Rakshit Shetty Birthday: ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ಅಭಿಮಾನಿಗಳ ಪಾಲಿಗೆ ‘ಭರವಸೆಯ ಸ್ಟಾರ್’ ಆಗಿದ್ದು ಹೇಗೆ?
HBD Rakshit Shetty: ನಟ ರಕ್ಷಿತ್ ಶೆಟ್ಟಿ ಇಂದು (ಜೂ.6) 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರತಿ ಸಿನಿಮಾದಲ್ಲಿಯೂ ಹೊಸತನ ಪ್ರಯತ್ನಿಸುವ ಅವರು ಅಭಿಮಾನಿಗಳಿಗೆ ಇಷ್ಟವಾಗುತ್ತಾರೆ. ಆ ಮೂಲಕ ಸ್ಯಾಂಡಲ್ವುಡ್ನಲ್ಲಿ ಅವರು ನಟ, ನಿರ್ದೇಶಕ ಹಾಗೂ ನಿರ್ಮಾಪಕನಾಗಿ ಭರವಸೆ ಮೂಡಿಸಿದ್ದಾರೆ.
ಕನ್ನಡದ ಸಿನಿಪ್ರಿಯರ ಪಾಲಿಗೆ ‘ಸಿಂಪಲ್ ಸ್ಟಾರ್’ ಆಗಿರುವ ರಕ್ಷಿತ್ ಶೆಟ್ಟಿ ಅವರಿಗೆ ಇಂದು (ಜೂ.6) ಹುಟ್ಟುಹಬ್ಬ. ರಕ್ಷಿತ್ ಶೆಟ್ಟಿ ಅವರಿಗೆ ಎಲ್ಲ ವಯೋಮಾನದ ಪ್ರೇಕ್ಷಕರಿದ್ದಾರೆ. ಚಿತ್ರರಂಗದಲ್ಲಿ ಅವರದ್ದು ಬಹುಮುಖ ಪ್ರತಿಭೆ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿಯೂ ಜನರಿಗೆ ರಕ್ಷಿತ್ ಇಷ್ಟವಾಗಿದ್ದಾರೆ. ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾದಿಂದ ಅವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿತು. ಆ ಬಳಿಕ ಅವರನ್ನು ಜನರು ‘ಸಿಂಪಲ್ ಸ್ಟಾರ್’ ಎಂದೇ ಕರೆಯಲು ಆರಂಭಿಸಿದರು. ಆದರೆ ಸಿನಿಮಾ ಮತ್ತು ಪಾತ್ರಗಳ ಆಯ್ಕೆಯ ಕಾರಣದಿಂದ ಅವರು ಸಿಂಪಲ್ ಎಂಬುದಕ್ಕಿಂತಲೂ ಭರವಸೆಯ ಸ್ಟಾರ್ ಆಗಿ ಹೊರಹೊಮ್ಮಿದರು.
2010ರಲ್ಲಿ ‘ನಮ್ ಏರಿಯಾಲ್ ಒಂದಿನ’ ಹಾಗೂ 2012ರಲ್ಲಿ ‘ತುಘಲಕ್’ ಸಿನಿಮಾಗಳಲ್ಲಿ ನಟಿಸಿದರೂ ಕೂಡ ರಕ್ಷಿತ್ಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು ಮಾತ್ರ 2013ರ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಚಿತ್ರ. ಆ ಸಿನಿಮಾದಿಂದ ಕರುನಾಡಿನಲ್ಲಿ ರಕ್ಷಿತ್ ಮನೆಮಾತಾದರು. ಹಾಗಂತ ಅವರು ಅದೇ ಪ್ರಕಾರದ ಸಿನಿಮಾಗೆ ಗಂಟು ಬೀಳಲಿಲ್ಲ. ಮರುವರ್ಷವೇ ‘ಉಳಿದವರು ಕಂಡಂತೆ’ ಸಿನಿಮಾ ಮೂಲಕ ಅವರು ಪ್ರೇಕ್ಷಕರಿಗೆ ಅಚ್ಚರಿ ನೀಡಿದರು. ಕಾರಣಾಂತರಗಳಿಂದ ಚಿತ್ರಮಂದಿರದಲ್ಲಿ ‘ಉಳಿದವರು ಕಂಡಂತೆ’ ಉತ್ತಮ ಪ್ರದರ್ಶನ ಕಾಣದಿದ್ದರೂ ವಿಮರ್ಶೆಯ ದೃಷ್ಟಿಯಿಂದ ಅತ್ಯುತ್ತಮ ಸಿನಿಮಾ ಎನಿಸಿಕೊಂಡಿತು. ರಕ್ಷಿತ್ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರಕ್ಕೆ ಇಂದಿಗೂ ವಿಶೇಷ ಸ್ಥಾನ ಇದೆ. ನಂತರ ಬಂದ ವಾಸ್ತು ಪ್ರಕಾರ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಮತ್ತೆ ಬದಲಾದರು!
