ಹಾಡು-ಡ್ಯಾನ್ಸ್ ಮೂಲಕ ‘ಧಮಾಕಾ’ ಮಾಡ್ತಿದ್ದಾರೆ ‘ವಿಕ್ರಾಂತ್ ರೋಣ’ ನಟ ಸಿದ್ದು ಮೂಲಿಮನಿ
Siddu Moolimani: ‘ಧಮಾಕಾ’ ಚಿತ್ರದ ಹೊಸ ಹಾಡಿನಲ್ಲಿ ಸಿದ್ದು ಮೂಲಿಮನಿ ಮತ್ತು ಪ್ರಿಯಾ ಜೆ. ಆಚಾರ್ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ. ಈ ಹಾಡಿನಿಂದ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.
ಇತ್ತೀಚೆಗೆ ಬಿಡುಗಡೆ ಆಗಿ ಸಖತ್ ಸದ್ದು ಮಾಡಿದ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಹಲವು ಪಾತ್ರಗಳು ಹೈಲೈಟ್ ಆಗಿವೆ. ಈ ಚಿತ್ರದಲ್ಲಿ ಹಾಸ್ಯ ನಟ ಸಿದ್ದು ಮೂಲಿಮನಿ (Siddu Moolimani) ಅವರು ಗಮನ ಸೆಳೆದಿದ್ದಾರೆ. ಕಾಮಿಡಿ ಮಾತ್ರವಲ್ಲದೇ ಅವರು ಲವರ್ ಬಾಯ್ ರೀತಿಯೂ ಕಾಣಿಸಿಕೊಳ್ಳಬಲ್ಲರು, ಭರ್ಜರಿಯಾಗಿ ಡ್ಯಾನ್ಸ್ ಮಾಡಬಲ್ಲರು ಎಂಬುದಕ್ಕೆ ಈಗ ಸಾಕ್ಷಿ ಸಿಕ್ಕಿದೆ. ಹೌದು, ‘ಧಮಾಕಾ’ ಸಿನಿಮಾದಲ್ಲಿ (Dhamaka Movie) ಸಿದ್ದು ಮೂಲಿಮನಿ ನಟಿಸಿದ್ದಾರೆ. ಅವರಿಗೆ ಪ್ರಿಯಾ ಜೆ. ಆಚಾರ್ (Priya J. Achar) ಜೋಡಿ ಆಗಿದ್ದಾರೆ. ಅವರಿಬ್ಬರು ಕಾಣಿಸಿಕೊಂಡಿರುವ ‘ನಾನು ಹೋಗೋಕೂ ಮೊದ್ಲು..’ ಸಾಂಗ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಎಸ್‌ಆರ್ ಮೀಡಿಯಾ ಪ್ರೊಡಕ್ಷನ್ಸ್ ಮತ್ತು ನಂದಿ ಎಂಟರ್‌ಟೇನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಲಕ್ಷ್ಮೀ ರಮೇಶ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಜನಪ್ರಿಯ ಹಾಸ್ಯನಟ ಶಿವರಾಜ್ ಕೆ.ಆರ್. ಪೇಟೆ ಹೀರೋ. ಸಿದ್ದು ಮೂಲಿಮನಿ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಅವರಿಗಾಗಿಯೇ ಈ ಚಿತ್ರದಲ್ಲೊಂದು ಸಾಂಗ್ ಇರುವುದು ವಿಶೇಷ. ಈ ಹಾಡಿಗೆ ನಿರ್ದೇಶಕ ಲಕ್ಷೀ ರಮೇಶ್ ಸಾಹಿತ್ಯ ಬರೆದಿದ್ದಾರೆ.
‘ನಾನು ಹೋಗೋಕೂ ಮೊದ್ಲು..’ ಹಾಡಿಗೆ ಕಂಚಿನ ಕಂಠದ ಗಾಯಕ ವಿಜಯ್ ಪ್ರಕಾಶ್ ಹಾಗೂ ಮಾನಸ ಹೊಳ್ಳ ಧ್ವನಿ ನೀಡಿದ್ದಾರೆ. ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನದಲ್ಲಿ ಈ ಗೀತೆ ಮೂಡಿಬಂದಿದೆ. ಲಕ್ಷ್ಮೀ ರಮೇಶ್ ಅವರ ಸಾಹಿತ್ಯ ಕೂಡ ಕ್ಯಾಚಿ ಆಗಿದೆ. ಯೂಟ್ಯೂಬ್ನಲ್ಲಿ ಈ ಹಾಡು ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಆ ಮೂಲಕ ‘ಧಮಾಕಾ’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚುವಂತಾಗಿದೆ.
ನಿರ್ದೇಶಕ ಲಕ್ಷ್ಮೀ ರಮೇಶ್ ಅವರಿಗೆ ಇದು ಮೊದಲ ಸಿನಿಮಾ. ಶಿವರಾಜ್ ಕೆ.ಆರ್. ಪೇಟೆ ಅವರಿಗೆ ಜೊತೆಯಾಗಿ ‘ಕಾಮಿಡಿ ಕಿಲಾಡಿಗಳು’ ಶೋ ಮೂಲಕವೇ ಗುರುತಿಸಿಕೊಂಡ ನಯನಾ ನಟಿಸುತ್ತಿದ್ದಾರೆ. ಸಿದ್ದು ಮೂಲಿಮನಿ, ಪ್ರಿಯಾ ಜೆ. ಆಚಾರ್ ಮಾತ್ರವಲ್ಲದೇ ಪ್ರಕಾಶ್ ತುಮ್ಮಿನಾಡ್, ಮೋಹನ್ ಜುನೇಜಾ, ಕೋಟೆ ಪ್ರಭಾಕರ್, ಮೈಕೋ ನಾಗರಾಜ್, ಅರುಣಾ ಬಾಲರಾಜ್ ಮುಂತಾದವರು ಅಭಿನಯಿಸಿದ್ದಾರೆ.
ನಟ ಸಿದ್ದು ಮೂಲಿಮನಿ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮದೇ ರೀತಿಯಲ್ಲಿ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ‘ಧಮಾಕಾ’ ಮೂಲಕ ಅವರಿಗೆ ಇನ್ನಷ್ಟು ಜನಪ್ರಿಯತೆ ಸಿಗುತ್ತಿದೆ. ಸದ್ಯ ‘ನಾನು ಹೋಗೋಕೂ ಮೊದ್ಲು..’ ಹಾಡಿನ ಮೂಲಕ ಅವರು ಅಭಿಮಾನಿಗಳನ್ನು ಅವರು ರಂಜಿಸುತ್ತಿದ್ದಾರೆ.