ಕಿರುತೆರೆ ಮತ್ತು ಹಿರಿತೆರೆ ಎರಡಲ್ಲೂ ದಿಲೀಪ್ ರಾಜ್ (Dileep Raj) ಫೇಮಸ್. ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಪ್ರಸ್ತುತ ಪ್ರಸಾರ ಆಗುತ್ತಿರುವ ‘ಹಿಟ್ಲರ್ ಕಲ್ಯಾಣ’ (Hitler Kalyana) ಸೀರಿಯಲ್ನಲ್ಲಿ ಅವರಿಗೆ ಮುಖ್ಯ ಪಾತ್ರವಿದೆ. ಅವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಧಾರಾವಾಹಿ ಜೊತೆಗೆ ದಿಲೀಪ್ ರಾಜ್ ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ‘ಮಹಾನ್ ಕಲಾವಿದ’ (Mahan Kalavida) ಎಂದು ಶೀರ್ಷಿಕೆ ಇಡಲಾಗಿದೆ. ಬಹಳ ದಿನಗಳ ನಂತರ ಮತ್ತೆ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಅವರಿಗೆ ಖುಷಿ ಇದೆ. ‘ನಿರ್ದೇಶಕ ಅಭಯ್ ಚಂದ್ರ ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ. ಕಲಾವಿದ ಮಾಡುವ ನಟನೆ ಮೊದಲು ನಿರ್ದೇಶಕರಿಗೆ ಮೆಚ್ಚುಗೆ ಆಗಬೇಕು. ನನ್ನ ನಟನೆ ಬಗ್ಗೆ ನಿರ್ದೇಶಕರು ಹೇಳಬೇಕು. ಈ ಚಿತ್ರದ ಮೇಲೆ ನನಗೆ ಕಾತರ ಇದೆ’ ಎಂದು ದಿಲೀಪ್ ರಾಜ್ ಹೇಳಿದ್ದಾರೆ.
ಇತ್ತೀಚೆಗೆ ‘ಮಹಾನ್ ಕಲಾವಿದ’ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಹಿರಿಯ ಪತ್ರಕರ್ತರಾದ ದಿ. ಸುರೇಶ್ ಚಂದ್ರ ಅವರ ಪುತ್ರನಾದ ಅಭಯ್ ಚಂದ್ರ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ಸಂಗೀತ ಕೂಡ ನೀಡಿದ್ದಾರೆ. ಇದು ಅವರ ಎರಡನೇ ಸಿನಿಮಾ. ಚಿತ್ರದ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
‘ಮೊದಲಿಗೆ ಈ ಕಥೆಯನ್ನು ಸಿದ್ಧಪಡಿಸಿಕೊಂಡು ಕಲಾವಿದ ಅಂತ ಹೆಸರು ಇಟ್ಟಿದ್ದೆ. ಈ ವಿಷಯವನ್ನು ರವಿಚಂದ್ರನ್ ಅವರಿಗೆ ತಿಳಿಸಿದಾಗ ಬರೀ ‘ಕಲಾವಿದ’ ಅಂತ ಬೇಡ, ಏನಾದರೂ ಸೇರಿಸು ಎಂದು ಸಲಹೆ ನೀಡಿದರು. ಆಗ ‘ಮಹಾನ್ ಕಲಾವಿದ’ ಎಂದು ಶೀರ್ಷಿಕೆ ಬದಲಾಯಿಸಿದೆವು. ಕಲಾವಿದನ ಬದುಕು ಬವಣೆಗಳನ್ನು ತೋರಿಸುವ ಕಥಾಹಂದರ ಈ ಚಿತ್ರದಲ್ಲಿ ಇದೆ. ನಾನು ಈ ಪಾತ್ರ ಬರೆಯುವಾಗ ದಿಲೀಪ್ ರಾಜ್ ಅವರೇ ಸೂಕ್ತ ಎನಿಸಿತು. ಅವರು ಕೂಡ ಒಪ್ಪಿಕೊಂಡರು’ ಎಂದಿದ್ದಾರೆ ಅಭಯ್ ಚಂದ್ರ.
‘ಮಹಾನ್ ಕಲಾವಿದ’ ಸಿನಿಮಾದಲ್ಲಿ ಇಬ್ಬರು ನಾಯಕಿಯರು. ಜಾಹ್ನವಿ ರಾಯಲ ಹಾಗೂ ಪಲ್ಲವಿ ರಾಜು ಆ ಪಾತ್ರಗಳನ್ನು ನಿಭಾಯಿಸಿದ್ದಾರೆ. ದಿಲೀಪ್ ರಾಜ್ ಅವರ ಪತ್ನಿ ಪಾತ್ರದಲ್ಲಿ ಜಾಹ್ನವಿ ರಾಯಲ ನಟಿಸುತ್ತಿದ್ದಾರೆ. ತಮಗೂ ಒಳ್ಳೆಯ ಪಾತ್ರ ಸಿಕ್ಕಿದೆ ಎಂಬ ಖುಷಿ ಪಲ್ಲವಿ ರಾಜು ಅವರಿಗಿದೆ.
ಮೂಲತಃ ಹಾಸನದವರಾದ ಭರತ್ ಬಿ. ಗೌಡ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಅವರು ಮಂಡ್ಯ ನಿವಾಸಿ. ಕಿರಣ್ ಗಜ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:54 pm, Sat, 17 September 22