ಸಿನಿಮಾ ಮೇಲಿನ ಸೆಳೆತವೇ ಅಂಥದ್ದು. ಎಲ್ಲ ಕ್ಷೇತ್ರದ ಜನರೂ ಇದರತ್ತ ಆಕರ್ಷಿತರಾಗುತ್ತಾರೆ. ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಹೆಸರು ಗಳಿಸಿದ ಜಿಮ್ ರವಿ (Gym Ravi) ಅವರಿಗೂ ಸಿನಿಮಾ ಸೆಳೆತ ತಪ್ಪಿಲ್ಲ. ಇದೇ ಮೊದಲ ಬಾರಿಗೆ ಅವರು ‘ಪುರುಷೋತ್ತಮ’ ಸಿನಿಮಾ (Purushottama Movie) ಮೂಲಕ ಹೀರೋ ಆಗಿದ್ದಾರೆ. 2021ರ ಆರಂಭದಲ್ಲಿ ಸೆಟ್ಟೇರಿದ ಈ ಚಿತ್ರಕ್ಕೆ ಈಗ ಬಹುತೇಕ ಕೆಲಸಗಳು ಮುಗಿದಿವೆ. ಆ ಮೂಲಕ ಹಿಡಿದ ಕೆಲಸವನ್ನು ಪೂರ್ಣಗೊಳಿಸುವ ಬದ್ಧತೆಯನ್ನು ಜಿಮ್ ರವಿ (Bodybuilder Ravi) ತೋರಿದ್ದಾರೆ. ಶೀಘ್ರದಲ್ಲೇ ‘ಪುರುಷೋತ್ತಮ’ ಚಿತ್ರಕ್ಕೆ ಸೆನ್ಸಾರ್ ಪರೀಕ್ಷೆ ಎದುರಾಗಲಿದೆ. ಈ ಚಿತ್ರಕ್ಕೆ ಜಿಮ್ ರವಿ ಅವರೇ ನಿರ್ಮಾಪಕ.
ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡಿರುವ ‘ಪುರುಷೋತ್ತಮ’ ಚಿತ್ರತಂಡ ಈಗ ಕೊನೇ ಹಂತದ ಕೆಲಸಗಳಲ್ಲಿ ಬ್ಯುಸಿ ಆಗಿದೆ. ಈ ಚಿತ್ರಕ್ಕೆ ಅಮರನಾಥ್ ಎಸ್.ವಿ. ನಿರ್ದೇಶನ ಮಾಡಿದ್ದಾರೆ. ಕಥೆ-ಚಿತ್ರಕಥೆ ಕೂಡ ಅವರದ್ದೇ. ಈ ಹಿಂದೆ ‘ನಾನು ನಮ್ಮುಡ್ಗಿ ಖರ್ಚ್ಗೊಂದ್ ಮಾಫಿಯಾ’ ಹಾಗೂ ‘ದಿಲ್ದಾರ್’ ಸಿನಿಮಾವನ್ನು ನಿರ್ದೇಶಿಸಿದ್ದ ಅನುಭವನನ್ನು ಇಟ್ಟುಕೊಂಡು ಅಮರನಾಥ್ ಅವರು ‘ಪುರುಷೋತ್ತಮ’ ಚಿತ್ರವನ್ನು ಕಟ್ಟಿಕೊಡುತ್ತಿದ್ದಾರೆ.
ಈ ಸಿನಿಮಾದಲ್ಲಿ ಜಿಮ್ ರವಿ ಅವರಿಗೆ ಜೋಡಿಯಾಗಿ ನಟಿ ಅಪೂರ್ವಾ ಅಭಿನಯಿಸಿದ್ದಾರೆ. ಎ.ವಿ. ಹರೀಶ್, ಮೈಸೂರು ಪಭು ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಆನಂದ್ ಪ್ರಿಯಾ, ಪ್ರಮೋದ್ ಮರವಂತೆ ಹಾಗೂ ನಿರ್ದೇಶಕ ಅಮರನಾಥ್ ರಚಿಸಿರುವ ಸಾಹಿತ್ಯಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕುಮಾರ್ ಎಂ. ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಕಲೈ ನೃತ್ಯ ನಿರ್ದೇಶನ ಮಾಡಿದ್ದಾರೆ. ರಾಜನ್ ಅವರು ಎಫೆಕ್ಟ್ಸ್, ಅಕ್ಷಯ್ ಅವರು ಸಿಜಿ ಮತ್ತು ಕಾರ್ತಿಕ್ ಅವರು ವಿಎಫ್‌ಎಕ್ಸ್ ಕೆಲಸಗಳನ್ನು ನಿಭಾಯಿಸಿದ್ದಾರೆ. 2022ರ ಜನವರಿಯಲ್ಲಿ ಟ್ರೇಲರ್ ರಿಲೀಸ್ ಮಾಡಲು ‘ಪುರುಷೋತ್ತಮ’ ತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಪರಭಾಷೆ ಚಿತ್ರಗಳ ಪೋಷಕ ಪಾತ್ರಗಳಲ್ಲೂ ನಟಿಸಿ, ಅಲ್ಲಿನ ಪ್ರೇಕ್ಷಕರಿಗೂ ಜಿಮ್ ರವಿ ಪರಿಚಿತರಾಗಿದ್ದಾರೆ. ಈಗ ಅವರು ಮೊದಲ ಬಾರಿಗೆ ಹೀರೋ ಆಗಿರುವ ‘ಪುರುಷೋತ್ತಮ’ ಚಿತ್ರಕ್ಕೆ ತಮಿಳು-ತೆಲುಗಿನಿಂದ ಡಬ್ಬಿಂಗ್ಗೆ ಬೇಡಿಕೆ ಬಂದಿದೆ ಎಂಬ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಮೊದಲ ಪ್ರತಿ ಸಿದ್ಧಗೊಂಡ ಬಳಿಕ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಜಿಮ್ ರವಿ ನಿರ್ಧರಿಸಿದ್ದಾರೆ.
ಹಾಡುಗಳ ಮೂಲಕ ಗಮನ ಸೆಳೆಯುವ ಪ್ರಯತ್ನವನ್ನು ‘ಪುರುಷೋತ್ತಮ’ ಸಿನಿಮಾ ಮಾಡಿದೆ. ಗಂಡ-ಹೆಂಡತಿ ನಡುವಿನ ಸಾಮರಸ್ಯದ ಕಥೆಯನ್ನು ಈ ಚಿತ್ರದ ಮೂಲಕ ಹೇಳಲಾಗುವುದು. ವಿಜಯ್ ರಾಮೇಗೌಡ ಭೂಕನಕೆರೆ ಅವರು ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ.
ಇದನ್ನೂ ಓದಿ:
‘ಜಿಮ್ಗೆ ಹೋಗೋದ್ರಿಂದ ಸಾವು ಸಂಭವಿಸುತ್ತೆ ಅನ್ನೋದು ತಪ್ಪು’: ನಟ ನೆನಪಿರಲಿ ಪ್ರೇಮ್
ಪುನೀತ್ ನಿಧನದ ಬಳಿಕ ಜಿಮ್ಗೆ ತೆರಳಲು ಯುವಕರ ಹಿಂದೇಟು; ಪೋಷಕರಲ್ಲೂ ಆವರಿಸಿದೆ ಭಯ