‘ಜಗ್ಗು ದಾದ’ ನಿರ್ದೇಶಕನಿಗೆ 3 ಕೋಟಿ ವಂಚನೆ ಮಾಡಿದ ಆರೋಪ; ಧ್ರುವ ಸರ್ಜಾ ವಿರುದ್ಧ ಎಫ್ಐಆರ್
ನಟ ಧ್ರುವ ಸರ್ಜಾ ಅವರ ವಿರುದ್ಧ 3 ಕೋಟಿ ರೂಪಾಯಿಗಳ ವಂಚನೆ ಆರೋಪ ಕೇಳಿಬಂದಿದೆ. ‘ಜಗ್ಗು ದಾದ’ ಚಿತ್ರದ ನಿರ್ಮಾಪಕ ರಾಘವೇಂದ್ರ ಹೆಗ್ಡೆ ಅವರು ಮುಂಬೈನಲ್ಲಿ ದೂರು ದಾಖಲಿಸಿದ್ದಾರೆ. 2019ರಲ್ಲಿ ಚಿತ್ರ ನಿರ್ಮಾಣಕ್ಕಾಗಿ ಧ್ರುವ ಅವರಿಗೆ 3 ಕೋಟಿ ರೂಪಾಯಿ ನೀಡಿದ್ದರು ಎಂದು ಹೇಳಿದ್ದಾರೆ. ಆದರೆ, ಧ್ರುವ ಅವರು ಚಿತ್ರದಿಂದ ಹಿಂದೆ ಸರಿದಿದ್ದಾರೆ ಮತ್ತು ಹಣವನ್ನು ಮರುಪಾವತಿಸಿಲ್ಲ ಎಂದು ಆರೋಪಿಸಲಾಗಿದೆ.

ನಟ ಧ್ರುವ ಸರ್ಜಾ (Dhruva Sarja) ಅವರು ಸದ್ಯ ‘ಕೆಡಿ: ದಿ ಡೆವಿಲ್’ ಶೂಟ್ನಲ್ಲಿ ಬ್ಯುಸಿ ಇದ್ದಾರೆ. ಈ ಮಧ್ಯೆ ಅವರು ವಿವಾದದ ಮೂಲಕ ಸುದ್ದಿ ಆಗಿದ್ದಾರೆ. ‘ಜಗ್ಗು ದಾದ’ ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕ ರಾಘವೇಂದ್ರ ಹೆಗ್ಡೆ ದೂರು ನೀಡಿದವರು. ತಮಗೆ ವಂಚನೆ ಆಗಿದೆ ಎಂದು ಅವರು ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಇಂಗ್ಲಿಷ್ನ ಮಿಡ್ ಡೇ ವರದಿ ಮಾಡಿದೆ. 3 ಕೋಟಿ ರೂಪಾಯಿ ವಂಚನೆ ಕೇಸ್ ಇದಾಗಿದ್ದು, ಬಡ್ಡಿ ಸೇರಿ ಆ ಹಣ ಈಗ 9 ಕೋಟಿ ರೂಪಾಯಿ ಆಗಿದೆ ಎಂದು ನಿರ್ಮಾಪಕ ಆರೋಪಿಸಿದ್ದಾರೆ.
‘2016ರಲ್ಲಿ ನನ್ನ ಮೊದಲ ಸಿನಿಮಾ (ಜಗ್ಗು ದಾದ) ಯಶಸ್ಸು ಕಂಡಿತು. ಈ ವೇಳೆ ಧ್ರುವ ಸರ್ಜಾ ಅವರು ನನ್ನ ಕಚೇರಿಗೆ ಬಂದು ಸಿನಿಮಾ ಮಾಡುವ ಆಸಕ್ತಿ ತೋರಿಸಿರು. 2016ರಿಂದ 2018ರವರೆಗೆ ಅವರು ಈ ವಿಚಾರದಲ್ಲಿ ತುಂಬಾನೇ ಆಸಕ್ತಿ ತೋರಿಸುತ್ತಿದ್ದರು. ದಿ ಸೋಲ್ಜರ್ ಹೆಸರಿನ ಸಿನಿಮಾದ ಸ್ಕ್ರಿಪ್ಟ್ ಕೂಡ ನೀಡಿದರು’ ಎಂದು ರಾಘವೇಂದ್ರ ಹೆಗ್ಡೆ ಅಂಬೋಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
‘ಸಿನಿಮಾ ಕಾಂಟ್ರ್ಯಾಕ್ಟ್ ಸಹಿ ಮಾಡುವುದಕ್ಕೂ ಮೊದಲು 3 ಕೋಟಿ ರೂಪಾಯಿ ಕೊಡುವಂತೆ ಧ್ರುವ ಕೇಳಿದ್ದರು. ಇದರಿಂದ ಫ್ಲ್ಯಾಟ್ ಖರೀದಿಸೋದಾಗಿ ಹೇಳಿದ್ದರು. ಮೇಲೆ ತಿಳಿಸಿದ ಸಿನಿಮಾದ ಕೆಲಸವನ್ನು ಶೀಘ್ರವೇ ಆರಂಭಿಸೋದಾಗಿ ತಿಳಿಸಿದ್ದರು’ ಎಂಬುದಾಗಿ ಹೆಗ್ಡೆ ದೂರಿದ್ದಾರೆ.
