‘ಅಂತ’ ಸಿನಿಮಾದಲ್ಲಿ ರಾಜ್​ಕುಮಾರ್, ವಿಷ್ಣುವರ್ಧನ್ ನಟಿಸಲಿಲ್ಲ ಏಕೆ?

|

Updated on: May 23, 2023 | 9:16 PM

Rajendra Singh Babu: ರಾಜೇಂದ್ರ ಸಿಂಗ್ ಬಾಬು ಅಂತ ಕತೆಯನ್ನು ಸಿನಿಮಾ ಮಾಡಲು ಮುಂದಾದಾಗ ಅದರಲ್ಲಿ ಡಾ ರಾಜ್​ಕುಮಾರ್ ನಟಿಸಬೇಕಿತ್ತು. ಆದರೆ ಆ ನಂತರ ಅದು ಅಂಬರೀಶ್ ಪಾಲಾಯಿತು. ಈ ಬದಲಾವಣೆ ಏಕಾಯ್ತು ಎಂದು ರಾಜೇಂದ್ರ ಸಿಂಗ್ ಬಾಬು ವಿವರಿಸಿದ್ದಾರೆ.

ಅಂತ ಸಿನಿಮಾದಲ್ಲಿ ರಾಜ್​ಕುಮಾರ್, ವಿಷ್ಣುವರ್ಧನ್ ನಟಿಸಲಿಲ್ಲ ಏಕೆ?
ಅಂತ ಸಿನಿಮಾ
Follow us on

ಅಂಬರೀಶ್ (Ambareesh) ವೃತ್ತಿ ಬದುಕಿನಲ್ಲಿ ಹಾಗೂ ಕನ್ನಡ ಚಿತ್ರ ಇತಿಹಾಸದಲ್ಲಿ ಪ್ರಮುಖವಾದ ಸಿನಿಮಾ ಅಂತ (Antha). ರಾಜೇಂದ್ರ ಸಿಂಗ್ ಬಾಬು (Rajendra Singh Babu) ನಿರ್ದೇಶನದ ಈ ಸಿನಿಮಾ 1981 ರಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿತ್ತು. ಆ ಸಿನಿಮಾದ ‘ಕುತ್ತೆ ಕನ್ವರ್ ನಹಿ ಕನ್ವರ್ ಲಾಲ್ ಬೊಲೊ’ ಡೈಲಾಗ್ ಇಂದಿಗೂ ಪಡ್ಡೆಗಳ ಬಾಯಲ್ಲಿ ನಲಿಯುತ್ತಿದೆ. ಈ ಸಿನಿಮಾ ಇದೀಗ ಮರುಬಿಡುಗಡೆಗೆ ಸಜ್ಜಾಗಿದೆ ಅದೂ ನವೀನ ತಂತ್ರಜ್ಞಾನದೊಂದಿಗೆ. ಈ ಸಿನಿಮಾದ ಚಿತ್ರಕತೆಯನ್ನು ರಾಜೇಂದ್ರ ಸಿಂಗ್ ಬಾಬು ಮಾಡಿಕೊಂಡಾಗ ಡಾ ರಾಜ್​ಕುಮಾರ್ ನಾಯಕನ ಪಾತ್ರದಲ್ಲಿ ನಟಿಸಬೇಕಿತ್ತು, ಆದರೆ ಈ ಸಿನಿಮಾದಲ್ಲಿ ರಾಜ್​ಕುಮಾರ್ ಅಥವಾ ವಿಷ್ಣುವರ್ಧನ್ ಏಕೆ ನಟಿಸಲಿಲ್ಲ ಎಂದು ರಾಜೇಂದ್ರ ಸಿಂಗ್ ಬಾಬು ಈಗ ವಿವರಿಸಿದ್ದಾರೆ.

ಅಂತ ಸಿನಿಮಾ ಮರುಬಿಡುಗಡೆ ವಿಷಯ ಹಂಚಿಕೊಳ್ಳಲು ಕರೆಯಲಾಗಿದ್ದ ಪ್ರೆಸ್ ಮೀಟ್​ನಲ್ಲಿ ಮಾತನಾಡಿದ ರಾಜೇಂದ್ರ ಸಿಂಗ್ ಬಾಬು, ”ಅಂತ ಕತೆಯನ್ನು ಸಿನಿಮಾ ಮಾಡಲು ನಿರ್ದೇಶಕ ದೊರೆ-ಭಗವಾನ್ ಪ್ರಯತ್ನಿಸಿದ್ದರು. ಆದರೆ ಆ ಕತೆ ನನಗೆ ಸಿಕ್ಕಿದ್ದು ನನ್ನ ಸಂಬಂಧಿಯೂ ಆಗಿದ್ದ ಪತ್ರಕರ್ತ ಎಂಬಿ ಸಿಂಗ್ ಅವರಿಂದ. ಸುಧಾದಲ್ಲಿ ಅಂತ ಕತೆ ಪ್ರಕಟವಾಗಿತ್ತು, ಅವರು ಅದರ ಸಂಪಾದಕರಾಗಿದ್ದರು, ಕತೆಗಾರರಿಂದ ಆ ಕತೆಯನ್ನು ನನಗೆ ಕೊಡಿಸಿದರು. ಅದಾಗಲೇ ನಾನು ನಾಗರಹೊಳೆ ಇನ್ನು ಕೆಲವು ಸಿನಿಮಾಗಳನ್ನು ಮಾಡಿದ್ದರಿಂದ ಅವರಿಗೆ ನನ್ನ ಮೇಲೆ ಭರವಸೆ ಇತ್ತು” ಎಂದು ರಾಜೇಂದ್ರ ಸಿಂಗ್ ಬಾಬು ನೆನಪು ಮಾಡಿಕೊಂಡರು.

