ಬರಲಿದೆ ‘ಯುಕೆ ಲವ್ ಸ್ಟೋರಿ’; ಇದು ಉತ್ತರ ಕರ್ನಾಟಕದ ಪ್ರೇಮ್ ಕಹಾನಿ
ಚಂದನವನದಲ್ಲಿ ಉತ್ತರ ಕರ್ನಾಟಕದ ಕಥೆಗಳು ಕಡಿಮೆ ಎಂಬ ಮಾತಿದೆ. ಈಗ ‘ಯುಕೆ ಲವ್ ಸ್ಟೋರಿ’ ಸಿನಿಮಾ ತಂಡದವರು ಉತ್ತರ ಕರ್ನಾಟಕ ಭಾಗದ ಕಥೆ ಹೇಳಲು ಸಜ್ಜಾಗಿದ್ದಾರೆ. ಧರ್ಮ ಕೀರ್ತಿರಾಜ್ ಅಭಿನಯದ ಈ ಸಿನಿಮಾಗೆ ಇತ್ತೀಚೆಗೆ ಮುಹೂರ್ತ ಮಾಡಲಾಗಿದೆ. ಈ ವೇಳೆ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡದವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕದ ಎಲ್ಲ ಜಿಲ್ಲೆ, ಪ್ರದೇಶಗಳ ಕಥೆಗಳು ದೊಡ್ಡ ಪರದೆಗೆ ಬರಬೇಕು ಎಂಬುದು ಅನೇಕರ ಬಯಕೆ. ಉತ್ತರ ಕರ್ನಾಟಕದಲ್ಲಿ (North Karnataka) ಹಲವು ಕಹಾನಿಗಳಿವೆ. ಆದರೆ ಆ ಭಾಗದ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದು ವಿರಳ. ಅಂಥ ಕೊರತೆಯನ್ನು ನೀಗಿಸುವ ಪ್ರಯತ್ನದ ರೀತಿಯಲ್ಲಿ ಒಂದು ಹೊಸ ಸಿನಿಮಾ ಸೆಟ್ಟೇರಿದೆ. ‘ಯುಕೆ ಲವ್ ಸ್ಟೋರಿ’ (UK Love Story) ಎಂಬುದು ಈ ಸಿನಿಮಾದ ಶೀರ್ಷಿಕೆ. ಈ ಸಿನಿಮಾದ ಮುಹೂರ್ತ ಕಾರ್ಯಕ್ರಮವು ಇತ್ತೀಚೆಗೆ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಸಂಭ್ರಮದಿಂದ ನಡೆಯಿತು. ಈ ಸಿನಿಮಾದಲ್ಲಿ ನಟ ಧರ್ಮ ಕೀರ್ತಿರಾಜ್ (Dharma Keerthiraj) ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆಯೇ ಗಮನ ಸೆಳೆಯುಂತಿದೆ.
‘ಯುಕೆ ಲವ್ ಸ್ಟೋರಿ’ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಸ್ಯಾಂಡಲ್ವುಡ್ನ ಖ್ಯಾತ ನಟ ಅಜಯ್ ರಾವ್ ಅವರು ಹಾಜರಾಗಿದ್ದರು. ಸಿನಿಮಾದ ಪ್ರಥಮ ದೃಶ್ಯಕ್ಕೆ ಅವರು ಕ್ಲ್ಯಾಪ್ ಮಾಡಿ ಶುಭ ಕೋರಿದರು. ಈ ಚಿತ್ರಕ್ಕೆ ವಿಜಯ್ ಅವರು ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಎರಡನೇ ಸಿನಿಮಾ. ‘ರೋಮನಾಸ್ ಕ್ರಿಯೇಶನ್ಸ್’ ಬ್ಯಾನರ್ ಮೂಲಕ ಎಸ್.ಜೆ. ಸುರೇಶ್ ಆರೋಕ್ಯ ರಾಜ್ ನಿರ್ಮಾಣ ಅವರು ಮಾಡುತ್ತಿದ್ದಾರೆ. ಅದರ ಜೊತೆಗೆ ಒಂದು ಪಾತ್ರವನ್ನೂ ಅವರು ನಿಭಾಯಿಸುತ್ತಿದ್ದಾರೆ.
