ಸ್ಯಾಂಡಲ್ವುಡ್ನ ಬನಾರಸ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಎಂಟ್ರಿ ಕೊಡಲು ಮುಂದಾಗಿರುವ ಶಾಸಕ ಜಮೀರ್ ಅಹ್ಮದ್ (Zameer Ahmed) ಪುತ್ರ ಝೈದ್ ಖಾನ್ಗೆ (Zaid Khan) ಆರಂಭದಲ್ಲೇ ವಿಘ್ನ ಎದುರಾಗಿದೆ. ಇನ್ನೇನು ಚಿತ್ರ ಬಿಡುಗಡೆಯಾಗಲಿದೆ ಎನ್ನುವಷ್ಟರಲ್ಲಿ ಇದೀಗ ಚಿತ್ರಕ್ಕೆ ಹಿಂದೂಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಅಭಿಯಾನವನ್ನು ಸಹ ಆರಂಭಿಸಿದ್ದಾರೆ. ಇಂತಹದೊಂದು ಬಹಿಷ್ಕಾರದ ಅಭಿಯಾನದ ಬಗ್ಗೆ ಯುವ ನಟ ಝೈದ್ ಖಾನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಝೈದ್, ಹಿಂದೂ ಸಂಘಟನೆಗಳು ಯಾಕೆ ವಿರೋಧ ಮಾಡುತ್ತಿವೆ ಅಂತ ಗೊತ್ತಿಲ್ಲ. ನನಗೂ ಅವರ ವಿರೋಧಕ್ಕೂ ಸಂಬಂಧವಿಲ್ಲ. ನಾನಾಯ್ತು, ನಮ್ಮ ಚಿತ್ರದೋದ್ಯಮ ಆಯ್ತು ಅಂತ ಇದ್ದೀನಿ. ಇದಾಗ್ಯೂ ನನ್ನನು ಏಕೆ ವಿರೋಧಿಸುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಝೈದ್ ಪ್ರತಿಕ್ರಿಯಿಸಿದ್ದಾರೆ.
ನನ್ನನ್ನು ವಿರೋಧಿಸಲು ಕಾರಣವೇನು? ಎಂಬುದೇ ಗೊತ್ತಾಗುತ್ತಿಲ್ಲ. ನಮ್ಮ ತಂದೆ ಜಮೀರ್ ಅಹಮದ್ ಅನ್ನೋ ಕಾರಣಕ್ಕಾಗಿ ವಿರೋಧಿಸುತ್ತಿದ್ದರೆ, ಅವರ ಕ್ಷೇತ್ರಕ್ಕೂ ನನಗೂ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ. ಇನ್ನು ಏನೇ ವಿರೋಧ ಬಂದರೂ ಎರಡೇ ಪರಿಣಾಮ ಆಗೋದು. ಒಂದಾದರೆ ಚಿತ್ರ ಗೆಲ್ಲಬಹುದು ಅಥವಾ ಸೋಲಬಹುದು ಅಷ್ಟೇ. ಹೀಗಾಗಿ ಅನಗತ್ಯವಾಗಿ ವಿರೋಧ ಮಾಡುತ್ತಿರುವುದು ಸರಿಯಲ್ಲ ಎಂದು ಝೈದ್ ಖಾನ್ ಹೇಳಿದ್ದಾರೆ.
ಸಾಕಷ್ಟು ಕನಸುಗಳೊಂದಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಝೈದ್ ಖಾನ್ ಅವರ ಚೊಚ್ಚಲ ಸಿನಿಮಾಗೆ ಬೆಲ್ ಬಾಟಂ ಚಿತ್ರ ಖ್ಯಾತಿಯ ನಿರ್ದೇಶಕ ಜಯತೀರ್ಥ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಸೋನಲ್ ಮಾಂಥೆರೋ ನಟಿಸಿದ್ದಾರೆ. ನವೆಂಬರ್ 4ರಂದು ‘ಬನಾರಸ್’ ಸಿನಿಮಾ ಬಿಡುಗಡೆ ಆಗಲಿದ್ದು, ಇದರ ಬೆನ್ನಲ್ಲೇ ಈ ಚಿತ್ರವನ್ನು ಬಹಿಷ್ಕರಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಮಾಡಲಾಗುತ್ತಿದೆ.
ಹಿಂದೂ ಕಾರ್ಯಕರ್ತರು #BoycottBanaras ಎಂದು ಟ್ರೆಂಡ್ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಆಗಿರುವುದು ಝೈದ್ ಖಾನ್ ಅವರ ತಂದೆ ಜಮೀರ್ ಅಹ್ಮದ್ ಅವರ ರಾಜಕೀಯದ ನಿಲುವುಗಳು. ಆದರೆ ತಂದೆಯ ರಾಜಕೀಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ನನ್ನ ಚಿತ್ರವನ್ನು ವಿರೋಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ನನ್ನ ಜೊತೆ ಅನೇಕರು ಈ ಚಿತ್ರದೊಂದಿಗೆ ಕೆಲಸ ಮಾಡಿದ್ದಾರೆ. ಇದೀಗ ಕೇವಲ ನನ್ನನ್ನು ತಂದೆಯ ಕಾರಣಕ್ಕಾಗಿ ವಿರೋಧಿಸುತ್ತಿರುವುದು ಯಾಕೆ ಎಂದು ಗೊತ್ತಾಗುತ್ತಿಲ್ಲ ಎಂದು ಝೈದ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ಹೊಸ ಅಲೆಯೆಬ್ಬಿಸಿರುವ ಬನಾರಸ್ ಚಿತ್ರವು ನವೆಂಬರ್ 4 ರಂದು ಬಿಡುಗಡೆಯಾಗಲಿದೆ. ಈ ಚಿತ್ರವು ಕನ್ನಡ, ತಮಿಳು, ಮಲಯಾಳಂ, ತೆಲುಗು ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದು ವಿಶೇಷ.