”ಆಗ ನಾನು ಡಾ ರಾಜ್​ಕುಮಾರ್ ಅವರಿಗೆ ಸಿನಿಮಾ ಮಾಡುವ ಯೋಜನೆಯಲ್ಲಿದ್ದೆ. ಆದರೆ ಈ ಸಿನಿಮಾದ ಕತೆ ನನಗೆ ಅವರಿಗೆ ಸೂಟ್ ಆಗದು ಅಂದುಕೊಂಡೆ. ರಾಜ್​ಕುಮಾರ್ ಅವರನ್ನು ಭೇಟಿಯಾಗಿ, ಈ ಕತೆ ನಿಮಗೆ ಸೂಟ್ ಆಗುವುದಿಲ್ಲ ಏಕೆಂದರೆ ಸಿನಿಮಾದಲ್ಲಿ ತೀರ ಹಿಂಸೆಯ ದೃಶ್ಯಗಳಿವೆ, ಉಗುರು ಕೀಳುವುದು, ಗರ್ಭಿಣಿಯನ್ನು ಹಗ್ಗಗ್ಗೆ ಕಟ್ಟಿ ನಾಯಕನ ಎದುರುಗಡೆಯೇ ಕೊಲ್ಲುವುದು, ಸಹೋದರಿಯೇ ನಾಯಕನ ಮುಂದೆ ಕ್ಯಾಬೆರೆ ಮಾಡುವುದು ಇತ್ಯಾದಿಗಳೆಲ್ಲ ಇವೆ. ಇದು ನಿಮ್ಮ ಸ್ಟಾರ್ ವ್ಯಾಲ್ಯೂಗೆ ಸೂಟ್ ಆಗುವುದಿಲ್ಲ, ಅಭಿಮಾನಿಗಳಿಗೆ ಒಪ್ಪಿಕೊಳ್ಳಲು ಕಷ್ಟವಾಗುತ್ತದೆ ಎಂದೆ ಅವರೂ ಒಪ್ಪಿಕೊಂಡರು” ಎಂದು ಅಂದಿನ ಘಟನೆ ವಿವರಿಸಿದರು.

ಇದನ್ನೂ ಓದಿ:ಅಂತ ಸಿನಿಮಾವನ್ನು ನಾವು ತೆಲುಗಿನಲ್ಲಿ ಮಾಡಿದೆವು, ನನ್ನ ಸಿನಿಮಾ ಕನ್ನಡದಲ್ಲಿಯೂ ರೀಮೇಕ್ ಆಗಿದೆ: ನರೇಶ್

”ಆ ಬಳಿಕ, ವಿಷ್ಣುವರ್ಧನ್​ಗೂ ನಾನು ಇದನ್ನೇ ಹೇಳಿ, ನೀನು ಈ ಸಿನಿಮಾದಲ್ಲಿ ನಟಿಸುವುದು ಬೇಡ ಎಂದೆ. ಅವನೂ ಹೌದು ಎಂದ. ನನಗೆ ಈ ಪಾತ್ರಕ್ಕೆ ಒಂದು ರೀತಿಯ ನಿರುದ್ವಿಗ್ನವಾದ ಅಂದರೆ ಆ ಪಾತ್ರ ಮುಂದೆ ಏನು ಮಾಡುತ್ತದೆ ಎಂಬುದನ್ನು ಜನ ಊಹಿಸಬಾರದು ಅಂಥಹಾ ವ್ಯಕ್ತಿ ಬೇಕಿತ್ತು. ಅದಕ್ಕಾಗಿ ನಾನು ಸಿನಿಮಾಕ್ಕೆ ಅಂಬರೀಶ್ ಅನ್ನು ಆರಿಸಿಕೊಂಡೆ” ಎಂದರು ರಾಜೇಂದ್ರ ಸಿಂಗ್ ಬಾಬು. ಈ ಸಿನಿಮಾಕ್ಕೆ ಮುನ್ನ ಅಂಬರೀಶ್ ಹಲವು ಸಿನಿಮಾಗಳಲ್ಲಿ ನಟಿಸಿದ್ದರಾದರೂ ಅವರಿಗೆ ‘ಗುಡ್ ಬಾಯ್’ ಅಥವಾ ‘ಆದರ್ಶ ನಾಯಕ’ ಇಮೇಜು ಇನ್ನೂ ದೊರಕಿರಲಿಲ್ಲ. ಹಾಗಾಗಿ ರಾಜೇಂದ್ರ ಸಿಂಗ್ ಬಾಬು ಅಂತ ಸಿನಿಮಾಕ್ಕೆ ಅಂಬರೀಶ್ ಅನ್ನು ಆರಿಸಿಕೊಂಡರು. ಆ ನಂತರ ನಡೆದಿದ್ದು ಇತಿಹಾಸ. ಇದೀಗ ಅಂಬರೀಶ್ ಹುಟ್ಟುಹಬ್ಬದ ಪ್ರಯುಕ್ತ ಅಂತ ಸಿನಿಮಾ ನೂತನ ತಂತ್ರಜ್ಞಾನದೊಟ್ಟಿಗೆ ಮೇ 26ರಂದು ಬಿಡುಗಡೆ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