ಹೌದು, ರಕ್ಷಿತ್ ಎಂದಿಗೂ ಒಂದೇ ಬಗೆಯ ಇಮೇಜ್ಗೆ ಅಂಟಿಕೊಂಡವರಲ್ಲ. ಅಭಿಮಾನಿಗಳು ಏನನ್ನು ಊಹಿಸುತ್ತಾರೋ ಅದಕ್ಕಿಂತಲೂ ಭಿನ್ನವಾಗಿಯೇ ಅವರು ಪರದೆ ಮೇಲೆ ಕಾಣಿಸಿಕೊಳ್ಳುತ್ತಾರೆ. ತಮ್ಮ ಈ ಮೊದಲಿನ ಎಲ್ಲ ಸಿನಿಮಾಗಳಿಗಿಂತಲೂ ‘ವಾಸ್ತು ಪ್ರಕಾರ’ ಸಿನಿಮಾದಲ್ಲಿ ಅವರು ಕಾಣಿಸಿಕೊಂಡ ರೀತಿಯೇ ಬೇರೆಯಾಗಿತ್ತು. ಸೀದಾಸಾದಾ ರೊಮ್ಯಾಂಟಿಕ್ ಹೀರೋ ಆಗಿ ಅವರು ಕಾಣಿಸಿಕೊಂಡರು. ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗೆಲ್ಲಲಿಲ್ಲ.
ಮರುವರ್ಷ, ಅಂದರೆ 2016 ರಕ್ಷಿತ್ ಶೆಟ್ಟಿ ಪಾಲಿಗೆ ವಿಶೇಷ ವರ್ಷವಾಗಿತ್ತು. 2016ರಲ್ಲಿ ಜನವರಿಯಲ್ಲಿ ತೆರೆಕಂಡ ‘ರಿಕ್ಕಿ’ ಸಿನಿಮಾದಲ್ಲಿ ಇದ್ದ ರಕ್ಷಿತ್ ಶೆಟ್ಟಿ ಪಾತ್ರಕ್ಕೂ ಜೂನ್ನಲ್ಲಿ ಬಿಡುಗಡೆಯಾದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿನ ಅವರ ಪಾತ್ರಕ್ಕೂ ತುಂಬ ವ್ಯತ್ಯಾಸವಿತ್ತು. ಮೇಕಿಂಗ್ ಮತ್ತು ಕಥೆಯ ವಿಚಾರದಲ್ಲಿ ತುಂಬ ಅಸಂಪ್ರದಾಯಕವಾಗಿದ್ದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರ ರಕ್ಷಿತ್ ಅವರ ಕೈ ಹಿಡಿಯಿತು. ತಂದೆ-ಮಗನ ಬಾಂಧವ್ಯವನ್ನು ಕಟ್ಟಿಕೊಡುವ ಆ ಚಿತ್ರಕ್ಕೆ ಜನಮೆಚ್ಚುಗೆ ಸಿಕ್ಕಿತು. ಹಾಗಂತ ಅದೇ ಪ್ರಕಾರದ ಚಿತ್ರವನ್ನೇ ರಕ್ಷಿತ್ ಮತ್ತೆ ಮತ್ತೆ ಆಯ್ಕೆ ಮಾಡಿಕೊಳ್ಳಲಿಲ್ಲ. ನಂತರ ‘ಕಿರಿಕ್ ಪಾರ್ಟಿ’ ಸಿನಿಮಾದಿಂದ ಅವರ ಇಮೇಜ್ ಸಂಪೂರ್ಣ ಬದಲಾಯಿತು.
