮಸ್ಯೆಯಿಂದಾಗಿ ಆಕ್ಷನ್ ದೃಶ್ಯಗಳನ್ನು ಶೂಟ್ ಮಾಡದೆ, ಮಾತಿನ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಬೆಂಗಳೂರು, ಮೈಸೂರು, ಹೈದರಾಬಾದ್ ಮತ್ತು ರಾಜಸ್ಥಾನದಲ್ಲಿ ಚಿತ್ರೀಕರಣ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನಟ ದರ್ಶನ್ ಅವರ ನಟನೆಯ ‘ಡೆವಿಲ್’ ಸಿನಿಮಾ 2024ರಲ್ಲೇ ರಿಲೀಸ್ ಆಗುತ್ತಿತ್ತು. ಆದರೆ, ಒಂದು ಹಂತದ ಶೂಟಿಂಗ್ ಪೂರ್ಣಗೊಳಿಸಿದ ತಂಡ ಸುಮ್ಮನೆ ಕೂರಬೇಕಾಯ್ತು. ಇದಕ್ಕೆ ಕಾರಣ ಆಗಿದ್ದು ರೇಣುಕಾಸ್ವಾಮಿ ಕೊಲೆ ಕೇಸ್. ಈ ಪ್ರಕರಣದಲ್ಲಿ ದರ್ಶನ್ ಅವರು ಜೈಲು ಸೇರಿದ್ದರಿಂದ ಚಿತ್ರದ ಶೂಟಿಂಗ್ ಸಂಪೂರ್ಣವಾಗಿ ನಿಂತೇ ಹೋಗಿತ್ತು. ಈಗ ಪ್ರಕಾಶ್ ವೀರ್ ನಿರ್ದೇಶನದ ಈ ಸಿನಿಮಾದ ಶೂಟಿಂಗ್ ಮತ್ತೆ ಆರಂಭ ಆಗಿದೆ. ಈ ವಿಚಾರ ಕೇಳಿ ದರ್ಶನ್ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
‘ಶ್ರೀ ಜೈ ಮಾತ ಕಂಬೈನ್ಸ್’ ಬ್ಯಾನರ್ ಅಡಿಯಲ್ಲಿ ‘ಡೆವಿಲ್’ ಸಿನಿಮಾ ರೆಡಿ ಆಗುತ್ತಿದೆ. ಈ ಚಿತ್ರಕ್ಕೆ ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್ ಈ ಚಿತ್ರಕ್ಕೆ ಹೀರೋ. ಚಿತ್ರದ ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಿದೆ. ಸಂಪೂರ್ಣ ಸಿದ್ಧತೆ ಮಾಡಿಕೊಂಡು ಶೂಟ್ ಆರಂಭಿಸಲಾಗಿದೆ.
ದರ್ಶನ್ ಭಾಗಿ ಯಾವಾಗ?
ನಟ ದರ್ಶನ್ ಅವರಿಗೆ ಬೆನ್ನು ನೋವು ಅತಿಯಾಗಿ ಕಾಡುತ್ತಿದೆ. ಆದಾಗ್ಯೂ ದರ್ಶನ್ ಅವರು ಎರಡನೇ ಹಂತದ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ಮುಂದಿನ ವಾರದಿಂದ ಚಿತ್ರೀಕರಣದಲ್ಲಿ ದರ್ಶನ್ ಅವರು ಭಾಗಿಯಾಗಲಿದ್ದಾರೆ. ಅವರ ಆರೋಗ್ಯವನ್ನು ಪರಿಗಣಿಸಿ ಯಾವುದೇ ಆ್ಯಕ್ಷನ್ ದೃಶ್ಯಗಳನ್ನು ಇಲ್ಲಿ ಶೂಟ್ ಮಾಡುತ್ತಿಲ್ಲ. ಕೇವಲ ಮಾತಿನ ಭಾಗದ ಚಿತ್ರೀಕರಣ ಮಾತ್ರ ನಡೆಯಲಿದೆ.
ಸಾಹಸ ದೃಶ್ಯ ಮಾಡುವಂತಿಲ್ಲ
ದರ್ಶನ್ ಅವರಿಗೆ ಎದ್ದು ಓಡಾಡೋದು ಕಷ್ಟವಾಗಿದೆ. ಹೀಗಾಗಿ, ಅವರಿಗೆ ಫಿಸಿಯೋ ಥೆರೆಪಿ ಮಾಡಿಸಲಾಗುತ್ತಿದೆ. ಸದ್ಯದ ಮಟ್ಟಿಗೆ ಆ್ಯಕ್ಷನ್ ದೃಶ್ಯ ಮಾಡಬಾರದು ಎಂದು ವೈದ್ಯರು ಸೂಚನೆ ನೀಡಿದ್ದಾರೆ. ‘ಸಾಹಸ ಸನ್ನಿವೇಶಗಳ ಚಿತ್ರೀಕರಣವಾಗಲಿ ಅಥವಾ ಬೇರೆ ಯಾವುದೇ ರಿಸ್ಕ್ ಇರುವ ಸನ್ನಿವೇಶಗಳ ಚಿತ್ರೀಕರಣ ಈಗ ಮಾಡುವುದಿಲ್ಲ’ ಎಂದು ನಿರ್ದೇಶಕ ಪ್ರಕಾಶ್ ವೀರ್ ತಿಳಿಸಿದ್ದಾರೆ.
ಹೊರ ರಾಜ್ಯದಲ್ಲೂ ಶೂಟ್
ಎರಡನೇ ಹಂತದ ಶೂಟ್ ಬೆಂಗಳೂರಿನ ಜೊತೆಗೆ ಮೈಸೂರು, ಹೈದರಾಬಾದ್ ಹಾಗೂ ರಾಜಸ್ಥಾನದಲ್ಲಿ ನಡೆಯಲಿದೆ. ದರ್ಶನ್ ಕೂಡ ಈ ಭಾಗಕ್ಕೆ ತೆರಳಲಿದ್ದಾರೆ. ದೇಶದ ಯಾವುದೇ ಭಾಗಕ್ಕೆ ಬೇಕಿದ್ದರೂ ಅವರು ಈಗ ತೆರಳಬಹುದಾಗಿದೆ.
ಇದನ್ನೂ ಓದಿ: ದರ್ಶನ್ಗೆ ಅಭಿಮಾನಿಗಳಿಂದಲೇ ಹೆಚ್ಚುತ್ತಿದೆ ಸಮಸ್ಯೆ; ಫ್ಯಾನ್ಸ್ಗೆ ಅರ್ಥ ಆಗೋದು ಯಾವಾಗ?
ತಂಡದ ಬಗ್ಗೆ
ದರ್ಶನ್ಗೆ ಜೊತೆಯಾಗಿ ನಾಯಕಿ ರಚನಾ ರೈ ನಟಿಸುತ್ತಿದ್ದಾರೆ. ತುಳಸಿ, ಅಚ್ಯುತಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸ ಪ್ರಭು, ಶೋಭ್ರಾಜ್ ಮುಂತಾದ ಕಲಾವಿದರು ಎರಡನೇ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಸುಧಾಕರ್.ಎಸ್.ರಾಜ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ರಾಮ್-ಲಕ್ಷ್ಮಣ್ ಸಾಹಸ ನಿರ್ದೇಶನ ಚಿತ್ರಕ್ಕೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.