ಮಗನನ್ನು ತಂದು ಕೊಡೋಕಾಗಲ್ಲ ಆದರೆ, ಅವರ ಕಣ್ಣೀರು ಒರೆಸುತ್ತೇವೆ; ಗುರು ದೇಶಪಾಂಡೆ ಪತ್ನಿ ಪ್ರತೀಕ್ಷಾ
ರಾಮನಗರ ತಾಲೂಕಿನ ಜೋಗನಪಾಳ್ಯದ ಬಳಿ ಸೋಮವಾರ (ಆ.9) ಈ ಅವಘಡ ಸಂಭವಿಸಿತ್ತು. ಘಟನೆ ಬಳಿಕ ನಿರ್ಮಾಪಕ ಗುರು ದೇಶಪಾಂಡೆ ಪರಾರಿ ಆಗಿದ್ದಾರೆ.
ಅಜಯ್ ರಾವ್ ಮತ್ತು ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದ ‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ಫೈಟರ್ ವಿವೇಕ್ ಮೃತಪಟ್ಟ ಬಳಿಕ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಪರಾರಿ ಆಗಿದ್ದಾರೆ. ಈ ಬೆನ್ನಲ್ಲೇ ಅವರ ಪತ್ನಿ ಪ್ರತೀಕ್ಷಾ ಅವರು ಸುದ್ದಿಗೋಷ್ಠಿ ನಡೆಸಿದ್ದು, ಮೃತರ ಕುಟುಂಬದ ಕಣ್ಣೀರು ಒರೆಸುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.
‘ನಮ್ಮ ಪ್ರೊಡಕ್ಷನ್ ಹೌಸ್ನಲ್ಲಿ ಒಂದು ಅವಘಡ ಸಂಭವಿಸಿದೆ. ಅವರಿಗೆ ಮಗನನ್ನು ತಂದು ಕೊಡೋಕೆ ಸಾಧ್ಯವಿಲ್ಲ. ಆದರೆ, ಅವರ ಕಣ್ಣೀರು ಒರೆಸುವ ಕೆಲಸವನ್ನು ನಾವು ಮಾಡುತ್ತೇವೆ. ಮೃತ ವಿವೇಕ್ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡೋದಾಗಿ ತೀರ್ಮಾನಿಸಿದ್ದೇವೆ. ವಿವೇಕ್ ಕುಟುಂಬಕ್ಕೆ ಈಗ 5 ಲಕ್ಷ ಪರಿಹಾರ ಚೆಕ್ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಮತ್ತೆ 5 ಲಕ್ಷ ರೂ. ಪರಿಹಾರ ಕೊಡುತ್ತೇವೆ’ ಎಂದಿದ್ದಾರೆ ಪ್ರತೀಕ್ಷಾ.
ರಾಮನಗರ ತಾಲೂಕಿನ ಜೋಗನಪಾಳ್ಯದ ಬಳಿ ಸೋಮವಾರ (ಆ.9) ಈ ಅವಘಡ ಸಂಭವಿಸಿತ್ತು. ಘಟನೆ ಬಳಿಕ ನಿರ್ಮಾಪಕ ಗುರು ದೇಶಪಾಂಡೆ ಪರಾರಿ ಆಗಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯ ಗುರು ದೇಶಪಾಂಡೆ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಈ ಮಧ್ಯೆ ಅವರ ಪತ್ನಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಘಟನೆ ನಡೆದು ಒಂದು ದಿನ ಕಳೆದ ಬಳಿಕ ರಚಿತಾ ರಾಮ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿವೇಕ್ಗೆ ಶ್ರದ್ಧಾಂಜಲಿ ಅರ್ಪಿಸಿದ್ದರು. ‘ವಿದ್ಯುತ್ ಅವಘಡದಿಂದ ಸಾವನ್ನಪಿದ ಫೈಟರ್ ವಿವೇಕ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ’ ಎಂದು ರಚಿತಾ ಪೋಸ್ಟ್ ಮಾಡಿದ್ದರು. ಆದರೆ ಇಷ್ಟು ಮಾತ್ರದಿಂದ ಜನರು ಸಮಾಧಾನ ಆಗಿಲ್ಲ. ಮೃತ ವಿವೇಕ್ ಕುಟುಂಬಕ್ಕೆ ಮತ್ತು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ರಂಜಿತ್ ಅವರಿಗೆ ಹಣದ ಸಹಾಯ ಮಾಡಿ ಎಂದು ಜನರು ಒತ್ತಾಯಿಸಿದ್ದರು.
ಇದನ್ನೂ ಓದಿ: ಫೈಟರ್ ವಿವೇಕ್ ಸಾವಿಗೆ ರಚಿತಾ ರಾಮ್ ಶ್ರದ್ಧಾಂಜಲಿ; ಓಂ ಶಾಂತಿ ಎನ್ನುವ ಬದಲು ಸಹಾಯ ಮಾಡಿ ಎಂದ ಜನರು