
ಖಕಡ್ ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದವರು ದಿನೇಶ್ ಮಂಗಳೂರು (Dinesh Mangalore). ಅವರು ಈಗ ನಮ್ಮ ಜೊತೆ ಇಲ್ಲ. ಇಂದು (ಆಗಸ್ಟ್ 25) ಅವರು ನಿಧನ ಹೊಂದಿದ್ದಾರೆ. ಅವರ ಸಾವು ಅನೇಕರಿಗೆ ಬೇಸರ ತರಿಸಿದೆ. ಒಂದೊಳ್ಳೆಯ ಕಲಾವಿದನನ್ನು ನಾವು ಕಳೆದುಕೊಂಡಿದ್ದೇವೆ. ದಿನೇಶ್ ಅವರು ‘ಕೆಜಿಎಫ್’, ‘ಆ ದಿನಗಳು’, ‘ಉಳಿದವರು ಕಂಡತೆ’ ರೀತಿಯ ಚಿತ್ರದಲ್ಲಿ ಮಾಡಿದ ಪಾತ್ರಗಳು ಯಾವಾಗಲೂ ನಮ್ಮ ಜೊತೆ ಇರುವಂಥದ್ದು.
ದಿನೇಶ್ ಅವರು ‘ಜನುಮದ ಜೋಡಿ’ ಚಿತ್ರದಲ್ಲಿ ಆರ್ಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ಈ ಚಿತ್ರದ ಅನುಭವವನ್ನು ಈ ಮೊದಲು ‘ಕಲಾ ಮಾಧ್ಯಮ’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ‘ನನ್ನ ಮೊಟ್ಟ ಮೊದಲ ಕಲಾ ನಿರ್ದೇಶನ ಎಂದರೆ ಅದು ಜನುಮದ ಜೋಡಿ ಸಿನಿಮಾ. ಅಣ್ಣಾವ್ರ ಕಂಪನಿ ಅನ್ನೋ ಖುಷಿ ಇತ್ತು. ನಟರು, ತಂತ್ರಜ್ಞರು ಎಲ್ಲರೂ ಒಟ್ಟಿಗೇ ಇದ್ದಿದ್ದೆವು. ಮೈಸೂರಲ್ಲಿ ಶೂಟ್ ನಡೆದಿತ್ತು’ ಎಂದು ದಿನೇಶ್ ಹೇಳಿದ್ದರು.
‘ರಾಜ್ಕುಮಾರ್ ಸರಳವಾಗಿ ಇರುತ್ತಿದ್ದರು. ದಿನೇಶ್ ಅವರೇ ನಿಮಗೆ ಮಟನ್ ಆಗಲ್ಲ ಅನಿಸುತ್ತದೆ. ನೀವು ಮಂಗಳೂರಿನವರಲ್ಲವೇ, ಅಂಜಲ್ ಮೀನಿನ ಅಡುಗೆ ಮಾಡಿಸಿದ್ದೇವೆ ಅದನ್ನೇ ಊಟ ಮಾಡಿ ಎಂದು ಹೇಳುತ್ತಿದ್ದರು. ಅವರು ಯಾವಾಗಲೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅವರು ಮಾತೇ ತೃಪ್ತಿ ಕೊಡುತ್ತಿತ್ತು’ ಎಂದಿದ್ದರು ದಿನೇಶ್.
‘ಸಿನಿಮಾ ಡಿಸ್ಕಶನ್ ವೇಳೆ ಆರ್ಟ್ ಡೈರೆಕ್ಟರ್ನೂ ಅವರು ಕರೆಸಿಕೊಳ್ಳುತ್ತಿದ್ದರು. ಹೀಗಾಗಿ ಜನುಮದ ಜೋಡಿ ಸಿನಿಮಾ ವೇಳೆ ನಾನೂ ಹೋಗಿದ್ದೆ. ಇದು ನಿಜಕ್ಕೂ ಖುಷಿಯ ವಿಚಾರ. ಈ ಕಾರಣದಿಂದಲೇ ಅವರ ಸಿನಿಮಾ, ಅವರ ಮಕ್ಕಳ ಸಿನಿಮಾಗಳಿಗೆ ತೂಕ ಇರುತ್ತಿತ್ತು. ಸಿನಿಮಾ ಹಿಟ್ ಆಗಲು ರಾಜ್ಕುಮಾರ್ ಕೂಡ ಕಾರಣ. ರಾಜ್ಕುಮಾರ್ ನಾನಾ ರೀತಿಯ ಪಾತ್ರಗಳನ್ನು ಮಾಡಿದ್ದರು. ಎಲ್ಲಾ ಪಾತ್ರಗಳೂ ಭಿನ್ನವಾಗಿದ್ದವು’ ಎಂದು ದಿನೇಶ್ ಹೇಳಿದ್ದರು.
ಇದನ್ನೂ ಓದಿ: ‘ಕೆಜಿಎಫ್’ ಸಿನಿಮಾ ಖ್ಯಾತಿಯ ನಟ ದಿನೇಶ್ ಮಂಗಳೂರು ನಿಧನ
‘ಕಲಾ ನಿರ್ದೇಶನವನ್ನು ಯಾರೂ ಬೇಕಾದರೂ ಮಾಡಬಹುದು ಎಂಬ ಪರಿಸ್ಥಿತಿ ಬಂದಿದೆ. ಇದು ನನಗೆ ಬೇಸರ ಮೂಡಿಸಿತು. ಈ ಕಾರಣಕ್ಕೆ ನಾನು ಕಲಾ ನಿರ್ದೇಶನವನ್ನು 2010ರಲ್ಲೇ ಬಿಟ್ಟೆ’ ಎಂದು ದಿನೇಶ್ ಹೇಳಿದ್ದರು. ಆ ಬಳಿಕ ಅವರು ನಟನೆಯಲ್ಲಿ ತೊಡಗಿಕೊಂಡರು. ಖಡಕ್ ಪಾತ್ರಗಳ ಮೂಲಕ ದಿನೇಶ್ ಮಂಗಳೂರು ಗಮನ ಸೆಳೆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.