2016ರ ಡಿಸೆಂಬರ್ನಲ್ಲಿ ರಿಲೀಸ್ ಆದ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಕರ್ಣ ಎಂಬ ಪಾತ್ರ ನಿಭಾಯಿಸಿ ಎರಡು ಶೇಡ್ನಲ್ಲಿ ಕಾಣಿಸಿಕೊಂಡರು. ಆ ಎರಡೂ ಶೇಡ್ ಜನರಿಗೆ ಇಷ್ಟವಾಯಿತು. ಸಿನಿಮಾ ಸೂಪರ್ ಹಿಟ್ ಆಯಿತು. ಆಗಲೂ ರಕ್ಷಿತ್ ಶೆಟ್ಟಿ ನಿರ್ಧಾರ ಸ್ಪಷ್ಟವಾಗಿಯೇ ಇತ್ತು. ಕಾಲೇಜಿನ ತರ್ಲೆ, ಹುಡುಗಾಟದ ಲವ್ಸ್ಟೋರಿಗಳನ್ನೆಲ್ಲ ಬದಿಗಿಟ್ಟು ಮುಂದಿನ ಸಿನಿಮಾ ‘ಅವನೇ ಶ್ರೀಮನ್ನಾರಾಯಣ’ದಲ್ಲಿ ರೆಟ್ರೋ ಕಥೆ ಹೇಳಲು ಪ್ರಯತ್ನಿಸಿದರು.
ಸದ್ಯ ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಸಿನಿಮಾ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ಮನುಷ್ಯ ಮತ್ತು ಶ್ವಾನದ ನಡುವೆ ಇರುವ ಒಂದು ಎಮೋಷನಲ್ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ಭಿನ್ನವಾದದೊಂದು ಲವ್ ಸ್ಟೋರಿ ಹೇಳುವ ಭರವಸೆ ನೀಡಿದ್ದಾರೆ. ಹೀಗೆ ‘ಸಿಂಪಲ್ ಸ್ಟಾರ್’ ಆಗಿದ್ದರೂ ಕೂಡ ಸಿನಿಮಾ ಆಯ್ಕೆಗಳ ವಿಚಾರದಲ್ಲಿ ತಾವು ‘ಸ್ಪೆಷಲ್’ ಎಂಬುದನ್ನು ರಕ್ಷಿತ್ ಶೆಟ್ಟಿ ಸಾಬೀತು ಮಾಡುತ್ತಲೇ ಬಂದಿದ್ದಾರೆ. ಇಂದು ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರಿಂದ ಹುಟ್ಟುಹಬ್ಬದ ಶುಭಾಶಯಗಳ ಮಳೆ ಸುರಿಸಲಾಗುತ್ತಿದೆ.
ಇದನ್ನೂ ಓದಿ:
ರಕ್ಷಿತ್ ಶೆಟ್ಟಿ ಜನ್ಮದಿನ; ‘777 ಚಾರ್ಲಿ’ ಟೀಸರ್ ರಿಲೀಸ್ ಮಾಡೋಕೆ ಬಂದ ಪರಭಾಷೆಯ ಸ್ಟಾರ್ಗಳು
HBD Rakshit Shetty: ರಕ್ಷಿತ್ ಶೆಟ್ಟಿಗೆ ಜನ್ಮದಿನದ ಸಂಭ್ರಮ; ಹೇಗಿತ್ತು ಗೊತ್ತಾ ಅವರ ಆರಂಭದ ದಿನದ ಸ್ಟ್ರಗಲ್?