ಧ್ರುವ ಸರ್ಜಾ ಅವರು ತೋರಿಸಿದ ಉತ್ಸಾಹವನ್ನು ನಂಬಿದ ರಾಘವೇಂದ್ರ ಹೆಗ್ಡೆ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದು ಹಣವನ್ನು ಹೊಂದಿಸಿ ಧ್ರುವಗೆ 3.15 ಕೋಟಿ ರೂಪಾಯಿ ಹಣ ನೀಡಿದ್ದರು. 2019ರಲ್ಲಿ ಔಪಚಾರಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಸಿನಿಮಾದ ಶೂಟ್ ಜನವರಿ 2020ರಲ್ಲಿ ಪ್ರಾರಂಭವಾಗಿ ಜೂನ್ 2020ರೊಳಗೆ ಪೂರ್ಣಗೊಳ್ಳಬೇಕಿತ್ತು.
ಇದನ್ನೂ ಓದಿ: ವಿಗ್ ಬಗ್ಗೆ ಮಾತಾಡುವ ಅಗತ್ಯ ಇರಲಿಲ್ಲ: ಪ್ರಥಮ್ ವರ್ತನೆಗೆ ಧ್ರುವ ಸರ್ಜಾ ಗರಂ
ಹಣವನ್ನು ಪಡೆದ ನಂತರ ಧ್ರುವ ಅವರು ಅವಧಿ ವಿಸ್ತರಣಗೆ ಕೋರಿದರಂತೆ. ನಂತರ ಕೊವಿಡ್ ಬಂತು. ಕೊವಿಡ್ ಲಾಕ್ಡೌನ್ ಪೂರ್ಣಗೊಂಡರೂ, ಅವರು ಪ್ರತಿಕ್ರಿಯಿಸಲಿಲ್ಲ ಎಂದು ರಾಘವೇಂದ್ರ ಆರೋಪಿಸಿದ್ದಾರೆ. ಸ್ಕ್ರಿಪ್ಟ್ ರೈಟರ್‌ಗಳಿಗೂ ಧ್ರುವ ಹಣ ಕೊಡಿಸಿದ್ದರಂತೆ. ಇದನ್ನು ಸೇರಿದರೆ ರಾಘವೇಂದ್ರ ಅವರ ಕೈಯಿಂದ 3.43 ಕೋಟಿ ರೂಪಾಯಿ ನೀಡಿದ್ದರು. ಧ್ರುವ ಯೋಜನೆಯಿಂದ ಹಿಂದೆ ಸರಿದಿದ್ದು ಮಾತ್ರವಲ್ಲ, ಕರೆಗಳನ್ನು ಸ್ವೀಕರಿಸಿಲ್ಲ ಎಂದು ರಾಘವೇಂದ್ರ ಹೇಳಿದ್ದಾರೆ. ಈ ದೂರಿನ ಆಧಾರದಮೇಲೆ ಪೊಲೀಸರಿ ಕೇಸ್ ದಾಖಲಿಸಿಕೊಂಡಿದ್ದಾರೆ. ಬಡ್ಡಿ ಸೇರಿ ಈ ಹಣ ಈಗ 9.58 ಕೋಟಿ ರೂಪಾಯಿ ಆಗಿದೆ ಎಂಬುದಕ್ಕೆ ರಾಘವೇಂದ್ರ ದಾಖಲೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:38 am, Sat, 9 August 25








