HBD Rakshit Shetty: ರಕ್ಷಿತ್ ಶೆಟ್ಟಿಗೆ ಜನ್ಮದಿನದ ಸಂಭ್ರಮ; ಹೇಗಿತ್ತು ಗೊತ್ತಾ ಅವರ ಆರಂಭದ ದಿನದ ಸ್ಟ್ರಗಲ್?
Rakshit Shetty Birthday: ರಕ್ಷಿತ್ ಶೆಟ್ಟಿ ಮೂಲತಃ ಉಡುಪಿಯವರು. ಚಿತ್ರರಂಗದಲ್ಲಿ ಸಾಧಿಸಬೇಕು ಎಂದು ಕನಸು ಕಂಡು ಬೆಂಗಳೂರಿಗೆ ಬಂದ ಅವರಿಗೆ ಇಲ್ಲಿ ಯಾರ ಪರಿಚಯವೂ ಇರಲಿಲ್ಲ.
ರಕ್ಷಿತ್ ಶೆಟ್ಟಿ ಇಂದು (ಜೂನ್ 6) 38ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ರಕ್ಷಿತ್ ಶೆಟ್ಟಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ರಕ್ಷಿತ್ ಜನ್ಮದಿನದ ಅಂಗವಾಗಿ ಅವರ ನಟನೆಯ ‘777 ಚಾರ್ಲಿ’ ಚಿತ್ರದ ಟೀಸರ್ ಕೂಡ ರಿಲೀಸ್ ಆಗುತ್ತಿರುವುದು ವಿಶೇಷ. ಕೊವಿಡ್ ನಿಯಂತ್ರಣಕ್ಕೆ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಈ ಕಾರಣಕ್ಕೆ ಅಭಿಮಾನಿಗಳು ಕೇವಲ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಾಚರಣೆ ಮಾಡಿಕೊಳ್ಳುವುದು ಬಿಟ್ಟರೆ ಬೇರೆ ದಾರಿ ಇಲ್ಲ.
ರಕ್ಷಿತ್ ಶೆಟ್ಟಿ ಮೂಲತಃ ಉಡುಪಿಯವರು. ಚಿತ್ರರಂಗದಲ್ಲಿ ಸಾಧಿಸಬೇಕು ಎಂದು ಕನಸು ಕಂಡು ಬೆಂಗಳೂರಿಗೆ ಬಂದ ಅವರಿಗೆ ಇಲ್ಲಿ ಯಾರ ಪರಿಚಯವೂ ಇರಲಿಲ್ಲ. ಆರಂಭದಲ್ಲಿ ಕಿರುಚಿತ್ರಗಳನ್ನು ಅವರು ಮಾಡುತ್ತಿದ್ದರು. ಅವೆಲ್ಲವೂ ಸಿದ್ಧಗೊಳ್ಳುತ್ತಿದ್ದು ಜೀರೋ ಬಜೆಟ್ನಲ್ಲಿ. ನಂತರ ಅವರು 5 ಸಾವಿರ ರೂಪಾಯಿ ಇಟ್ಟುಕೊಂಡು ಶಾರ್ಟ್ ಮೂವೀ ಮಾಡಿದ್ದರು. ನಂತರ 30 ಸಾವಿರ ಹಾಕಿ ಕಿರುಚಿತ್ರ ಸಿದ್ಧಪಡಿಸಿದ್ದರು.
‘ನಮ್ ಏರಿಯಾಲ್ ಒಂದಿನ’ ಚಿತ್ರದ ಮೂಲಕ ರಕ್ಷಿತ್ ಬಣ್ಣದ ಬದುಕು ಆರಂಭಿಸಿದರು. ನಂತರ ಅವರು ನಟಿಸಿದ್ದು, ‘ತುಘಲಕ್’ ಚಿತ್ರದಲ್ಲಿ. ಈ ಸಿನಿಮಾ ಕೂಡ ಕೈ ಹಿಡಿಯಲಿಲ್ಲ. ನಂತರ ರಕ್ಷಿತ್ಗೆ ಹಿಟ್ ಕೊಟ್ಟಿದ್ದು, ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾ. ಈ ಚಿತ್ರದ ಮೂಲಕ ಅವರು ಹೆಚ್ಚು ಪ್ರಚಲಿತಕ್ಕೆ ಬಂದರು.
ರಕ್ಷಿತ್ ನಿರ್ದೇಶಿಸಿ ನಟಿಸಿದ ‘ಉಳಿದವರು ಕಂಡಂತೆ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ ಮಾಡಲಿಲ್ಲವಾದರೂ ವಿಮರ್ಶೆಯಲ್ಲಿ ಗೆದ್ದಿತ್ತು. ‘ವಾಸ್ತು ಪ್ರಕಾರ’ ಸಿನಿಮಾ ಸೋತ ನಂತರದಲ್ಲಿ ‘ರಿಕ್ಕಿ’ ಚಿತ್ರ ಒಂದು ಮಟ್ಟಕ್ಕೆ ಹಿಟ್ ಆಯಿತು. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು.
2016ರಲ್ಲಿ ತೆರೆಗೆ ಬಂದ ‘ಕಿರಿಕ್ ಪಾರ್ಟಿ’ ರಕ್ಷಿತ್ ಸಿನಿ ಬದುಕಿನ ಅತಿ ದೊಡ್ಡ ಹಿಟ್ ಸಿನಿಮಾ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲೂ ಒಳ್ಳೆಯ ಕಲೆಕ್ಷನ್ ಮಾಡಿತು. ಬಹು ನಿರೀಕ್ಷಿತ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಅಂದುಕೊಂಡ ಮಟ್ಟದಲ್ಲಿ ಯಶಸ್ಸು ಪಡೆಯಲಿಲ್ಲ.
ಸದ್ಯ, ರಕ್ಷಿತ್ ‘777 ಚಾರ್ಲಿ’ ಹಾಗೂ ‘ಸಪ್ತಸಾಗರದಾಚೆ’ ಎಲ್ಲೋ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಎರಡೂ ಚಿತ್ರಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಂದು ರಿಲೀಸ್ ಆಗುತ್ತಿರುವ ‘777 ಚಾರ್ಲಿ’ ಸಿನಿಮಾ ಟೀಸರ್ ಹೇಗಿರಲಿದೆ ಎನ್ನುವ ಕುತೂಹಲವೂ ಹೆಚ್ಚಿದೆ.
ಇದನ್ನೂ ಓದಿ:
ರಕ್ಷಿತ್ ಶೆಟ್ಟಿ ಜನ್ಮದಿನ; ‘777 ಚಾರ್ಲಿ’ ಟೀಸರ್ ರಿಲೀಸ್ ಮಾಡೋಕೆ ಬಂದ ಪರಭಾಷೆಯ ಸ್ಟಾರ್ಗಳು