ಪಾತ್ರವರ್ಗ: ಈ ಸಿನಿಮಾದಲ್ಲಿ ಒರಟು ಹಳ್ಳಿ ಯುವಕನಾಗಿ ಧರ್ಮ ಕೀರ್ತಿರಾಜ್ ಅವರು ನಟಿಸಲಿದ್ದಾರೆ. ಅವರಿಗೆ ವಿಭಿನ್ನ ಲುಕ್ ಇರಲಿದೆ. ಮುಂದಿನ ದಿನಗಳಲ್ಲಿ ಆ ಲುಕ್ ರಿವೀಲ್ ಆಗಲಿದೆ. 11 ಅಣ್ಣಂದಿರ ಮುದ್ದಿನ ತಂಗಿಯ ಪಾತ್ರದಲ್ಲಿ ಕಾವ್ಯಾ ಅವರು ನಟಿಸಲಿದ್ದಾರೆ. ಈ ಸಿನಿಮಾಗೆ ಅವರೇ ನಾಯಕಿ. ಸಾಧುಕೋಕಿಲ, ಗೋವಿಂದೇ ಗೌಡ, ಬಲರಾಜ ವಾಡಿ, ರವಿ ರೆಡ್ಡಿ, ಮೂರ್ತಿ ಗಿರಿನಗರ, ಮಂಡ್ಯ ಸಿದ್ದು, ಮಂಜು ಹೊನ್ನವಳ್ಳಿ ಸೇರಿದಂತೆ ಹಲವು ಕಲಾವಿದರು ‘ಯುಕೆ ಲವ್ ಸ್ಟೋರಿ’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇದನ್ನೂ ಓದಿ: ‘ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾದಲ್ಲಿದೆ ನೈಜ ಘಟನೆ; ಶೀಘ್ರದಲ್ಲೇ ರಿಲೀಸ್
ಸಿನಿಮಾದ ಬಗ್ಗೆ ನಿರ್ದೇಶಕ ವಿಜಯ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಯುಕೆ ಅಂದರೆ ಉತ್ತರ ಕರ್ನಾಟಕ. ಆ ಭಾಗದ ಒಂದು ರಗಡ್ ಪ್ರೇಮಕಥೆಯನ್ನು ಅವರು ಹೇಳಲಿದ್ದಾರೆ. ಕಲಬುರಗಿ ಜಿಲ್ಲೆಯ ಒಂದು ಪುಟ್ಟ ಹಳ್ಳಿಗೆ ಭೇಟಿ ನೀಡಿದ ಚಿತ್ರತಂಡದವರು ಅಲ್ಲಿನ ಮಂದಿಯ ಭಾಷೆ ಮತ್ತು ಬದುಕಿನ ಬಗ್ಗೆ ತಿಳಿದುಕೊಂಡು ಬಂದಿದ್ದಾರೆ. 6 ತಿಂಗಳ ಕಾಲ ಅಲ್ಲಿಯೇ ಇದ್ದುಕೊಂಡು ಚಿತ್ರಕಥೆ ಬರೆದಿರುವುದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ.
ವಿ. ಪಳನಿವೇಲು ಅವರ ಛಾಯಾಗ್ರಹಣ, ಸಿ.ಕೆ. ಕುಮಾರ್ ಅವರ ಸಂಕಲನ, ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ, ಶಿವಶಕ್ತಿ ಷಣ್ಮುಗಂ ಅವರ ಕೊರಿಯೋಗ್ರಫಿಯಲ್ಲಿ ಈ ಸಿನಿಮಾ ಸಿದ್ಧವಾಗಲಿದೆ. ಕಲಬುರಗಿ, ಯಾದಗಿರಿ, ಹುಬ್ಬಳ್ಳಿ, ಬೆಳಗಾವಿ, ಕೊಳ್ಳೆಗಾಲ ಮುಂತಾದೆಡೆ ಶೂಟಿಂಗ್ ನಡೆಯಲಿದೆ. ಈ ಸಿನಿಮಾಗೆ ‘ಐ ಲವ್ ಯು’ ಖ್ಯಾತಿಯ ಕಿರಣ್ ತೋಟಂಬೈಲ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಂತೋಷ್ ನಾಯಕ್ ಹಾಗೂ ಹನುರಾಜ್ ಮಧುಗಿರಿ ಅವರ ಸಾಹಿತ್ಯದಲ್ಲಿ ಹಾಡುಗಳು ಮೂಡಿಬರಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:34 pm, Thu, 15 February 24