ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಕನಸಿನ ಪ್ರಾಜೆಕ್ಟ್ ಆದ ‘ಗಂಧದ ಗುಡಿ’ (Gandhada Gudi) ಸಾಕ್ಷ್ಯಚಿತ್ರಕ್ಕೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿದೆ. ಅಕ್ಟೋಬರ್ 28ರಂದು ರಿಲೀಸ್ ಆದ ಈ ಡಾಕ್ಯುಮೆಂಟರಿ ಎಲ್ಲ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ಎಲ್ಲ ವಯೋಮಾನದ ಪ್ರೇಕ್ಷಕರು ಕೂಡ ಇದಕ್ಕೆ ಮನ ಸೋತಿದ್ದಾರೆ. ಈ ಸಾಕ್ಷ್ಯಚಿತ್ರವನ್ನು ವಿಶೇಷವಾಗಿ ಮಕ್ಕಳು ನೋಡಬೇಕು ಎಂಬುದು ಪುನೀತ್ ರಾಜ್ಕುಮಾರ್ ಅವರ ಬಯಕೆ ಆಗಿತ್ತು. ಅನೇಕರಿಂದ ಇದೇ ಅಭಿಪ್ರಾಯ ಕೇಳಿಬಂದಿದೆ ಕೂಡ. ಹಾಗಾಗಿ ಮಕ್ಕಳಿಗೆ ಅನುಕೂಲ ಆಗುವ ರೀತಿಯಲ್ಲಿ ಇದರ ಟಿಕೆಟ್ ಬೆಲೆಯನ್ನು (Gandhada Gudi Ticket Price) ಇಳಿಕೆ ಮಾಡಲಾಗಿದೆ. ಈ ಕುರಿತು ‘ಪಿಆರ್ಕೆ ಪ್ರೊಡಕ್ಷನ್ಸ್’ ವತಿಯಿಂದ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ..
‘ಗಂಧದಗುಡಿ ಅಪ್ಪು ಅವರ ಒಂದು ಕನಸು. ಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ಪರಿಚಯಿಸುವ ಅವರ ಹಂಬಲ ಈ ಸಿನಿಮಾ ರೂಪಗೊಳ್ಳಲು ಕಾರಣ. ಅಪ್ಪು ಅವರ ಉದ್ದೇಶ ಈ ಸಿನಿಮಾ ಎಲ್ಲ ಕನ್ನಡಿಗರು ನೋಡಬೇಕೆಂಬುದು. ಅದರಲ್ಲೂ ಮಕ್ಕಳು ನೋಡಬೇಕೆಂಬುದು. ಈ ಸಲುವಾಗಿ ನಮ್ಮ ಚಿತ್ರತಂಡ ಎಲ್ಲರೊಡನೆ ಚರ್ಚಿಸಿ ವಿತರಕರ ಹಾಗೂ ಪ್ರದರ್ಶಕರ ಸಹಕಾರದೊಂದಿಗೆ ಗಂಧದ ಗುಡಿಯನ್ನು 07-11-2022 ಸೋಮವಾರದಿಂದ 10-11-2022 ಗುರುವಾರದವರೆಗೂ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳಲ್ಲಿ 56 ರೂಪಾಯಿಗಳಿಗೆ ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ 112 ರೂಪಾಯಿಗಳಿಗೆ ಕರ್ನಾಟಕ ರಾಜ್ಯಾದ್ಯಂತ ದಿನದ ಎಲ್ಲಾ ಆಟಗಳು ಪ್ರದರ್ಶನ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ನಮ್ಮ ಮಕ್ಕಳ ನಾಳೆಗಳಿಗಾಗಿ ಕಾಡನ್ನು ಸಂರಕ್ಷಿಸೋಣ, ಗಂಧದಗುಡಿಯನ್ನು ತೋರಿಸೋಣ’ ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಪೋಸ್ಟ್ ಮಾಡಿದ್ದಾರೆ.
ನಾಡಿನ ಜನತೆಯಲ್ಲಿ ನನ್ನ ಒಂದು ಮನವಿ…
An appeal to all the people of the state.#GGKids #GGMovie #GandhadaGudi #DrPuneethRajkumar pic.twitter.com/tf01Kt2Alu
— Ashwini Puneeth Rajkumar (@Ashwini_PRK) November 6, 2022
ಅಮೋಘವರ್ಷ ನಿರ್ದೇಶನ ಮಾಡಿರುವ ‘ಗಂಧದ ಗುಡಿ’ ಚಿತ್ರವನ್ನು ಅನೇಕ ಗಣ್ಯರು ವೀಕ್ಷಿಸಿದ್ದಾರೆ. ಇತ್ತೀಚೆಗೆ ಇದನ್ನು ಕಣ್ತುಂಬಿಕೊಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಅನಿಸಿಕೆ ಹಂಚಿಕೊಂಡರು.
‘ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅವರ ಗಂಧದ ಗುಡಿ ನಿಜಕ್ಕೂ ಶ್ಲಾಘನೀಯ ಚಲನಚಿತ್ರ. ಮಕ್ಕಳು, ಯುವಕರು ಹಿರಿಯರೆಲ್ಲರೂ ತಪ್ಪದೇ ನೋಡಬೇಕಾದ ಚಿತ್ರ. ನಾಡಿನ ವನ್ಯಸಂಪತ್ತಿನ ವೈವಿಧ್ಯತೆ, ವೈಭವಗಳನ್ನು ಮನಗಾಣಿಸುವ ಇಡೀ ತಂಡದ ಪ್ರಯತ್ನಕ್ಕೆ ಅಭಿನಂದನೆಗಳು’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:58 pm, Sun, 6 November 22