ಖ್ಯಾತ ನಟಿ ಶ್ರೀಲೀಲಾ (Sreeleela) ಅವರು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಹಲವು ಅವಕಾಶಗಳು ಅವರಿಗೆ ಸಿಗುತ್ತಿವೆ. ಆದರೆ ಶ್ರೀಲೀಲಾ ತಾಯಿ ಸ್ವರ್ಣಲತಾ (Swarnalatha) ಅವರು ನೆಗೆಟಿವ್ ಕಾರಣದಿಂದಲೇ ಆಗಾಗ ಸುದ್ದಿ ಆಗುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಅಲಯನ್ಸ್ ವಿವಿ ಆವರಣದಲ್ಲಿ ಗಲಾಟೆ ಮಾಡಿಕೊಂಡಿದ್ದರು. ಈಗ ಅವರ ಸಂಸಾರದಲ್ಲಿಯೇ ಕಿರಿಕ್ ಆಗಿದ್ದು, ಆ ಪ್ರಕರಣವು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸ್ವರ್ಣಲತಾ ವಿರುದ್ಧ ಅವರ ಪತಿ ಸುಭಾಕರ್ ರಾವ್ (Subhakar Rao Surapaneni) ದೂರು ನೀಡಿದ್ದಾರೆ. ‘ನನ್ನ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಬೀಗ ಒಡೆದು ನನ್ನ ಮನೆಗೆ ನುಗ್ಗಿದ್ದಾರೆ’ ಎಂದು ಆಡುಗೋಡಿ ಠಾಣೆಗೆ ನೀಡಿದ ದೂರಿನಲ್ಲಿ ಸುಭಾಕರ್ ರಾವ್ ತಿಳಿಸಿದ್ದಾರೆ.
ಬೆಂಗಳೂರಿನ ಕೋರಮಂಗಲದ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿರುವ ಸುಭಾಕರ್ ರಾವ್ ಅವರ ಫ್ಲ್ಯಾಟ್ ಇದೆ. ಅದನ್ನು ಸ್ವರ್ಣಲತಾಗೆ ಸುಭಾಕರ್ ನೀಡಿದ್ದರು. ಆದರೆ ನಂತರ ದಿನಗಳಲ್ಲಿ ಇಬ್ಬರ ನಡುವೆ ಮನಸ್ತಾಪ ಆದಾಗ ಆ ಫ್ಲ್ಯಾಟ್ಗೆ ಸುಭಾಕರ್ ಬೀಗ ಹಾಕಿದರು. ಅಕ್ಟೋಬರ್ 3ರಂದು ಸ್ವರ್ಣಲತಾ ಅವರು ಬೀಗ ಒಡೆದು ಫ್ಲ್ಯಾಟ್ಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಸುಭಾಕರ್ ಆರೋಪಿಸಿದ್ದಾರೆ. ಆಡುಗೋಡಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಈ ಹಿಂದೆಯೂ ಸ್ವರ್ಣಲತಾ ಕಿರಿಕ್:
ಸೆಪ್ಟೆಂಬರ್ 10ರಂದು ಮಾರಕಾಸ್ತ್ರಗಳೊಂದಿಗೆ ಬೌನ್ಸರ್ಗಳ ಜತೆ ಅಲಯನ್ಸ್ ವಿವಿಗೆ ನುಗ್ಗಿದ ಆರೋಪ ಸ್ವರ್ಣಲತಾ ಅವರ ಮೇಲಿತ್ತು. ಅಲಯನ್ಸ್ ಕಾಲೇಜು ಒಡೆತನದ ಕುರಿತು ಆಗಾಗ ಕಿರಿಕ್ ಆಗುತ್ತಿದೆ. ‘ಕೋರ್ಟ್ ಆದೇಶವಿದೆ, ಕಾಲೇಜು ನಮ್ಮದು ಅಂತ’ ಮಧುಕರ್ ಅಂಗೂರ್ ಹಾಗೂ ಸ್ವರ್ಣಲತಾ ಅವರು ಕಾಲೇಜಿಗೆ ಅಕ್ರಮವಾಗಿ ನುಗ್ಗಿದ್ದಾರೆ ಎಂದು ಎಫ್ಐಆರ್ ಆಗಿತ್ತು. ಸ್ವರ್ಣಲತಾ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲಯನ್ಸ್ ವಿವಿ ಸಿಬ್ಬಂದಿ ನಿವೇದಿತಾ ಮಿಶ್ರಾ ದೂರು ನೀಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:02 pm, Wed, 5 October 22