ಕನ್ನಡದ ಪ್ರೇಕ್ಷಕರು ‘ಗಾಳಿಪಟ 2’ (Gaalipata 2) ಸಿನಿಮಾವನ್ನು ಇಷ್ಟಪಡುತ್ತಿದ್ದಾರೆ. ಆಗಸ್ಟ್ 12ರಂದು ಬಿಡುಗಡೆ ಆಗಿರುವ ಈ ಚಿತ್ರ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಒಂದಷ್ಟು ಮಿಶ್ರ ಪ್ರತಿಕ್ರಿಯೆಗಳು ಇದ್ದರೂ ಕೂಡ ಬಾಕ್ಸ್ ಆಫೀಸ್ನಲ್ಲಿ ‘ಗಾಳಿಪಟ 2’ ಚಿತ್ರ ಒಳ್ಳೆಯ ಕಮಾಯಿ ಮಾಡುತ್ತಿದೆ. ಈ ಖುಷಿಯಲ್ಲೇ ಇಡೀ ತಂಡ ಥಿಯೇಟರ್ ವಿಸಿಟ್ ಮಾಡುತ್ತಿದೆ. ನಿರ್ದೇಶಕ ಯೋಗರಾಜ್ ಭಟ್ (Yogaraj Bhat), ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್, ನಿರ್ಮಾಪಕ ರಮೇಶ್ ರೆಡ್ಡಿ ಅವರು ಹಲವು ಚಿತ್ರಮಂದಿಗಳಿಗೆ ಭೇಟಿ ನೀಡುತ್ತಿದ್ದಾರೆ. ಅಚ್ಚರಿ ಎಂದರೆ ಈ ಸಿನಿಮಾದ ಭರ್ಜರಿ ಯಶಸ್ಸಿನಿಂದ ಯೋಗರಾಜ್ ಭಟ್ ಲೂಸ್ ಆಗಿದ್ದಾರಂತೆ. ಹಾಗಂತ ಇದು ನಾವು ಮಾಡುತ್ತಿರುವ ಆರೋಪ ಅಲ್ಲ. ಗಣೇಶ್ (Golden Star Ganesh) ಅವರು ಸೋಶಿಯಲ್ ಮೀಡಿಯಾ ಮೂಲಕ ಇದನ್ನು ಜಗಜ್ಜಾಹೀರು ಮಾಡಿದ್ದಾರೆ!
ನಟ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಅವರ ನಡುವೆ ಒಂದು ಉತ್ತಮ ಬಾಂಧವ್ಯ, ಸಲುಗೆ ಇದೆ. ‘ಮುಂಗಾರು ಮಳೆ’ ಕಾಲದಿಂದ ‘ಗಾಳಿಪಟ 2’ವರೆಗೂ ಅದು ಮುಂದುವರಿದುಕೊಂಡು ಬಂದಿದೆ. ಈಗ ಈ ನಟ-ನಿರ್ದೇಶಕನ ಕಾಂಬಿನೇಷನ್ಗೆ ಮತ್ತೊಂದು ಗೆಲುವು ಸಿಕ್ಕಿದೆ. ಈ ಖುಷಿಯಲ್ಲಿ ಭಟ್ಟರು ಲೂಸ್ ಆಗಿದ್ದಾರೆ ಎಂಬುದು ಗಣೇಶ್ ಆರೋಪ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ವಿಡಿಯೋವನ್ನು ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಯೋಗರಾಜ್ ಭಟ್ ಅವರ ಹೆಂಡತಿ ಮತ್ತು ಮಗಳು ಆಡಿರುವ ಮಾತುಗಳಿವೆ.
‘ನಮ್ ಅಪ್ಪ ಲೂಸ್ ಆಗಿದಾರೆ ಅಂತ ನಮ್ಮ ಅಮ್ಮ ಹೇಳ್ತಾ ಇದಾರೆ. ನಮ್ ಅಪ್ಪ ಈಗ ಹೊರಗೆ ಹೋಗ್ತಾ ಇದಾರೆ. ಅವರ ಕೈಗೆ ತಮಟೆ ಕೊಡ್ಬೇಡಿ ಪ್ಲೀಸ್..’ ಎಂದು ಯೋಗರಾಜ್ ಭಟ್ ಪುತ್ರಿ ಹೇಳಿರುವ ವಿಡಿಯೋ ವೈರಲ್ ಆಗಿದೆ. ‘ಏನ್ ಸಾರ್ ಇದು ಹಿಂಗೆ..’ ಎಂದು ಹೇಳಿದ್ದಕ್ಕೆ ಭಟ್ಟರು ಗಣೇಶ್ ಕಡೆಗೆ ಕೈ ತೋರಿಸಿದ್ದಾರೆ.
ನಾನು ಹೇಳ್ದೆ ‘ನಮ್ ಭಟ್ರು ಲೂಸ್ ಆಗವ್ರೆ’ ಅಂತ. ಯಾರೂ ನಂಬಲಿಲ್ಲ. ಇಲ್ಲಿ ನೋಡಿ. ‘ಲೂಸ್ ಆಗವ್ರೆ’ ಅಂತ ಭಟ್ರ ಹೆಂಡತಿ ಮತ್ತೆ ಮಗಳೇ ಕನ್ಫರ್ಮ್ ಮಾಡ್ತಿದಾರೆ.
ಗಾಳಿಪಟ ರಿಲೀಸ್ ಆಗಿ ಪ್ರಪಂಚಾದ್ಯಂತ ಅಭಿಮಾನಿಗಳು ಜಾಸ್ತಿ ಪ್ರೀತಿ ತೋರ್ಸಕ್ಕೆ ಶುರು ಮಾಡಿದ್ಮೇಲಂತೂ ಕಂಟ್ರೋಲ್ಗೇ ಸಿಗದೆ ಹೆಂಗೆಂಗೋ ಆಡ್ತಾವ್ರೆ
‘ಕೈಲಿ ತಮಟೆ ಕೊಡ್ಬೇಡಿ’EPIC 🤣 pic.twitter.com/hJieGstCsq— Ganesh (@Official_Ganesh) August 14, 2022
‘ಇದಕ್ಕೆಲ್ಲ ಕಾರಣ ಇವನು. ನಾನು ಲೂಸ್ ಅಂತ ನಮ್ಮ ಮನೆಯವರಿಗೆ ಮಾತ್ರ ಗೊತ್ತಿತ್ತು. ಅದನ್ನು ಇಡೀ ನಾಡಿಗೆ ಗೊತ್ತಾಗುವಂತೆ ಮಾಡಿದ್ದು ಇವನು’ ಎಂದು ಯೋಗರಾಜ್ ಭಟ್ ಅವರು ನಗೆ ಚಟಾಕಿ ಹಾರಿಸಿದ್ದಾರೆ. ಸಿನಿಮಾದ ಗೆಲುವಿಗೆ ಕಾರಣರಾದ ನಿರ್ಮಾಪಕ ರಮೇಶ್ ರೆಡ್ಡಿ ಮತ್ತು ಪ್ರೇಕ್ಷಕರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.